ಪೊಲೀಸರು ಪದಕ ಪಡೆದಿರುವುದರ ಹಿಂದೆ ಶ್ರಮ, ಪ್ರಾಮಾಣಿಕತೆ, ಸಮಾಜದ ಸೇವೆ ಇದೆ: ಡಾ.ಜಿ ಪರಮೇಶ್ವರ್

Public TV
4 Min Read

ಬೆಂಗಳೂರು: ರಾಜ್ಯವನ್ನು ಶಾಂತಿಯಿಂದ ಇಡುವುದರಲ್ಲಿ ಪೊಲೀಸ್ ಇಲಾಖೆಯು (Police Department) ಎಲ್ಲ ರೀತಿಯ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ವಿಶೇಷವಾಗಿ ಜನಸಮುದಾಯದ ನಿರೀಕ್ಷೆಯಲ್ಲಿ ತನ್ನ ಪ್ರಾಮಾಣಿಕ ಪ್ರಯತ್ನವನ್ನು ಮಾಡಿದೆ ಎಂದು ಗೃಹ ಸಚಿವ ಡಾ.‌ ಜಿ.ಪರಮೇಶ್ವರ್‌ (G Parameshwara) ಅವರು ಹೇಳಿದರು.

ರಾಜಭವನದ ಗಾಜಿನ ಮನೆಯಲ್ಲಿ ನಡೆದ ಕರ್ನಾಟಕ ರಾಜ್ಯ ಗೃಹ ಇಲಾಖೆಯಲ್ಲಿ (Home Department) ವಿಶಿಷ್ಟ ಹಾಗೂ ಅಗ್ರಗಣ್ಯ ಸೇವೆ ಸಲ್ಲಿಸಿದ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಮಾನ್ಯ ಗೌರವಾನ್ವಿತ ರಾಜ್ಯಪಾಲ ರವರಿಂದ ʻರಾಷ್ಟ್ರಪತಿಗಳ ಪೊಲೀಸ್ ಪದಕ ಪ್ರದಾನʼ ಹಾಗೂ ʻಕೇಂದ್ರ ಗೃಹ ಮಂತ್ರಿಗಳ ಪದಕ ಪ್ರದಾನʼ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಇದನ್ನೂ ಓದಿ: ಪೊಲೀಸರ ಸಾಮಾಜಿಕ ಬದ್ದತೆಯಿಂದ ಸಮಾಜದಲ್ಲಿ ಶಾಂತಿ ನೆಲೆಸಲು ಸಾಧ್ಯ – ಸಿದ್ದರಾಮಯ್ಯ

ಪ್ರಶಸ್ತಿ ಎಂಬುದು‌ ಬರೀ ಪದಕವಲ್ಲ. ಅದರ ಹಿಂದೆ ಶ್ರಮ, ಪ್ರಾಮಾಣಿಕತೆ, ಸಮಾಜದ ಸೇವೆ ಮತ್ತು ಮುಂದಿನ ಪೀಳಿಗೆಗೆ ಆದರ್ಶ ಇದೆ. ಕರ್ನಾಟಕ ಪೊಲೀಸ್ ಇಡೀ ರಾಷ್ಟ್ರದಲ್ಲಿ ಪ್ರಖ್ಯಾತಿಯನ್ನು ಪಡೆದಿದೆ. ಪೊಲೀಸ್ ಇಲಾಖೆಯನ್ನು ನಡೆಸುವುದಕ್ಕೆ ನನಗೆ ಬಹಳ ಹೆಮ್ಮೆಯಿದೆ. ಪೊಲೀಸ್ ಕಾನ್‌ಸ್ಟೇಬಲ್‌ನಿಂದ ಅನುಯಾಯಿಗು ಕೂಡ ಪ್ರಶಸ್ತಿ ಸಿಕ್ಕಿದೆ. ಅನುಯಾಯಿಯಿಂದ ಡಿಜಿಪಿವರೆಗೆ ನಮ್ಮ ಪೊಲೀಸ್ ಇಲಾಖೆ ರಾಜ್ಯವನ್ನು ಶಾಂತಿಯಿಂದ ಇಡುವುದರಲ್ಲಿ ಎಲ್ಲ ರೀತಿಯ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ವಿಶೇಷವಾಗಿ ಜನಸಮುದಾಯದ ನಿರೀಕ್ಷೆಯಲ್ಲಿ ತನ್ನ ಪ್ರಾಮಾಣಿಕ ಪ್ರಯತ್ನವನ್ನು ಮಾಡಿದೆ ಎಂದು ಹೇಳಿದರು.

