ಬಿಜೆಪಿ ಮಂತ್ರಿ ವಿರುದ್ಧದ ಬಂದ್‍ ಗೆ ಬಿಜೆಪಿ ಶಾಸಕನ ಬೆಂಬಲ!

Public TV
3 Min Read

ಬಳ್ಳಾರಿ: ಬಿಜೆಪಿಯಲ್ಲಿ ಈಗ ಏನು ಸರಿಯಿಲ್ಲ ಅನ್ನೋದು ಮತ್ತೊಮ್ಮೆ ಸಾಬೀತಾಗಿದೆ, ಕೇಂದ್ರ ಕೌಶಲ್ಯಾಭಿವೃದ್ಧಿ ಸಚಿವ ಅನಂತಕುಮಾರ್ ಹೆಗ್ಡೆ ಹೇಳಿಕೆ ಖಂಡಿಸಿ ಹೊಸಪೇಟೆ ಬಂದ್ ನಡೆಯುತ್ತಿದ್ದು, ಈ ಬಂದ್‍ಗೆ ಬಿಜೆಪಿ ಶಾಸಕ ಆನಂದ್ ಸಿಂಗ್ ಬೆಂಬಲ ನೀಡಿದ್ದಾರೆ.

ಕೂಡ್ಲಿಗಿ ಶಾಸಕ ನಾಗೇಂದ್ರ ಬಿಜೆಪಿ ತೊರೆಯುವುದು ಖಚಿತವಾದ ಬೆನ್ನಲ್ಲೇ ಹೊಸಪೇಟೆ ಶಾಸಕ ಆನಂದ್‍ಸಿಂಗ್ ಬಿಜೆಪಿ ನಾಯಕರ ವಿರುದ್ಧ ಅಸಮಾಧಾನಗೊಂಡಿದ್ದಾರೆ. ಪಕ್ಷದ ಹೈಕಮಾಂಡ್ ವಿರುದ್ಧ ಗರಂ ಆಗಿರುವ ಶಾಸಕ ಆನಂದ್‍ಸಿಂಗ್ ಇದೀಗ ಕೇಂದ್ರ ಸಚಿವ ಅನಂತಕುಮಾರ ಹೆಗ್ಡೆ ವಿರುದ್ಧ ನಡೆಯುತ್ತಿರುವ ಪ್ರತಿಭಟನೆಗೆ ಬೆಂಬಲ ನೀಡುವ ಮೂಲಕ ಬಿಜೆಪಿ ನಾಯಕರ ವಿರುದ್ಧ ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ.

ಕೇಂದ್ರ ಸಚಿವ ಅನಂತಕುಮಾರ್ ಹೆಗ್ಡೆ ಸಂವಿಧಾನ ಬದಲಿಸುವ ಹೇಳಿಕೆ ನೀಡಿರುವುದನ್ನು ವಿರೋಧಿಸಿ ದಲಿತ ಸಂಘಟನೆಗಳು ಮತ್ತು ವಿವಿಧ ಪ್ರಗತಿಪರ ಸಂಘಟನೆಗಳು ಕರೆ ನೀಡಿರುವ ಹೊಸಪೇಟೆ ಬಂದ್ ಗೆ ಪರೋಕ್ಷವಾಗಿ ಶಾಸಕ ಆನಂದ್‍ಸಿಂಗ್ ಬೆಂಬಲ ನೀಡಿದ್ದಾರೆ. ಹೀಗಾಗಿ ಹೊಸಪೇಟೆಯಲ್ಲಿಂದು ನಡೆಯುತ್ತಿರುವ ಬಂದ್ ಸಂಪೂರ್ಣ ಯಶಸ್ವಿಯಾಗಿದೆ.

ಹೊಸಪೇಟೆ ಬಂದ್ ಹಿನ್ನೆಲೆಯಲ್ಲಿ ಶಾಲಾ ಕಾಲೇಜು, ಅಂಗಡಿ ಮುಗ್ಗಟ್ಟು, ಬಸ ಸಂಚಾರ ಮತ್ತು ಆಟೋ ಸಂಚಾರ ಬಂದ್ ಆಗಿದ್ದು, ಆದರೆ ಶಾಸಕ ಆನಂದ್‍ಸಿಂಗ್ ತಮ್ಮ ಪಕ್ಷದ ಕೇಂದ್ರ ಸಚಿವರ ವಿರುದ್ಧ ನಡೆಯುತ್ತಿರುವ ಬಂದ್ ಗೆ ಬೆಂಬಲ ನೀಡುವ ಮೂಲಕ ಪರೋಕ್ಷವಾಗಿ ಬಿಜೆಪಿ ನಾಯಕರಿಗೆ ತಮ್ಮ ಶಕ್ತಿ ಪ್ರದರ್ಶನ ತೋರಿದ್ದಾರೆ.

