ಮಂಗಳೂರು ಬಾಂಬ್ ಪ್ರಕರಣ ತನಿಖೆಯ ನಂತರವೇ ಎಲ್ಲವೂ ಹೊರಬರಬೇಕು: ಬೊಮ್ಮಾಯಿ

Public TV
1 Min Read

ಧಾರವಾಡ/ಹುಬ್ಬಳ್ಳಿ: ಮಂಗಳೂರು ಬಾಂಬ್ ಪ್ರಕರಣ ಹಿನ್ನೆಲೆಯಲ್ಲಿ ಆದಿತ್ಯ ರಾವ್ ಆರೋಪಿಯನ್ನು ಬಂಧಿಸಲಾಗಿದ್ದು, ತನಿಖೆ ನಡೆಯುತ್ತಿದೆ. ತನಿಖೆಯಿಂದಲೇ ಎಲ್ಲವೂ ಹೊರಬರಬೇಕು. ಬಂಧನವಾದ ಆರೋಪಿಯ ಸಮಗ್ರವಾದ ತನಿಖೆ ಆದ ಮೇಲೆ ಅವನ ಜತೆ ಯಾರಿದ್ದಾರೆಂದು ತಿಳಿಯುತ್ತದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು.

ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಂಗಳೂರು ಬಾಂಬ್ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಎಲ್ಲ ರೀತಿಯಿಂದಲೂ ತನಿಖೆಗಳು ಆಗುತ್ತದೆ. ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್ ಇಟ್ಟಿದ್ದ ಆರೋಪಿ ಮಾನಸಿಕ ಅಸ್ವಸ್ಥ ಎಂದಿರುವ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ಆದಿತ್ಯರಾವ್ ಮಾನಸಿಕ ಅಸ್ವಸ್ಥ ಎಂದು ನಾನು ಹೇಳಿಲ್ಲ ಎಂದು ಸ್ಪಷ್ಟಪಡಿಸಿದರು.

ಬಾಂಬ್ ಇಟ್ಟ ಯುವಕನ ಹಿನ್ನೆಲೆಯ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತಿದೆ. ಬಾಂಬ್ ಸಿಕ್ಕ ತಕ್ಷಣ ಸಿಸಿಟಿವಿ ದೃಶ್ಯ ಕಲೆ ಹಾಕಿ ಮೂರು ತಂಡಗಳನ್ನ ರಚನೆ ಮಾಡಲಾಗಿತ್ತು. ಅಲ್ಲದೇ ಅವನ ಮನೆಯವರು ಹಲವಾರು ವಿಚಾರಗಳನ್ನ ಆತನ ಬಗ್ಗೆ ಹೇಳಿದ್ದಾರೆ. ಆದರೆ ಯಾವುದೂ ಕೂಡ ಅಂತಿಮ ನಿರ್ಧಾರಕ್ಕೆ ಬಂದಿಲ್ಲ. ಅವನು ಮಾನಸಿಕ ಅಸ್ವಸ್ಥ ಎಂದು ಎಲ್ಲಿಯೂ ನಾನು ಹೇಳಿಲ್ಲ, ತನಿಖೆ ಆಗದ ಹೊರತು ನಿಖರವಾಗಿ ಏನೂ ಹೇಳುವುದಿಲ್ಲ ಎಂದರು.

ಕುಮಾರಸ್ವಾಮಿಯವರು ಎಫ್‍ಎಸ್‍ಎಲ್ ತಜ್ಞರಂತೆ ಮಾತನಾಡುತ್ತಿದ್ದಾರೆ. ಅವರು ಸರ್ಟಿಫಿಕೇಟ್ ಕೊಡಲಿಕ್ಕೆ ಬರುತ್ತಾ? ಕುಮಾರಸ್ವಾಮಿಯವರು ಅಲ್ಪಸಂಖ್ಯಾತ ಓಲೈಕೆ ರಾಜಕಾರಣದಲ್ಲಿ ಕಾಂಗ್ರೆಸ್ ಜೊತೆ ಪೈಪೋಟಿ ಮಾಡ್ತಾ ಇದ್ದಾರೆ. ಹೀಗಾಗಿ ಅವರು ತೀವ್ರ ಗತಿಯಲ್ಲಿ ರಿಯಾಕ್ಟ್ ಮಾಡುತ್ತಿದ್ದಾರೆ. ಕುಮಾರಸ್ವಾಮಿಯವರು ಪೊಲೀಸರ ಬಗ್ಗೆ ಮಾತನಾಡುತ್ತಾರೆ, ನಾವು ಅಲ್ಲಿ ಪೊಲೀಸರನ್ನು ನೇಮಕ ಮಾಡಿಲ್ಲ. ಎಲ್ಲರೂ ಕುಮಾರಸ್ವಾಮಿ ಸಿಎಂ ಇದ್ದ ಅವಧಿಯಲ್ಲಿ ನೇಮಕವಾದವರು ಎಂದರು.

ಉಗ್ರ ನಿಗ್ರಹ ದಳದ ಕುರಿತು ಮಾತನಾಡಿದ ಅವರು, ಉಗ್ರ ನಿಗ್ರಹ ದಳ ರಾಜ್ಯಕ್ಕೆ ಒಂದಿದೆ, ಅದನ್ನ ಇನ್ನಷ್ಟು ಬಲ ಪಡಿಸುತ್ತೆವೆ ಎಂದರು.

Share This Article
Leave a Comment

Leave a Reply

Your email address will not be published. Required fields are marked *