ರಾಜ್ಯದ ಅಭಿವೃದ್ಧಿಯಾಗಬೇಕಾದರೆ ಸಮಾಜ ಶಾಂತಿಯಿಂದ ಇರಬೇಕಾಗುತ್ತದೆ. ನಾಗರಿಕ ಸಮಾಜ ಶಾಂತಿಯಿಂದ ಇರಬೇಕಾಗುತ್ತದೆ. ಇತ್ತೀಚೆಗೆ ನಾವು ಗಮನಿಸಿದಾಗ, ಗ್ಲೋಬಲ್ ಇನ್‌ವೆಸ್ಟರ್ಸ್ ಮೀಟ್‌ನಲ್ಲಿ 10,500 ಲಕ್ಷ ಕೋಟಿ ರೂ.ಗಿಂತಲೂ ಹೆಚ್ಚು ಬಂಡಾವಾಳ ಹೂಡುತ್ತೇವೆ ಎಂದು ಪ್ರಪಂಚದಾದ್ಯಂತ ನೂರಾರು ಕಂಪನಿಗಳು ಬಂದವು. ಮುಖ್ಯಮಂತ್ರಿಗಳು, ಕೈಗಾರಿಕಾ ಸಚಿವರು ಹಲವು ಒಡಂಬಡಿಕೆಗಳಿಗೆ ಸಹಿ ಹಾಕಿದರು. ಅದಕ್ಕೆ ಮೂಲ ಕಾರಣ, ಯಾವುದೇ ಒಂದು ಕಂಪನಿ ರಾಜ್ಯದಲ್ಲಿ ಅಥವಾ ರಾಷ್ಟ್ರದಲ್ಲಿ ಬಂಡಾವಾಳ ಹೂಡಬೇಕಾದ್ರೆ ಆ ರಾಜ್ಯದ ಸಮಾಜವನ್ನು ನೋಡುತ್ತಾರೆ. ರಾಜಕೀಯ ಇಚ್ಛಾಶಕ್ತಿ, ಆ ಸಮಾಜದಲ್ಲಿ ಶಾಂತಿ ಇದೆಯಾ? ಎಂಬುದನ್ನು ಕಂಪನಿಗಳು ನೋಡುತ್ತವೆ. ಕರ್ನಾಟಕದ‌ ಮಟ್ಟಿಗೆ 10 ಲಕ್ಷ ಕೋಟಿ ರೂ.ಗೂ ಹೆಚ್ಚು ಹೂಡಿಕೆ ಬರುತ್ತದೆ ಅಂದರೆ ಕರ್ನಾಟಕದಲ್ಲಿ ಶಾಂತಿ ಇದೆ. ನೆಮ್ಮದಿ, ತೃಪ್ತಿ ಇದೆ. ಯಾವುದೇ ತೊಂದರೆಗಳು ಆಗುವುದಿಲ್ಲ ಎಂಬುದನ್ನು ಗಮನಿಸಿಯೇ ಬಂಡಾವಾಳ ಹೂಡುತ್ತಾರೆ.‌ ಇದಕ್ಕೆ ನಮ್ಮ ಪೊಲೀಸ್ ಇಲಾಖೆಯೂ ಕಾರಣ ಎಂದು ಶ್ಲಾಘಿಸಿದರು.

ಕರ್ನಾಟಕವನ್ನು ಶಾಂತಿ, ನೆಮ್ಮದಿಯಿಂದ ಇಡಲು ಅನುಯಾಯಿ, ಕಾನ್‌ಸ್ಟೇಬಲ್‌ನಿಂದ ಡಿಜಿಪಿವರೆಗೆ ಶ್ರಮ ಹಾಕುತ್ತಿದ್ದಾರೆ. ಪ್ರಾಮಾಣಿಕವಾಗಿ ಶ್ರಮಿಸುತ್ತಿದ್ದಾರೆ ಎಂದು ಹೇಳಿದರು. ಇದನ್ನೂ ಓದಿ: ದೇವರ ವಿರುದ್ಧವೇ ಸೇಡು – 10 ವರ್ಷಗಳಿಂದ ದೇವಸ್ಥಾನದ ಹುಂಡಿ ಹಣ ಕದಿಯುತ್ತಿದ್ದ HIV ಸೋಂಕಿತ ಅರೆಸ್ಟ್

