ನಾವು ಅನ್ಯಾಯ ಸಹಿಸುವುದಿಲ್ಲ- ದೀದಿ ನೆಲದಲ್ಲಿ ವಿಪಕ್ಷಗಳ ವಿರುದ್ಧ ಶಾ ಗುಡುಗು

Public TV
2 Min Read

– ದೇಶದ್ರೋಹಿಗಳಿಗೆ ಗುಂಡಿಕ್ಕಿ: ಸಮಾವೇಶದಲ್ಲಿ ಕೇಳಿಬಂದ  ಕೂಗು

ಕೋಲ್ಕತ್ತಾ: ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಮಾಡುವುದನ್ನು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿರೋಧಿಸಿದರು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಆರೋಪಿಸಿದ್ದಾರೆ.

ಕೋಲ್ಕತ್ತಾದಲ್ಲಿ ‘ನಾವು ಅನ್ಯಾಯವನ್ನು ಸಹಿಸುವುದಿಲ್ಲ’ ಎಂಬ ಅಭಿಯಾನವನ್ನು ಇಂದು ಪ್ರಾರಂಭಿಸಿ ಮಾತನಾಡಿದ ಅವರು, ಮಮತಾ ಬ್ಯಾನರ್ಜಿ ಅವರು ಕಾಂಗ್ರೆಸ್, ಎಸ್‍ಪಿ, ಬಿಎಸ್‍ಪಿ, ಎಡಪಂಥೀಯರೊಂದಿಗೆ ಸೇರಿ ರಾಮ್ ಮಂದಿರ ನಿರ್ಮಾಣವನ್ನು ವಿರೋಧಿಸಿದರು. ಅಷ್ಟೇ ಅಲ್ಲದೆ ಸಂವಿಧಾನದ 370ನೇ ವಿಧಿಯನ್ನು ರದ್ದುಗೊಳಿಸಿದ್ದಕ್ಕೆ ವಿರೋಧ ವ್ಯಕ್ತಪಡಿಸಿದರು ಹಾಗೂ ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಅಲ್ಪಸಂಖ್ಯಾತರನ್ನು ಎತ್ತಿ ಹಿಡಿದರು ಎಂದು ದೂರಿದರು.

‘ಲೋಕಸಭಾ ಚುನಾವಣೆಯ ಸಮಯದಲ್ಲಿ ನೀವು ನಮ್ಮನ್ನು ತಡೆಯಲು ಶ್ರಮಿಸಿದ್ದೀರಿ. ಹೆಲಿಕಾಪ್ಟರ್ ಇಳಿಸಲು ಅವಕಾಶ ನೀಡಲಿಲ್ಲ. ಸಮಾವೇಶಗಳಿಗೆ ಅವಕಾಶ ನೀಡಲಿಲ್ಲ. ಬಿಜೆಪಿ ಕಾರ್ಯಕರ್ತರ ಮೇಲೆ ಗುಂಡು ಹಾರಿಸಲಾಗಿತ್ತು. ಬಂಗಾಳದಲ್ಲಿ ಗಲಭೆಗಳು ನಡೆದವು, ರೈಲುಗಳು ಸುಟ್ಟುಹೋದವು, ಅಮಾಯಕರು ಕೊಲ್ಲಲ್ಪಟ್ಟರು. ನಮ್ಮ 40ಕ್ಕೂ ಹೆಚ್ಚು ಕಾರ್ಯಕರ್ತರು ಕೊಲೆಯಾದರು ಎಂದು ಮಮತಾ ಬ್ಯಾನರ್ಜಿ ಅವರ ವಿರುದ್ಧ ವಾಗ್ದಾಳಿ ನಡೆಸಿದರು.

ನೀವು ತೃಣಮೂಲ ಮತ್ತು ಎಡಪಂಥೀಯರಿಗೆ ಇಷ್ಟು ವರ್ಷಗಳ ಕಾಲ ಅವಕಾಶ ಕೊಟ್ಟಿದ್ದೀರಿ. ನಮಗೆ ಐದು ವರ್ಷಗಳ ಕಾಲ ಆಡಳಿತ ನಡೆಸಲು ಅವಕಾಶ ಕೊಡಿ. ನಾವು ಪಶ್ಚಿಮ ಬಂಗಾಳನ್ನು ಅಭಿವೃದ್ಧಿಗೊಳಿಸುತ್ತೇವೆ ಎಂದು ಶಾ ಮತದಾರರಲ್ಲಿ ಮನವಿ ಮಾಡಿಕೊಂಡರು.

