ಎಲ್ಲಾ ಕೆಲ್ಸ ಸಿಎಂ ಮಾಡಿದ್ರೆ ನಾನು ಇರೋದು ಯಾಕೆ: ಎಚ್‍ಡಿಕೆ ಮೇಲೆ ಎಂಬಿಪಿ ಮುನಿಸು?

Public TV
2 Min Read

ಬೆಂಗಳೂರು: ಮೂರು ನಗರಗಳ ಪೊಲೀಸ್ ಆಯುಕ್ತರ ವರ್ಗಾವಣೆ ವಿಚಾರಕ್ಕೆ ಸಂಬಂಧಿಸಿದಂತೆ ಸಚಿವ ಗೃಹ ಸಚಿವ ಎಂಬಿ ಪಾಟೀಲ್ ಸಿಎಂ ಕುಮಾರಸ್ವಾಮಿ ಅವರ ವಿರುದ್ಧ ಮುನಿಸಿಕೊಂಡಿದ್ದಾರೆ. ಎಲ್ಲಾ ಕೆಲಸಗಳನ್ನು ಸಿಎಂ ಮಾಡಿದರೆ ಗೃಹ ಸಚಿವನಾಗಿ ನಾನು ಇರುವುದು ಯಾಕೆ ಎಂದು ಆಪ್ತರ ಬಳಿ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.

ತಮ್ಮ ಗಮನಕ್ಕೆ ಬಾರದೇ ವರ್ಗಾವಣೆ ಮಾಡಲಾಗಿದೆ. ಈ ಕುರಿತು ಸಚಿವನಾಗಿ ನನಗೆ ಗೊತ್ತಿಲ್ಲದೇ ವರ್ಗಾವಣೆ ಮಾಡಿದರೆ ಹೇಗೆ ಎಂದು ಸಿಎಂ ಏಕಪಕ್ಷೀಯ ನಿರ್ಧಾರ ಬಗ್ಗೆ ಗೃಹ ಸಚಿವರಾದ ಎಂಬಿ ಪಾಟೀಲ್ ಗರಂ ಆಗಿದ್ದಾರೆ. ಅಲ್ಲದೇ ಈ ಕುರಿತು ರಾಜ್ಯ ಪೊಲೀಸ್ ಮಹಾ ನಿರ್ದೇಶಕಿ ನೀಲಮಣಿ ರಾಜುಗೂ ಅವರಿಗೂ ಎಂಬಿ ಪಾಟೀಲ್ ಪ್ರಶ್ನೆ ಮಾಡಿದ್ದಾರೆ ಎನ್ನುವ ವಿಚಾರ ಮೂಲಗಳಿಂದ ಪಬ್ಲಿಕ್ ಟಿವಿಗೆ ಲಭಿಸಿದೆ.

ಗೃಹ ಖಾತೆಯನ್ನು ವಹಿಸಿಕೊಂಡು ಎಂಬಿ ಪಾಟೀಲ್ ಅವರಿಗೆ ಒಂದು ತಿಂಗಳು ಕಳೆದಿರಲಿಲ್ಲ. ಇದರ ನಡುವೆ ಗುರುವಾರದಂದು ಸಿಎಂ ಕುಮಾರಸ್ವಾಮಿ ಅವರು ಅಧಿಕಾರಿಗಳ ವರ್ಗಾವಣೆ ಮಾಡಿ ಆದೇಶ ಹೊರಡಿಸಿದ್ದರು. ಹುಬ್ಬಳ್ಳಿ-ಧಾರವಾಡ ನಗರದ ಕಮಿಷನರ್ ಆಗಿದ್ದ ಎಂ.ಎನ್ ನಾಗರಾಜ್ ಅವರ ಜಾಗಕ್ಕೆ ಕೆಜಿಎಫ್ ಎಸ್‍ಪಿ ಆಗಿದ್ದ ಬಿ.ಎಸ್ ಲೋಕೇಶ್ ಕುಮಾರ್ ಅವರನ್ನು ವರ್ಗಾವಣೆ ಮಾಡಿದ್ದು, ಬೆಳಗಾವಿ ನಗರ ಕಮಿಷನರ್ ಆಗಿದ್ದ ಡಿ.ಸಿ ರಾಜಪ್ಪ ಹುದ್ದೆಗೆ ಬೆಂಗಳೂರು ವೈರ್ ಲೆಸ್ ವಿಭಾಗದ ಎಸ್‍ಪಿ ಆಗಿದ್ದ ಪಿ. ರಾಜೇಂದ್ರ ಪ್ರಸಾದ್ ಅವರನ್ನು ವರ್ಗಾವಣೆ ಮಾಡಲಾಗಿದೆ. ಉಳಿದಂತೆ ಬೆಂಗಳೂರು ಗೃಹ ರಕ್ಷಕ ದಳದ ಕಮಾಂಡೆಂಟ್ ಆಗಿದ್ದ ಆರ್.ರಮೇಶ್ ಅವರನ್ನು ಯೋಜನೆ ಆಧುನೀಕರಣದ ಡಿಐಜಿ ಹುದ್ದೆಗೆ ವರ್ಗಾವಣೆ ಮಾಡಲಾಗಿದೆ.

ಈ ಕುರಿತು ಆಪ್ತರ ಬಳಿ ಅಸಮಾಧಾನ ವ್ಯಕ್ತಪಡಿಸಿರುವ ಎಂಬಿಪಿ ಸಿಎಂ ಏಕಪಕ್ಷೀಯ ನಿರ್ಧಾರದ ಕುರಿತು ಮುಂದಿನ ಸಮನ್ವಯ ಸಮಿತಿ ಸಭೆಯಲ್ಲಿ ಪ್ರಸ್ತಾಪ ಮಾಡುವ ಸಾಧ್ಯತೆ ಇದೆ. ಡಿಸಿಎಂ ಪರಮೇಶ್ವರ್ ಅವರು ಗೃಹ ಖಾತೆಯನ್ನು ಹೊಂದಿದ್ದ ವೇಳೆಯೂ ಸಿಎಂ ಪೊಲೀಸ್ ಅಧಿಕಾರಿಗಳ ವರ್ಗಾವಣೆ ಮಾಡಿ ಇಲಾಖೆಯಲ್ಲಿ ಹಸ್ತಕ್ಷೇಪ ಮಾಡಿದ್ರು. ಅಲ್ಲದೇ ಲೋಕೋಪಯೋಗಿ ಸಚಿವ ರೇವಣ್ಣ ಅವರು ತಮ್ಮ ಇಲಾಖೆಯ ವರ್ಗಾವಣೆ ಪ್ರಕ್ರಿಯೆಯಲ್ಲಿ ಮಧ್ಯಪ್ರವೇಶ ಮಾಡಿದ್ದ ಬಗ್ಗೆ ಕಾಂಗ್ರೆಸ್ ಸಚಿವರಿಂದಲೂ ಅಸಮಾಧಾನ ವ್ಯಕ್ತವಾಗಿತ್ತು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *