ಟೆಹ್ರಾನ್: ಅಮೆರಿಕವು (USA) ಶಾಂತಿ ಮಾತುಕತೆಯನ್ನು ರದ್ದುಗೊಳಿಸಿದ ಬೆನ್ನಲ್ಲೇ ಇರಾನ್ (Iran) ಸಂಘರ್ಷ ಶಮನಕ್ಕೆ ಹೊಸ ದಾಳ ಉರುಳಿಸಿದೆ. ಪಾಕಿಸ್ತಾನದ(Pakistan) ಸಂಧಾನಕಾರರ ಮೂಲಕ ಅಮೆರಿಕಕ್ಕೆ ಹೊಸ ಶಾಂತಿ ಪ್ರಸ್ತಾವನೆಯನ್ನು ರವಾನಿಸಿರುವ ಇರಾನ್, ಪ್ರಮುಖವಾಗಿ ಆರ್ಥಿಕ ಮತ್ತು ಭದ್ರತಾ ಹಿತಾಸಕ್ತಿಗಳಿಗೆ ಆದ್ಯತೆ ನೀಡುವಂತೆ ಕೋರಿದೆ.

ಪ್ರಸ್ತುತ ನಡೆಯುತ್ತಿರುವ ಸಂಘರ್ಷವನ್ನು ತಕ್ಷಣವೇ ಕೊನೆಗೊಳಿಸಲು ಮತ್ತು ವಿಶ್ವದ ಪ್ರಮುಖ ವ್ಯಾಪಾರ ಮಾರ್ಗವಾದ ಹಾರ್ಮುಜ್ ಜಲಸಂಧಿಯನ್ನು(Strait of Hormuz) ಪೂರ್ಣ ಪ್ರಮಾಣದಲ್ಲಿ ತೆರೆಯಲು ತಾವು ಸಿದ್ಧ ಎಂದು ಇರಾನ್ ತಿಳಿಸಿದೆ.

ಅತ್ಯಂತ ವಿವಾದಾತ್ಮಕವಾಗಿರುವ ಮತ್ತು ಸಂಘರ್ಷದ ಕೇಂದ್ರಬಿಂದುವಾಗಿರುವ ಪರಮಾಣು ಕಾರ್ಯಕ್ರಮದ ಕುರಿತಾದ ಚರ್ಚೆಗಳನ್ನು ಸದ್ಯಕ್ಕೆ ಬದಿಗಿಟ್ಟು, ನಂತರದ ಹಂತದಲ್ಲಿ ಮಾತುಕತೆ ನಡೆಸೋಣ ಎಂಬ ನಿಲುವನ್ನು ಇರಾನ್ ತಳೆದಿದೆ. ಈ ಮೂಲಕ ಸದ್ಯದ ಉದ್ವಿಗ್ನತೆಯನ್ನು ತಣ್ಣಗಾಗಿಸುವುದು ಇರಾನ್‌ನ ತಂತ್ರವಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಇರಾನ್ ಈ ಹಿಂದಿನ ಪ್ರಸ್ತಾಪದಲ್ಲಿ ಅಮೆರಿಕ ವಿಧಿಸಿರುವ ಆರ್ಥಿಕ ನಿರ್ಬಂಧಗಳನ್ನು (Sanctions) ತೆಗೆದುಹಾಕುವುದು ಮತ್ತು ಜಪ್ತಿ ಮಾಡಲಾಗಿರುವ ತನ್ನ ಆಸ್ತಿಗಳನ್ನು ಬಿಡುಗಡೆ ಮಾಡಬೇಕೆಂದು ಕೇಳಿತ್ತು. ಜಲಸಂಧಿಯನ್ನು ತೆರೆಯಬೇಕಾದರೆ ಅಮೆರಿಕವು ಇರಾನ್ ಬಂದರುಗಳ ಮೇಲೆ ಹೇರಿರುವ ನೌಕಾ ದಿಗ್ಬಂಧನವನ್ನು (Naval Blockade) ಮೊದಲು ಹಿಂಪಡೆಯಬೇಕು ಎಂದು ಇರಾನ್ ಷರತ್ತು ವಿಧಿಸಿತ್ತು. ಇದನ್ನೂ ಓದಿ: ಇರಾನ್ ದಾಳಿಯಲ್ಲಿ ಅಮೆರಿಕದ ನೆಲೆಗಳಿಗೆ ಭಾರಿ ಹಾನಿ – ದುರಸ್ತಿಗೆ ಬೇಕು ಶತಕೋಟಿ ಡಾಲರ್


ಟ್ರಂಪ್ ನಡೆ ಏನು?
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಈ ಹೊಸ ಪ್ರಸ್ತಾವನೆಯನ್ನು ಪರಿಶೀಲಿಸಲು ಇಂದು ಉನ್ನತ ಮಟ್ಟದ ಭದ್ರತಾ ಸಭೆಯನ್ನು ಕರೆದಿದ್ದಾರೆ. ಆದರೆ ಇರಾನ್‌ನ ಪರಮಾಣು ಚಟುವಟಿಕೆಗಳ ಮೇಲೆ ಕಟ್ಟುನಿಟ್ಟಿನ ನಿಯಂತ್ರಣ ಹೇರದೆ ಯಾವುದೇ ಶಾಶ್ವತ ಒಪ್ಪಂದಕ್ಕೆ ಅಮೆರಿಕ ಒಪ್ಪುವುದು ಅನುಮಾನ ಎನ್ನಲಾಗುತ್ತಿದೆ. ಇದನ್ನೂ ಓದಿ: ಕೊನೆಕ್ಷಣದಲ್ಲಿ ಶಾಂತಿ ಮಾತುಕತೆ ರದ್ದುಗೊಳಿಸಿದ ಟ್ರಂಪ್- ಪೆಚ್ಚಾದ ಪಾಕಿಸ್ತಾನ