ಕ್ಷಮೆ ಕೇಳಿದ್ದ ಸಚಿವರು:
ಜಾತ್ಯತೀತ ಮತ್ತು ಸಂವಿಧಾನದ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿ ಟೀಕೆಗೆ ಗುರಿಯಾಗಿದ್ದ ಕೇಂದ್ರ ಕೌಶಲ್ಯಾಭಿವೃದ್ಧಿ ಸಚಿವ ಅನಂತ್ ಕುಮಾರ್ ಹೆಗ್ಡೆ ಕಳೆದ ಗುರುವಾರ ಲೋಕಸಭಾ ಕಲಾಪದಲ್ಲಿ ಕ್ಷಮೆ ಕೇಳಿ ವಿವಾದಕ್ಕೆ ಪೂರ್ಣವಿರಾಮ ಹಾಕಿದ್ದರು.

ನಾನು ಆಡಿದ ಮಾತುಗಳನ್ನು ತಪ್ಪಾಗಿ ಅರ್ಥೈಸಲಾಗಿದೆ. ನಾನು ಸಂವಿಧಾನವನ್ನು ಗೌರವಿಸುತ್ತೇನೆ ಅಷ್ಟೆ ಅಲ್ಲದೆ ಅದರಲ್ಲಿ ನಾನು ನಂಬಿಕೆ ಇಟ್ಟಿದ್ದೇನೆ. ನನ್ನ ಹೇಳಿಕೆಯಿಂದ ಯಾರಿಗಾದರೂ ನೋವಾಗಿದ್ದರೆ ಅವರಲ್ಲಿ ನಾನು ಕ್ಷಮೆ ಕೇಳಲು ನನಗೆ ಯಾವುದೇ ತೊಂದರೆ ಇಲ್ಲ ಎಂದು ಹೇಳಿದ್ದರು.

ಹೆಗ್ಡೆ ಹೇಳಿದ್ದು ಏನು?
ಕೊಪ್ಪಳದ ಯಲಬುರ್ಗಾ ತಾಲೂಕಿನ ಕೊಕನೂರಿನಲ್ಲಿ ಬ್ರಾಹ್ಮಣ ಯುವ ಪರಿಷತ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅನಂತ್ ಕುಮಾರ್ ಹೆಗ್ಡೆ, ಇತ್ತೀಚೆಗೆ ಹೊಸದೊಂದು ಸಂಪ್ರದಾಯ ಬಂದುಬಿಟ್ಟಿದೆ. ಅದ್ಯಾವುದೆಂದರೆ ಜಾತ್ಯತೀತರು. ನಾನೊಬ್ಬ ಹಿಂದೂ ಅಥವಾ ಮುಸ್ಲಿಂ ಅಥವಾ ಕ್ರೈಸ್ತ, ಲಿಂಗಾಯತ ಅಂತಾ ಯಾರದ್ರೂ ತಮ್ಮ ಧರ್ಮವನ್ನು ಹೆಮ್ಮೆಯಿಂದ ಹೇಳಿಕೊಂಡರೆ ನನಗೆ ಖುಷಿ ಅನಿಸುತ್ತೆ. ಯಾಕಂದ್ರೆ ಅವರಿಗೆ ಅವರ ರಕ್ತದ ಅರಿವಿದೆ ಎಂದರ್ಥ. ಆದ್ರೆ ಈ ಜಾತ್ಯತೀತರು ಅಂತ ಕರೆದುಕೊಳ್ಳುತ್ತಾರೆ ಅಲ್ವ. ಅಂಥವರು ಅಪ್ಪ-ಅಮ್ಮನ ಗುರುತು ಇಲ್ಲದೇ ಇರುವ ರಕ್ತವನ್ನು ಹೊಂದಿರುವವರು ಜಾತ್ಯತೀತರು ಅಂತ ಕರೆದುಕೊಳ್ಳುತ್ತಾರೆ ಎಂದು ಲೇವಡಿ ಮಾಡಿದ್ದರು.