ರಾಜ್ಯ ಪೊಲೀಸ್ ಆಧುನೀಕರಣಗೊಳ್ಳುತ್ತಿದೆ.‌ ಆಧುನೀಕರಣ ಅನೇಕ ಸವಾಲುಗಳನ್ನು ಎದುರಿಸುತ್ತಿದೆ. ರಾಜ್ಯದಲ್ಲಿ ಮತ್ತು ರಾಷ್ಟ್ರದಲ್ಲಿ ಸೈಬರ್ ಅಪರಾಧಗಳು ಬಹಳ ಹೆಚ್ಚಾಗುತ್ತಿವೆ. ಸೈಬರ್ ಅಪರಾಧಗಳನ್ನು ಮಟ್ಟ ಹಾಕದೇ ಹೋದರೆ ಜನರಿಗೆ ಕೋಟ್ಯಂತರ ರೂ.‌ ನಷ್ಟ ಉಂಟಾಗುತ್ತದೆ. ಅದಕ್ಕಾಗಿಯೇ ದೇಶದಲ್ಲೆ ಮೊದಲ ಬಾರಿಗೆ ರಾಜ್ಯದಲ್ಲಿ ಸೈಬರ್ ಪೊಲೀಸ್ ಠಾಣೆಯನ್ನು ಸ್ಥಾಪಿಸಲಾಯಿತು. ಇಂದು ಸೈಬರ್ ಅಪರಾಧಗಳಿಗಾಗಿಯೇ 45ಕ್ಕೂ ಹೆಚ್ಚು ಪೊಲೀಸ್ ಠಾಣೆಗಳನ್ನು ರಾಜ್ಯದಲ್ಲಿ ಸ್ಥಾಪಿಸಲಾಗಿದೆ. ಯಾವುದೇ ಪೊಲೀಸ್ ಠಾಣೆಯಲ್ಲಿಯೂ ಸೈಬರ್ ಅಪರಾಧಕ್ಕೆ ಸಂಬಂಧಿಸಿದ ದೂರುಗಳನ್ನು ದಾಖಲಿಸಬಹುದು ಎಂಬ ಆದೇಶವನ್ನು ಹೊರಡಿಸಲಾಗಿದೆ ಎಂದು ಹೇಳಿದರು. ಇದನ್ನೂ ಓದಿ:  ಧರ್ಮಸ್ಥಳ ಕೇಸ್‌ಲ್ಲಿ SIT ತನಿಖೆಗೆ ಸಮಯ ನಿಗದಿ ಮಾಡಿಲ್ಲ: ಪರಮೇಶ್ವರ್

ಇತ್ತೀಚೆಗೆ ಸಮಾಜವನ್ನು ಕೆಡಿಸುವಂಥ ಅನೇಕ ಪ್ರಯತ್ನಗಳು ನಡೆಯುತ್ತಿವೆ. ಧಾರ್ಮಿಕವಾಗಿ, ರಾಜಕೀಯವಾಗಿ ಬೇರೆ ರೀತಿಯಲ್ಲಿ ಸಮಾಜದ ಶಾಂತಿಯನ್ನು ಕೆಡಿಸುವಂತದ್ದನ್ನು ಗಮನಿಸುತ್ತಿದ್ದೇವೆ. ಕರ್ನಾಟಕ ಪೊಲೀಸ್ ಪ್ರತಿಯೊಂದು ಸಂದರ್ಭದಲ್ಲಿ ಯಶಸ್ವಿಯಾಗುತ್ತಿದೆ. ಯಾವುದೇ ತನಿಖೆ, ಅಪರಾಧ, ಕೊಲೆ ಪ್ರಕರಣಗಳನ್ನು ಪತ್ತೆ ಹಚ್ಚುವುದರಲ್ಲಿ ರಾಜ್ಯ ಪೊಲೀಸ್ ಯಶಸ್ವಿಯಾಗಿದೆ. ಇಂತಹ ಸೂಕ್ಷ್ಮ ಇಲಾಖೆ ಸ್ವಾಭಾವಿಕವಾಗಿ ಹಲವು ಟೀಕೆ ಟಿಪ್ಪಣಿಗಳಿಗೆ ಗುರಿಯಾಗುತ್ತದೆ. ಟೀಕೆಗಳನ್ನು ಮೀರಿ ಇಲಾಖೆಯ ಸಿಬ್ಬಂದಿಗಳು ಕೆಲಸ‌ ಮಾಡುತ್ತಿದ್ದಾರೆ.‌ ನಾವು ಯಾವುದೇ ಟೀಕೆಗಳನ್ನು ಲಘುವಾಗಿ ತೆಗೆದುಕೊಳ್ಳುವುದಿಲ್ಲ. ಸಲಹೆಗಳ ರೂಪದಲ್ಲಿ ತೆಗೆದುಕೊಳ್ಳುತ್ತೇವೆ. ಆ ಕೆಲಸಗಳನ್ನು ಮಾಡಲು ಪ್ರಯತ್ನ ಮಾಡುತ್ತೇವೆ ಎಂದರು.