ಬಂಗಾಳದ ಅಭಿವೃದ್ಧಿಗೆ ದೀದಿಯಿಂದ ಫುಲ್ ಸ್ಟಾಪ್:
ಪಶ್ಚಿಮ ಬಂಗಾಳವನ್ನು ಟಿಎಂಸಿ ಮತ್ತು ಎಡಪಂಥೀಯರು ಸಾಲಕ್ಕೆ ಮುಳುಗಿಸಿದ್ದಾರೆ. ದೀದಿ ನೇತೃತ್ವದ ಸರ್ಕಾರವು ಮೂರು ಲಕ್ಷ ಕೋಟಿ ರೂ. ಸಾಲ ಮಾಡಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಯೋಜನೆಗಳು ಪಶ್ಚಿಮ ಬಂಗಾಳದಲ್ಲಿ ಜಾರಿಗೆ ತರಲು ಮಮತಾ ಬ್ಯಾನರ್ಜಿ ಅನುಮತಿ ನೀಡುತ್ತಿಲ್ಲ. ಅವರು ಬಂಗಾಳದ ಅಭಿವೃದ್ಧಿಯನ್ನು ನಿಲ್ಲಿಸಿದ್ದಾರೆ. ರೈತರಿಗಾಗಿ ಪ್ರಾರಂಭಿಸಲಾದ ಪ್ರಧಾನಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯನ್ನು ಜಾರಿಗೆ ತರಲಿಲ್ಲ. ರೈತರು ಸಾಲದಲ್ಲಿದ್ದಾರೆ. ಆದರೆ ಮಮತಾ ಬ್ಯಾನರ್ಜಿ ದುರಹಂಕಾರದಲ್ಲಿದ್ದಾರೆ. ಬಂಗಾಳದಲ್ಲಿ ಭ್ರಷ್ಟಾಚಾರ ಚಾಲ್ತಿಯಲ್ಲಿದೆ. ಸಿಂಡಿಕೇಟ್ ಸರ್ಕಾರದ ಆಶ್ರಯದಲ್ಲಿ ನಡೆಯುತ್ತಿದೆ. ಬಿಜೆಪಿ ಸರ್ಕಾರ ರಚನೆಯಾದ ನಂತರ ಅಂತಹವರನ್ನು ಜೈಲಿಗೆ ಕಳುಹಿಸಲಾಗುತ್ತದೆ ಎಂದು ಭರವಸೆ ನೀಡಿದರು.

ಮಮತಾ ಬ್ಯಾನರ್ಜಿ ಅವರು ಪಶ್ಚಿಮ ಬಂಗಾಳದಲ್ಲಿ ದುರ್ಗಾ ಪೂಜೆಯನ್ನು ನಿಷೇಧಿಸಿದ್ದಾರೆ. ಜನರು ಪೂಜಿ ಸಲ್ಲಿಸುವುದಕ್ಕೂ ಹೈಕೋರ್ಟಿಗೆ ಹೋಗಬೇಕಾಗಿತ್ತು. ರಾಮನವಮಿಯನ್ನು ಪಾಲಿಸಲು ದೀದಿ ಅನುಮತಿಸುವುದಿಲ್ಲ. ಸರಸ್ವತಿ ಪೂಜೆಯನ್ನು ಶಾಲೆಗಳಲ್ಲಿ ತಡೆಯಲಾಗಿದೆ ಎಂದು ದೂರಿದರು.

ರಾಜ್ಯದಲ್ಲಿ ಅನ್ಯಾಯ, ಭ್ರಷ್ಟಾಚಾರ, ಗಲಭೆ, ನಿರುದ್ಯೋಗ ಹೆಚ್ಚಾಗುತ್ತದೆ ಎಂದು ಗುಡುಗಿದರು. ಆಗ ಕೆಲ ಕಾರ್ಯಕರ್ತರು ‘ದೇಶದ್ರೋಹಿಗಳನ್ನು ಶೂಟ್ ಮಾಡಿ’ ಎಂಬ ಘೋಷಣೆ ಕೂಗಿದರು.

ಇದಕ್ಕೂ ಮುನ್ನ ಅಮಿತ್ ಶಾ ಅವರು ಕೋಲ್ಕತ್ತಾ ತಲುಪಿದಾಗ ತೃಣಮೂಲ ಕಾಂಗ್ರೆಸ್ ಮತ್ತು ಎಐವೈಎಲ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದರು. ಅಷ್ಟೇ ಅಲ್ಲದೆ ಕಪ್ಪು ಧ್ವಜಗಳನ್ನು ತೋರಿಸಿ ಶಾ ಗೋ ಬ್ಯಾಕ್ ಎಂದು ಘೋಷಣೆ ಕೂಗಿದ್ದರು. ಮತ್ತೊಂದೆಡೆ ಬಿಜೆಪಿ ಕಾರ್ಯಕರ್ತರು ಕೋಲ್ಕತ್ತಾದ ಅನೇಕ ಸ್ಥಳಗಳಲ್ಲಿ ತೃಣಮೂಲ ಕಾಂಗ್ರೆಸ್ ವಿರುದ್ಧ ಘೋಷಣೆ ಕೂಗಿದರು.

Share This Article
Leave a Comment

Leave a Reply

Your email address will not be published. Required fields are marked *