ಬೆಂಗಳೂರು: ಫೇಸ್ ಬುಕ್ ನಲ್ಲಿ ಪರಿಚಯ ಮಾಡಿಕೊಂಡು ಹನಿಟ್ರ್ಯಾಪ್ ಮಾಡುತ್ತಿದ್ದ ಮೂವರನ್ನ ಪೊಲೀಸರು ಬಂಧಿಸಿದ್ದಾರೆ.
ಚಿಕ್ಕಬಾಣಾವರ ಮೂಲದ ಅರ್ಪಿತಾ, ಪವನ್ ಮತ್ತು ತೀರ್ಥ ಬಂಧಿತ ಆರೋಪಿಗಳು. ಇವರಲ್ಲಿ ಅರ್ಪಿತಾ ಫೇಸ್ ಬುಕ್ ಮೂಲಕ ಪರಿಚಯ ಮಾಡಿಕೊಂಡು ಬಳಿಕ ಅವರ ಜೊತೆ ಸುತ್ತಾಡಿ ಫೋಟೋ ತೆಗೆಸಿಕೊಂಡು ಪೊಲೀಸರಿಗೆ ಮತ್ತು ಮಾಧ್ಯಮದವರಿಗೆ ಹೇಳಿ ದಾಳಿ ನಡೆಸುವುದಾಗಿ ಯುವಕರಿಗೆ ಬೆದರಿಕೆ ಹಾಕುತ್ತಿದ್ದಳು. ಈಗ ನೊಂದ ಯುವಕನೊಬ್ಬ ಪೊಲೀಸರಿಗೆ ದೂರು ನೀಡಿದ್ದಾರೆ.
ದೂರಿನಲ್ಲಿ ಏನಿದೆ?
ಮೊದಲು ಆರೋಪಿ ಅರ್ಪಿತಾ ಫೇಸ್ ಬುಕ್ ಗೆ ತನ್ನ ಫೋಟೋಗಳನ್ನ ಅಪ್ಲೋಡ್ ಮಾಡುತ್ತಿದ್ದಳು. ಬಳಿಕ ಫ್ರೆಂಡ್ ರಿಕ್ವೆಸ್ಟ್ ಕಳಿಸಿ ಸ್ನೇಹಿತೆಯೆಂದು ಯುವಕರನ್ನ ಪರಿಚಯ ಮಾಡಿಕೊಳ್ಳುತ್ತಿದ್ದಳು. ನಂತರ ಯುವಕರ ಮೊಬೈಲ್ ನಂಬರ್ ಕೇಳಿ ಅವರ ಜೊತೆ ಆತ್ಮೀಯವಾಗಿ ಸಮಯ ಕಳೆಯುತ್ತಿದ್ದಳು. ಈ ವೇಳೆ ಇವೆಲ್ಲವನ್ನು ಕದ್ದು ಅರ್ಪಿತಾಳ ಸಹಚರರಾದ ಪವನ್ ಮತ್ತು ತೀರ್ಥ ವಿಡಿಯೋ ಮಾಡಿಕೊಳ್ಳುತ್ತಿದ್ದರು. ಬಳಿಕ ಫೋಟೊ, ವಿಡಿಯೋ ಮೂಲಕ ಬ್ಲಾಕ್ ಮೇಲ್ ಮಾಡಿ ಹಣ ದೋಚುತ್ತಿದ್ದರು. ಈ ಮೂವರು ಕೆಲಸವನ್ನು ಕಾಯಕವಾಗಿ ಮಾಡಿಕೊಂಡಿದ್ದಾರೆ ಎಂದು ಯುವಕನೊಬ್ಬ ಆರೋಪಿಸಿದ್ದಾನೆ.
ನನ್ನನ್ನು ಪರಿಚಯ ಮಾಡಿಕೊಂಡು ಟೀ ಕುಡಿಯಲು ಮನೆಗೆ ಕರೆದುಕೊಂಡು ಹೋಗಿದ್ದಳು. ಈ ವೇಳೆ ಆಕೆ ಬಾಗಿಲು ಲಾಕ್ ಮಾಡಿದ್ದಳು. ಬಳಿಕ ಸ್ವಲ್ಪ ಸಮಯದ ನಂತರ ಪೊಲೀಸ್ ವೇಷಧರಿಸಿ ಅರ್ಪಿತಾ ಸಹಚರರು ಮನೆಗೆ ಬಂದು ಗಲಾಟೆ ಮಾಡಿ ನನ್ನನ್ನು ಬೆದರಿಸಿ ನನ್ನ ಬಳಿ ಇದ್ದ ಹಣ, ಚಿನ್ನ ಎಲ್ಲವನ್ನು ದೋಚಿದ್ದಾರೆ. ಅಷ್ಟೇ ಅಲ್ಲದೇ ಕಾರ್ ಕೀ, ಎಟಿಎಂ ಕಾರ್ಡ್ ನಂಬರ್ ಎಲ್ಲವನ್ನು ಪಡೆದು ಹಣಕ್ಕಾಗಿ ಬೇಡಿಕೆ ಇಟ್ಟಿದ್ದರು. ಒಂದು ವೇಳೆ ನಾನು ಹಣ ಕೊಡದಿದ್ದರೆ ನಿಮ್ಮ ಕುಟುಂಬದವರಿಗೆ ಫೋಟೋ ಮತ್ತು ವಿಡಿಯೋಗಳನ್ನು ಕಳುಹಿಸುವುದಾಗಿ ಬೆದರಿಕೆ ಒಡ್ಡುತ್ತಿದ್ದರು. ಈಗಾಗಲೇ 55 ಸಾವಿರ ಹಾಣ ಕೊಟ್ಟಿದ್ದೇನೆ. ಇನ್ನು ಹೆಚ್ಚಿನ ಹಣ ಕೊಡಬೇಕು ಎಂದು ಬೆದರಿಕೆ ಒಡ್ಡುತ್ತಿದ್ದಾರೆ. ಆದ್ದರಿಂದ ನನಗೆ ನ್ಯಾಯ ಕೊಡಿಸಿ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಸದ್ಯಕ್ಕೆ ಈ ಕುರಿತು ಸೋಲದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಅರ್ಪಿತಾ ಸೇರಿದಂತೆ ಮೂವರನ್ನ ಪೊಲೀಸರು ಬಂಧಿಸಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ: www.instagram.com/publictvnews