ಜೈಲಿನಿಂದ ಪರಾರಿಯಾಗಿದ್ದ ಖೈದಿಯಿಂದ ಮತ್ತೆ ಕಳ್ಳತನಕ್ಕೆ ಯತ್ನ, ಅರೆಸ್ಟ್

Public TV
1 Min Read

ಚಿಕ್ಕೋಡಿ/ಬೆಳಗಾವಿ: ಜೈಲಿನ ಶೌಚಾಲಯದ ಸರಳು ಮುರಿದು ಪರಾರಿಯಾಗಿದ್ದ ಕಳ್ಳ ಮತ್ತೆ ಕಳ್ಳತನ ಮಾಡಲು ಯತ್ನಿಸಿ ಪೊಲೀಸರ ಅತಿಥಿಯಾಗಿದ್ದಾನೆ.

ಬೆಳಗಾವಿ ಜಿಲ್ಲೆ ಹುಕ್ಕೇರಿಯ ಮನೆಯಲ್ಲಿ ಕಳ್ಳತನ ಮಾಡುವಾಗ ಸಿಕ್ಕಿಬಿದ್ದಿದ್ದು, ಬಂಧಿತ ಆರೋಪಿಗಳನ್ನು ಗೋಕಾಕ್ ತಾಲೂಕಿನ ಪರಶುರಾಮ ಅಲಿಯಾಸ್ ಪಾರಸ್ ಅಮಟೇಕರ(22) ಹಾಗೂ ಚಿಕ್ಕೋಡಿ ತಾಲೂಕಿನ ಕಬ್ಬೂರು ಗ್ರಾಮದ ಅನ್ವರ ಖಾಜಿಸಾಬ ಮುಲ್ತಾನಿ ಎಂದು ಗುರುತಿಸಲಾಗಿದೆ. ಬಂಧಿತರಿಂದ 1.33 ಲಕ್ಷ ರೂ. ಬೆಲೆ ಬಾಳುವ ಚಿನ್ನದ ಆಭರಣಗಳು ಹಾಗೂ 12 ಸಾವಿರ ರೂ. ಬೆಲೆ ಬಾಳುವ ಬೆಳ್ಳಿ ಆಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ.

ಆರೋಪಿ ಪರಶುರಾಮ್ ಆಗಸ್ಟ್ 22, 2019ರಂದು ಹುಕ್ಕೇರಿ ಸಬ್ ಜೈಲಿನ ಶೌಚಾಲಯದ ಕಿಟಕಿಯ ಸರಳು ಮುರಿದು ಪರಾರಿಯಾಗಿದ್ದ. ಪೊಲೀಸರು ಈತನಿಗಾಗಿ ಹುಡುಕಾಟ ನಡೆಸುತ್ತಿದ್ದರು. ಆದರೆ ಮತ್ತೆ ಕಳ್ಳತನಕ್ಕೆ ಯತ್ನಿಸಿ ತಾನಾಗಿಯೇ ಸಿಕ್ಕಿಹಾಕಿಕೊಂಡಿದ್ದಾನೆ.

ಜಿಲ್ಲೆಯ ಹುಕ್ಕೇರಿ ಪಟ್ಟಣದ ಬೈಪಾಸ್ ರಸ್ತೆಯ ವೀರಪ್ಪ ಹಳದಿ ಅವರು ಮನೆಗೆ ಬೀಗ ಹಾಕಿ ಊರಿಗೆ ತೆರಳಿದ ಸಂದರ್ಭದಲ್ಲಿ ಮನೆ ಕಳ್ಳತನ ಆಗಿತ್ತು. ಈ ಕುರಿತು ವೀರಪ್ಪ ಅವರು ಹುಕ್ಕೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಪ್ರಕರಣದ ಬೆನ್ನತ್ತಿದ ಪೊಲೀಸರು ಕಳ್ಳರ ಬಂಧನಕ್ಕೆ ತನಿಖೆ ಆರಂಭಿಸಿದ್ದರು. ಬೆಳಗಿನ ಜಾವ 4 ಗಂಟೆಗೆ ಅನುಮಾನಾಸ್ಪದವಾಗಿ ಅಲೆದಾಡುತ್ತಿದ್ದ ಇಬ್ಬರನ್ನು ರಕ್ಷಿ ಗ್ರಾಮದ ಬಳಿ ಹಿಡಿದು ವಿಚಾರಿಸಿದಾಗ ಅವರ ಬಳಿ ಕಬ್ಬಿಣದ ರಾಡ್ ಪತ್ತೆಯಾಗಿದೆ. ಈ ಹಿನ್ನೆಲೆ ಇಬ್ಬರನ್ನೂ ಠಾಣೆಗೆ ಕರೆತಂದು ವಿಚಾರಣೆ ನಡೆಸಿದಾಗ ಕಳ್ಳರ ಕರಾಮತ್ತು ಬಯಲಾಗಿದೆ.

ಹುಕ್ಕೇರಿ ಪಿಎಸ್‍ಐ ಶಿವಾನಂದ ಗುಡಗನಟ್ಟಿ, ಸಿಪಿಐ ಗುರುರಾಜ ಕಲ್ಯಾಣಶೆಟ್ಟಿ ಹಾಗೂ ಸಿಬ್ಬಂದಿಗಳಾದ ಎಸ್ ಎಮ್ ಚಿಕ್ಕಣ್ಣವರ, ಆರ್.ಆರ.ಗಿಡ್ಡಪ್ಪಗೋಳ ಪ್ರಕರಣ ಬೇಧಿಸಿದ್ದು, ಬೆಳಗಾವಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಅಭಿನಂದಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *