ಅಧಿಕಾರಕ್ಕಾಗಿ ಆನಂದ್ ಸಿಂಗ್ ಡಬಲ್ ಗೇಮ್!

Public TV
2 Min Read

ವಿಶೇಷ ವರದಿ
ಬಳ್ಳಾರಿ/ಬೆಂಗಳೂರು: ಬಳ್ಳಾರಿ ಜಿಲ್ಲೆಯ ಹೊಸಪೇಟೆ ಕ್ಷೇತ್ರದಿಂದ ಕಾಂಗ್ರೆಸ್‍ನಿಂದ ಆಯ್ಕೆಯಾಗಿರುವ ಶಾಸಕ ಆನಂದ್ ಸಿಂಗ್ ಎಲ್ಲಿ ಹೋದ್ರು ಎಂಬ ಪ್ರಶ್ನೆ ಈಗ ಸದ್ಯಕ್ಕೆ ರಾಜ್ಯ ಕಾಂಗ್ರೆಸಿಗರನ್ನು ಕಾಡುತ್ತಿದೆ. ಒಂದು ಕಡೆ ಕಾಂಗ್ರೆಸ್‍ಗೆ ಕೈ ಕೊಡ್ತಾರೆ ಎಂಬ ಸುದ್ದಿ ದಟ್ಟವಾಗಿ ಹರಡಿದ್ದರೂ, ಆನಂದ್ ಸಿಂಗ್ ದಿಢೀರ್ ಮರೆಯಾಗಲು ಕಾರಣವೇನು ಎಂಬ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

ಬಳ್ಳಾರಿಯಿಂದ ಬರುತ್ತಿದ್ದಾರೆ ಎನ್ನಲಾದ ಆನಂದ್ ಸಿಂಗ್ ಅವರನ್ನು ದೇವನಹಳ್ಳಿಯಲ್ಲಿರುವ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಕರೆದುಕೊಂಡು ಬರಲು ಹೋಗಿದ್ದ ಕಾಂಗ್ರೆಸ್ ಶಾಸಕರಾದ ಜಮೀರ್ ಅಹಮದ್ ಹಾಗೂ ನಾಗೇಂದ್ರ ಬರಿಗೈಲಿ ಬೆಂಗಳೂರಿನ ಕೆಪಿಸಿಸಿ ಕಚೇರಿಗೆ ವಾಪಸ್ ಆಗಿದ್ದಾರೆ. ಬೆಳಗ್ಗೆಯಿಂದಲೇ ಆನಂದ್ ಸಿಂಗ್ ಕಾಂಗ್ರೆಸ್ ನಾಯಕರ ಸಂಪರ್ಕಕ್ಕೆ ಸಿಗುತ್ತಿಲ್ಲ. ಸಂಜೆ ವೇಳೆಗೆ ಆನಂದ್ ಸಿಂಗ್ ಬೆಂಗಳೂರಿಗೆ ಬರುತ್ತಾರೆ ಎಂದು ಕೈ ನಾಯಕರು ಹೇಳಿದ್ದರೂ ಇಂದು ರಾತ್ರಿ 7.00 ಗಂಟೆಯವರೆಗೂ ಅವರು ಎಲ್ಲೂ ಕಾಣಿಸಿಕೊಂಡಿಲ್ಲ.

ಪಬ್ಲಿಕ್ ಟಿವಿಗೆ ಸಿಕ್ಕ ಖಚಿತ ಮಾಹಿತಿ ಪ್ರಕಾರ ಇಂದು ಬೆಳಗ್ಗೆ ಆನಂದ್ ಸಿಂಗ್ ಬಳ್ಳಾರಿಯಲ್ಲೇ ಇದ್ದರು. ಸೂರ್ಯನ ಬಿಸಿಲು ನೆತ್ತಿಗೇರುತ್ತಿದ್ದಂತೆಯೇ ಆನಂದ್ ಸಿಂಗ್ ಹಾಗೂ ನಾಗೇಂದ್ರ ಬಳ್ಳಾರಿಯಲ್ಲೇ ಪರಸ್ಪರ ಭೇಟಿಯಾಗಿದ್ದಾರೆ. ಈ ಭೇಟಿಯ ವೇಳೆ ಇಬ್ಬರೂ ಪರಸ್ಪರ ಮಾತನಾಡಿಕೊಂಡೇ ಬೆಂಗಳೂರಿಗೆ ಹೊರಟಿದ್ದಾರೆ. ಸದ್ಯ ಬೆಂಗಳೂರಿನಲ್ಲೇ ಆನಂದ್ ಸಿಂಗ್ ಬೀಡುಬಿಟ್ಟಿದ್ದಾರೆ ಎಂಬ ಖಚಿತ ಮಾಹಿತಿಯೂ ಇದೆ. ಆದರೆ ಆನಂದ್ ಸಿಂಗ್ ಇನ್ನೂ ಯಾಕೆ ಕಾಂಗ್ರೆಸ್ ಪಾಳಯದಲ್ಲಿ ಕಾಣಿಸಿಕೊಂಡಿಲ್ಲ ಎಂಬುದನ್ನು ಕೆದಕುತ್ತಾ ಹೋದಾಗ ರೋಚಕ ಮಾಹಿತಿ ಸಿಕ್ಕಿದೆ.

ಅಧಿಕಾರಕ್ಕಾಗಿ ಸರ್ಕಸ್!: ಸದ್ಯದ ಮಾಹಿತಿ ಪ್ರಕಾರ ಆನಂದ್ ಸಿಂಗ್ ಬಿಜೆಪಿ ಬೆಂಬಲಿಸುವ ಸಾಧ್ಯತೆ ತೀರಾ ಕಡಿಮೆ. ಆದರೆ ಆನಂದ್ ಸಿಂಗ್‍ಗೆ ಈಗ ಸಚಿವ ಸ್ಥಾನದ ನಿರೀಕ್ಷೆಯಲ್ಲಿದ್ದಾರೆ. ಆದರೆ ರಾಜ್ಯ ಕಾಂಗ್ರೆಸ್ ನಾಯಕರು ಈ ಬೇಡಿಕೆಗೆ ನೀರೆರೆಯುವ ಯಾವುದೇ ಲಕ್ಷಣ ಕಾಣಿಸುತ್ತಿಲ್ಲ. ಬಳ್ಳಾರಿಯಲ್ಲಿರುವ ಪಕ್ಷದ ನಾಯಕರು ಹಾಗೂ ಶಾಸಕರಾದ ಪರಮೇಶ್ವರ್ ನಾಯ್ಕ್ ಹಾಗೂ ತುಕಾರಾಂ ಮೇಲೆ ಸಿದ್ದರಾಮಯ್ಯ ಹಾಗೂ ಪರಮೇಶ್ವರ್ ಪ್ರೀತಿಯಿದೆ. ಹೀಗಾಗಿ ಕೈ-ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲಿ ಆನಂದ್ ಸಿಂಗ್‍ಗೆ ಯಾವುದಾದರೂ ಹುದ್ದೆ ಸಿಗುವ ಸಾಧ್ಯತೆಗಳು ತೀರಾ ಕಡಿಮೆ ಎನ್ನಲಾಗಿದೆ. ಬಳ್ಳಾರಿ ಗ್ರಾಮಾಂತರ ಶಾಸಕರಾಗಿರುವ ನಾಗೇಂದ್ರ ಮೇಲೆ ಸಿಎಂಗೆ ಪ್ರೀತಿಯಿದೆ. ಎಸ್ಟಿ ಸಮುದಾಯದ ನಾಯಕರೊಬ್ಬರನ್ನು ರಾಮುಲು ವಿರುದ್ಧ ಬಳ್ಳಾರಿಯಲ್ಲಿ ಬೆಳೆಸಲೇಬೇಕಾಗಿದೆ. ಇದಕ್ಕಾಗಿ ಕಾಂಗ್ರೆಸ್ ಮುಖಂಡರಲ್ಲಿ ನಾಗೇಂದ್ರ ಮೇಲೆ ಒಲವಿದೆ.

ಇದಲ್ಲದೇ 2008ರಲ್ಲಿ ರೆಡ್ಡಿ ಬ್ರದರ್ಸ್ ಬಳ್ಳಾರಿಯಲ್ಲಿ ಬಿಜೆಪಿಯನ್ನು ಪ್ರಬಲವಾಗಿ ಬೆಳೆಸಿದ್ದರೂ ಅಂದಿನ ಚುನಾವಣೆಯಲ್ಲಿ ರೆಡ್ಡಿಗಳನ್ನು ಎದುರಿಸಿ ತುಕಾರಾಂ ಗೆದ್ದು ಬಂದಿದ್ದರು. ಆದರೆ ತುಕಾರಾಂಗೆ ಸಚಿವ ಸ್ಥಾನ ಸೇರಿದಂತೆ ಯಾವುದೇ ಪಟ್ಟ ಸಿಕ್ಕುವುದು ಆನಂದ್ ಸಿಂಗ್ ಗೆ ಇಷ್ಟವಿಲ್ಲ. ಈ ಹಿನ್ನೆಲೆಯಲ್ಲಿ ಆನಂದ್ ಸಿಂಗ್ ಬೆಂಗಳೂರಿಗೆ ಬಂದಿದ್ದರೂ ಯಾರ ಮುಂದೆಯೂ ಬಹಿರಂಗವಾಗಿ ಕಾಣಿಸಿಕೊಂಡಿಲ್ಲ ಎನ್ನಲಾಗಿದೆ. ಸದಾ ಕಾಲ ಮಾಧ್ಯಮಗಳು ಹಾಗೂ ಜನರ ಸಂಪರ್ಕಕ್ಕೆ ಸಿಗುತ್ತಿದ್ದ ಸೋದರಳಿಯಂದಿರಾದ ಧರ್ಮೇಂದ್ರ ಸಿಂಗ್ ಹಾಗೂ ಸಂದೀಪ್ ಸಿಂಗ್ ಕೂಡಾ ಇಂದು ಯಾರ ಸಂಪರ್ಕಕ್ಕೂ ಸಿಗುತ್ತಿಲ್ಲ. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿದ್ದಾರೆಂಬ ಮಾಹಿತಿ ಮೇರೆಗೆ ತೆರಳಿದ್ದ ಜಮೀರ್ ಮತ್ತು ನಾಗೇಂದ್ರ ಏರ್‍ಪೋರ್ಟ್ ಗೂ ತಲುಪುವ ಮುನ್ನವೇ ಅರ್ಧ ದಾರಿಯಿಂದಲೇ ವಾಪಸ್ ಆಗಿದ್ದಾರೆ ಎನ್ನುವುದು ಸದ್ಯಕ್ಕೆ ಸಿಕ್ಕಿರುವ ಅಪ್ಡೇಟ್.

 

 

Share This Article
Leave a Comment

Leave a Reply

Your email address will not be published. Required fields are marked *