ಜಾತ್ಯತೀತರಿಗೆ ತಮ್ಮ ಗುರುತೇ ತಮಗಿರುವುದಿಲ್ಲ. ಮಾತು ಎತ್ತಿದ್ರೆ ದೊಡ್ಡ ವಿಚಾರವಾದಿಗಳು. ಅಪ್ಪ-ಅಮ್ಮನ ಪರಿಚಯ ಇಲ್ಲದೇ ಇರೋ ಇವರುಗಳು ದೊಡ್ಡ ವಿಚಾರವಾದಿಗಳು. ಇವರನ್ನು ಜಾತಿಯ ಜೊತೆ ಕೂರಿಸಿಕೊಳ್ಳುತ್ತಿರೋ ಅಥವಾ ನಿಮ್ಮ ಕುಲದ ಜೊತೆ ಕೂರಿಸಿಕೊಳ್ಳುತ್ತಿರೋ ಗುರುತಿಸಿಕೊಳ್ಳಿ ಸ್ವಾಮಿ. ನಿಮಗೆ ನಿಮ್ಮ ರಕ್ತದ ಪರಿಚಯ ಇದ್ದಿದ್ದೇ ಆದ್ರೆ ನಿಮ್ಮ ಕಾಲು ಮುಟ್ಟಿ ನಮಸ್ಕರಿಸುತ್ತೇನೆ. ಆದ್ರೆ ಜಾತ್ಯತೀತರು ಅಂತ ಹೇಳಿದ್ರೆ ಮಾತ್ರ ಸ್ವಲ್ಪ ನೀವು ಯಾರು ಅಂತ ಸಂಶಯ ಬರುತ್ತೆ ಅಂತ ಹೇಳಿದ್ದರು.

ಹೌದು. ಸಂವಿಧಾನ ಜಾತ್ಯತೀತರು ಅಂತ ಹೇಳಿದೆ. ನಾವು ಸಂವಿಧಾನಕ್ಕೆ ಗೌರವ ಕೊಡುತ್ತೇವೆ. ಆದ್ರೆ ಸಂವಿಧಾನ ಕಾಲಕ್ಕೆ ತಕ್ಕಂತೆ ಅದೆಷ್ಟೋ ಬಾರಿ ಬದಲಾಗಿದೆ. ಮುಂದಿನ ದಿನಗಳಲ್ಲೂ ಬದಲಾಗುತ್ತೆ. ನಿಮಗೆ ಸಂಪ್ರದಾಯ, ಪರಂಪರೆ, ಸಂಸ್ಕೃತಿ ಇದರ ಐತಿಹಾಸಿಕ ಹೆಜ್ಜೆಯ ಗುರುತುಗಳೇ ನಿಮಗೆ ಗೊತ್ತಿಲ್ಲ. ನೀವು ಮೂರ್ಖರು. ಜಗತ್ತಿನ ಭೂಪಟಗಳು, ಸಾಮಾಜಿಕ ಚಿತ್ರಣ ಬದಲಾಗಿ ಹೋಗಿದೆ. ಹೀಗಾಗಿ ನಾವು ಸಂವಿಧಾನವನ್ನು ಬದಲಿಸುತ್ತೇವೆ ಎಂದು ಹೇಳಿಕೆ ನೀಡಿದ್ದರು.

ಯಾರಿಗೆ ಸಭ್ಯತೆಯ ಅರಿವಿದೆ ಅಂತವರು ಸಂಸ್ಕಾರ ಎಂಬ ಶಬ್ಧವನ್ನು ಒಪ್ಪಿಕೊಳ್ಳಲೇ ಬೇಕು. ಆದ್ರೆ ಯಾರಿಗೆ ಈ ಶಬ್ಧ ಪರಿಚಯ ಇಲ್ಲವೋ ಅಥವಾ ಒಳ್ಳೆದು ಮತ್ತು ಕೆಟ್ಟದರ ಮಧ್ಯೆ ಇರೋ ಕಂದಕ ಗೊತ್ತಿಲ್ಲವೋ ಅಂತವರು ಶಿಕ್ಷಣವೇ ಸಂಸ್ಕಾರ ಅಂದುಕೊಂಡಿರುತ್ತಾರೆ. ಅಂತಹ ಮೂಢಮತಿಗಳ ಬಗ್ಗೆ ನಾನೇನೂ ಹೇಳುವುದಿಲ್ಲ ಎಂದು ಹೇಳಿದ್ದರು.

https://www.youtube.com/watch?v=oYObRLHynu4

https://www.youtube.com/watch?v=_3Hz_6SnMAE

 

Share This Article
Leave a Comment

Leave a Reply

Your email address will not be published. Required fields are marked *