ಪೊಲೀಸ್ ಕಾನ್‌ಸ್ಟೇಬಲ್‌ಗಳ ಪ್ರಾಮಾಣಿಕ ಪ್ರಯತ್ನಗಳು ಆಗದೇ ಹೋದರೆ ನಾವು ಅಪರಾಧಗಳನ್ನು ಮಟ್ಟಹಾಕಲು ಕಷ್ಟವಾದೀತು. ಅವರು ಮಾಡುವ ಸೇವೆಗಳನ್ನು ನಾವು ಗಮನ ಹರಿಸಬೇಕಾಗುತ್ತದೆ. ಎರಡು ವರ್ಷಗಳ ಹಿಂದೆ ಮೈಸೂರು ರಸ್ತೆಯಲ್ಲಿ ರಸ್ತೆ ದಾಟಲು ಸಾಧ್ಯವಾಗದ ಸ್ಥಿತಿಯಲ್ಲಿದ್ದ ತುಂಬು ಗರ್ಭಿಣಿಗೆ ಹೆರಿಗೆ ಮಾಡಿಸಿ, ಸುರಕ್ಷಿತವಾಗಿ ಮನೆಗೆ ತಲುಪಿಸುವ ಕೆಲಸ‌ ಮಾಡುತ್ತಾನೆ. ಒಬ್ಬ ಕಾನ್‌ಸ್ಟೇಬ‌ಲ್‌ಗೆ ಎಂತಹ‌ ಮನಸ್ಥಿತಿ ಇರುತ್ತದೆ ಎಂದು ಯೋಚಿಸಬೇಕಿದೆ. ಕರ್ತವ್ಯದ ವೇಳೆ ಎದುರಾಗುವ ಸಮಸ್ಯೆಗಳನ್ನು ನಿಭಾಯಿಸುವ ಕೆಲಸಗಳನ್ನು ಇಲಾಖೆಯ ಸಿಬ್ಬಂದಿ ಮಾಡುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಅನೇಕ‌ ಸಂದರ್ಭಗಳಲ್ಲಿ ಕರ್ತವ್ಯದ ವೇಳೆ‌ ಅಧಿಕಾರಿ ಮತ್ತು ಸಿಬ್ಬಂದಿ ಪ್ರಾಣ‌ ಕಳೆದು ಕೊಂಡಿದ್ದಾರೆ. ಅವರಿಗೆ ಸಾಂತ್ವನ ಹೇಳಬಯಸುತ್ತೇನೆ. ಕರ್ತವ್ಯದ ವೇಳೆ ಅಪರಾಧಿ ಯಾವ ರೀತಿ ಪ್ರತಿಕ್ರಿಯಿಸುತ್ತಾನೆ ಎಂಬುದು ಗೊತ್ತಿರುವುದಿಲ್ಲ.‌ ಪೊಲೀಸರು ಪ್ರಾಣ ಪಣಕ್ಕಿಟ್ಟು ಕೆಲಸ ಮಾಡುವ ಸಂದರ್ಭಗಳನ್ನು ನೋಡಿದ್ದೇವೆ.

ಪೊಲೀಸರ ನಿಸ್ವಾರ್ಥ ಸೇವೆ ಬೇರೆಯವರಿಗೆ ಸ್ಫೋರ್ತಿಯಾಗಲಿ. ಇಂದು ತೆಗೆದುಕೊಂಡಿರುವ ಪದಕಗಳು‌ ಅತ್ಯಂತ ಶ್ಲಾಘನೀಯ. ಮುಂದಿನ ಪೀಳಿಗೆಗೆ ಆದರ್ಶವಾಗಲಿ. ನಿಮ್ಮಂತೆ ಸೇವೆ ಮಾಡಿ ರಾಜ್ಯಕ್ಕೆ ಮತ್ತು ಇಲಾಖೆಗೆ ಕೀರ್ತಿಯನ್ನು ತರಲಿ ಎಂದು ಹೇಳಿದರು.

Share This Article