ಮಿಡ್‍ನೈಟ್ ಪಾರ್ಟಿ ಮಾಡಿ ಜಾಲಿ ರೈಡ್? – ಜೊಮಾಟೊ ಡೆಲಿವರಿ ಬಾಯ್ ಜಸ್ಟ್ ಮಿಸ್

By
2 Min Read

ಬೆಂಗಳೂರು: ಕರುಣಾ ಸಾಗರ್ ಮತ್ತು ಸ್ನೇಹಿತರು ಮಿಡ್‍ನೈಟ್ ಪಾರ್ಟಿ ಮಾಡಿ ಜಾಲಿ ರೈಡ್ ಮಾಡಿರಬಹುದು ಎಂಬ ಬಲವಾದ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸುತ್ತಿದಾರೆ.

ಪೊಲೀಸರು ಈ ಅನುಮಾನ ವ್ಯಕ್ತಪಡಿಸಲು ಕಾರಣವಿದೆ. ಬೆಂಗಳೂರು ರಸ್ತೆಗಳಲ್ಲಿ 90-100 ಕಿ.ಮೀ ವೇಗದಲ್ಲಿ ಹೋಗುವುದೇ ಕಷ್ಟ. ಹೀಗಿರುವಾಗ 150 ಕಿ.ಮೀಗಿಂತಲೂ ಹೆಚ್ಚಿನ ವೇಗದಲ್ಲಿ ಕಾರು ಸಂಚರಿಸಿದೆ ಎಂದರೆ ಯಾವುದಾದರೂ ನಶೆ ಇರಲೇಬೇಕು ಎಂಬ ಅನುಮಾನ ಪೊಲೀಸರಿಗೆ ಬಂದಿದೆ. ಹೀಗಾಗಿ ಎಚ್‍ಎಸ್‍ಆರ್ ಲೇಔಟ್, ಕೋರಮಂಗಲ, ಎಂಜಿ ರಸ್ತೆ, ಇಂದಿರಾನಗರದ ಹೋಟೆಲ್, ಪಬ್‍ಗಳ ಪರಿಶೀಲನೆಗೆ ಈಗ ಪೊಲೀಸರು ಮುಂದಾಗಿದ್ದಾರೆ.

ಅಪಘಾತ ಆಗಿರುವ ಕಾರಿನಲ್ಲಿ ಮೂರು ಮೊಬೈಲ್ ಫೋನ್‍ಗಳು ಸಿಕ್ಕಿದೆ. ಮೂರು ಮೊಬೈಲ್ ಫೋನ್‍ಗಳ ಡಿಸ್‍ಪ್ಲೇ ಒಡೆದು ಹೋಗಿದೆ. ಈ ಮೊಬೈಲ್ ಮೂಲಕ ಕಾಲ್ ಲಿಸ್ಟ್ ಆಧರಿಸಿ ಟವರ್ ಲೊಕೇಷನ್ ಮೂಲಕ ಪಾರ್ಟಿ ಸ್ಥಳ ಪತ್ತೆಗೆ ಪ್ರಯತ್ನ ನಡೆಸಲಾಗುತ್ತಿದೆ. ಸುಮಾರು 30 ಪೊಲೀಸರಿಗೆ ಪಾರ್ಟಿ ಜಾಗವನ್ನು ಪತ್ತೆ ಮಾಡಲು ಹಿರಿಯ ಅಧಿಕಾರಿಗಳು ಸೂಚಿಸಿದ್ದಾರೆ.

ಬಹುತೇಕ ಕುಡಿದು ವಾಹನ ಚಲಾಯಿಸಿರುವ ಸಾಧ್ಯತೆಯೇ ಜಾಸ್ತಿ ಇದ್ದು, ಈಗಾಗಲೇ ಮೃತರ ರಕ್ತದ ಮಾದರಿಯನ್ನು ಸಂಗ್ರಹ ಮಾಡಲಾಗಿದೆ. ಒಂದೆರಡು ದಿನದಲ್ಲಿ ವೈದ್ಯಕೀಯ ಪರೀಕ್ಷೆಯ ವರದಿ ಬರುವ ನಿರೀಕ್ಷೆಯಿದೆ. ಇದನ್ನೂ ಓದಿ : ಫೋನ್ ಟ್ಯಾಪಿಂಗ್‍ನಲ್ಲಿ ಐಪಿಎಸ್ ಅಧಿಕಾರಿಗಳ ಫೈಟ್

ಮೃತಪಟ್ಟ 7 ಮಂದಿಯ ಪೈಕಿ ಆಡಿ ಕಾರಿನ ಚಾಲಕನಾಗಿದ್ದ ಕರುಣಾ ಸಾಗರ್ ಮರಣೋತ್ತರ ಪರೀಕ್ಷೆಯ ವರದಿ ಮುಖ್ಯವಾಗುತ್ತದೆ. ನಿರ್ಲಕ್ಷ್ಯದ ಚಾಲನೆ ಎನ್ನುವುದು ಮೇಲ್ನೋಟಕ್ಕೆ ಕಂಡು ಬಂದರೂ ಈ ರೀತಿ ವೇಗದ ಚಾಲನೆಗೆ ಕಾರಣವಾದ ಅಂಶ ಏನು ಎನ್ನುವುದು ತನಿಖೆಗೆ ಬಹಳ ಅಗತ್ಯ. ಹೊಸೂರು ಡಿಎಂಕೆ ಶಾಸಕ ಪ್ರಕಾಶ್ ಅವರ ಪುತ್ರನಾಗಿರುವ ಕಾರಣ ಇದು ಹೈಪ್ರೊಫೈಲ್ ಅಪಘಾತ ಪ್ರಕರಣವೂ ಹೌದು.  ಅಷ್ಟೇ ಅಲ್ಲದೇ ರಾತ್ರಿ ಆ ಸಮಯದಲ್ಲಿ ಎಲ್ಲರೂ ಪ್ರಯಾಣ ಹೊರಟಿದ್ದು ಎಲ್ಲಿಗೆ ಎನ್ನುವುದು ತಿಳಿಯಬೇಕಿದೆ. ಈ ಹಿನ್ನೆಲೆಯಲ್ಲಿ ಪೊಲೀಸರು ಎಲ್ಲ ಆಯಾಮಗಳಿಂದ ತನಿಖೆಗೆ ಇಳಿದಿದ್ದಾರೆ. ಇದನ್ನೂ ಓದಿ :ಪಿ.ವಿ. ಸಿಂಧುಗೆ ಮೆಗಾ ಸ್ಟಾರ್ ಸನ್ಮಾನ

ತಪ್ಪಿತು ಮತ್ತೆರಡು ದುರಂತ:
ಕೋರಮಂಗಲ ಅಪಘಾತ ಪ್ರಕರಣದ ತನಿಖೆ ವೇಳೆ ಮತ್ತೆರಡು ಸ್ಫೋಟಕ ಮಾಹಿತಿ ಬೆಳಕಿಗೆ ಬಂದಿದೆ. ಅಪಘಾತಕ್ಕೂ ಮುನ್ನ ಮತ್ತೆರಡು ದೊಡ್ಡ ದುರಂತಗಳು ನಡೆಯುವ ಸಾಧ್ಯತೆಯಿತ್ತು. ಸೋನಿ ವರ್ಲ್ಡ್ ಸಿಗ್ನಲ್ ಬಳಿ ಜೊಮಾಟೊ ಡೆಲಿವರಿ ಬಾಯಿಗೆ ಕಾರು ಗುದ್ದುವ ಸಾಧ್ಯತೆ ಇತ್ತು. ಇದನ್ನು ನೋಡಿ ಕಾರು ತಡೆಯಲು ಹೋದ ಪೊಲೀಸರ ಮೇಲೆ ಜಿಗ್ ಜ್ಯಾಗ್ ರೀತಿಯಲ್ಲಿ ಕಾರು ಹರಿಸಲು ಯತ್ನ ನಡೆದಿತ್ತು. ಅದೃಷ್ಟವಶಾತ್ ಕಾರಿನ ವೇಗ ನೋಡಿ ರಸ್ತೆಯ ಪಕ್ಕಕ್ಕೆ ಪೊಲೀಸರು ಸರಿದಿದ್ದರು.

Share This Article
Leave a Comment

Leave a Reply

Your email address will not be published. Required fields are marked *