ದೇವರ ವಿರುದ್ಧವೇ ಸೇಡು – 10 ವರ್ಷಗಳಿಂದ ದೇವಸ್ಥಾನದ ಹುಂಡಿ ಹಣ ಕದಿಯುತ್ತಿದ್ದ HIV ಸೋಂಕಿತ ಅರೆಸ್ಟ್

Public TV
2 Min Read
Chattisgarh Temple Theft Arrest

ರಾಯ್ಪುರ್: ಸಾಮಾನ್ಯವಾಗಿ ನಮಗೆ ಯಾರಾದ್ರೂ ದ್ರೋಹ ಮಾಡಿದ್ರೆ ಅಥವಾ ಕಿರಿಕ್‌ ಮಾಡಿದ್ರೆ ಅವರ ವಿರುದ್ಧ ಸೇಡು ತೀರಿಸಿಕೊಳ್ಳಲು ಬಹುಕಾಲ ಹೊಂಚು ಹಾಕ್ತೀವಿ. ಆದ್ರೆ ಇಲ್ಲೊಬ್ಬ ವ್ಯಕ್ತಿ ತನ್ನ ಈ ಸ್ಥಿತಿಗೆ ದೇವರೇ ಕಾರಣ ಅಂತ ದೂಷಿಸಿದ್ದಾನೆ. ಅಷ್ಟೇ ಅಲ್ಲ ದೇವರ ವಿರುದ್ಧ ಸೇಡು ತೀರಿಸಿಕೊಳ್ಳಲು ಹುಂಡಿಗಳ ಕಳ್ಳತನವನ್ನೂ ಮಾಡಿದ್ದಾನೆ.

ಹೌದು. ಜೈಲಿನಲ್ಲಿರುವಾಗ ಹೆಚ್‌ಐವಿ ಸೋಂಕಿಗೆ ತುತ್ತಾಗಿದ್ದ ವ್ಯಕ್ತಿಯೊಬ್ಬ ದೇವರ ವಿರುದ್ಧ ಸೇಡು ತೀರಿಸಿಕೊಳ್ಳಲು ದೇವಾಲಯ, ಜೈನ ದೇವಾಲಯ ಸೇರಿದಂತೆ ಹಲವೆಡೆ ಕಳ್ಳತನ ಮಾಡಿದ ಘಟನೆ ಛತ್ತೀಸ್‌ಗಡದಲ್ಲಿ ನಡೆದಿದೆ. ಸದ್ಯ ಈತನನ್ನು ದುರ್ಗ್ ಠಾಣೆಯ ಪೊಲೀಸರು ಬಂಧಿಸಿದ್ದಾರೆ.ಇದನ್ನೂ ಓದಿ: ಅಭಿಮಾನ್‌ ಸ್ಟುಡಿಯೋ ಜಮೀನು ವಿವಾದ – ವಿಷ್ಣುಸೇನಾ ಸಮತಿಯಿಂದ ಅರಣ್ಯ ಸಚಿವರ ಭೇಟಿ

ಬಂಧಿತ ವ್ಯಕ್ತಿ 2012ರ ಪ್ರಕರಣವೊಂದರಲ್ಲಿ ಜೈಲು ಸೇರಿದ್ದಾಗ ಹೆಚ್‌ಐವಿ ಸೋಂಕು ತಗುಲಿತ್ತು. ಇದರಿಂದಾಗಿ ದೇವರ ಮೇಲಿನ ನಂಬಿಕೆ ಕಳೆದುಕೊಂಡು ದೇಗುಲಗಳಲ್ಲಿನ ಹುಂಡಿ ಕಳ್ಳತನ ಮಾಡುವುದರಲ್ಲಿ ತೊಡಗಿಕೊಂಡಿದ್ದ.

ಈ ಕುರಿತು ಪೊಲೀಸರು ಮಾಹಿತಿ ನೀಡಿದ್ದು, ಸುಮಾರು 10 ವರ್ಷಗಳಿಂದ ಛತ್ತೀಸ್‌ಗಢದ ದುರ್ಗ್ ಮತ್ತು ಸುತ್ತಮುತ್ತಲಿನ ದೇವಾಲಯಗಳಲ್ಲಿ ಹುಂಡಿ ಕಾಣಿಕೆಯ ಹಣ ಕಳ್ಳತನ ಆಗ್ತಿತ್ತು. ಬೀಗ ಮುರಿದು ಹಣ ಕಳ್ಳತನ ಮಾಡಿ, ಯಾವುದೇ ಸಾಕ್ಷಿಯನ್ನು ಬಿಡದೇ ಕಳ್ಳ ಪರಾರಿಯಾಗಿ ಬಿಡುತ್ತಿದ್ದ. ಈ ರೀತಿ 10ಕ್ಕೂ ಹೆಚ್ಚು ದೇವಾಲಯಗಳಲ್ಲಿ ಕಳ್ಳತನ ಮಾಡಿದ್ದಾನೆ. ಅದಲ್ಲದೇ ಇನ್ನೂ ಬೇರೆ ಕಳ್ಳತನ ಪ್ರಕರಣಗಳಲ್ಲಿ ಈತನೇ ಭಾಗಿಯಾಗಿರುವುದಾಗಿ ಪೊಲೀಸರು ಶಂಕಿಸಿದ್ದಾರೆ.

ಆರೋಪಿ 2012ರಲ್ಲಿ ಜೈಲಿನಿಂದ ಬಿಡುಗಡೆಯಾದ ನಂತರ ದೇವಾಲಯದ ಕಳ್ಳತನ ಮಾಡಲು ಪ್ರಾರಂಭಿಸಿದ್ದ. ಮೊದಲು ದೇವಾಲಯದ ಪರಿಶೀಲನೆ ಮಾಡಿ, ಮಾರನೇ ದಿನ ಸ್ಕೂಟರ್‌ನಲ್ಲಿ ಬರುತ್ತಿದ್ದ. ದೂರದಲ್ಲಿಯೇ ಸ್ಕೂಟರ್‌ನ್ನು ನಿಲ್ಲಿಸಿ, ಬಟ್ಟೆ ಬದಲಾಯಿಸಿ ಬಳಿಕ ಕಳ್ಳತನಕ್ಕೆ ಇಳಿಯುತ್ತಿದ್ದ. ಕೆಲಸ ಮುಗಿದ ನಂತರ ಮತ್ತೆ ಬಟ್ಟೆ ಬದಲಾಯಿಸಿಕೊಂಡು ಮನೆಗೆ ಹೋಗುತ್ತಿದ್ದ. ಹೀಗೆ ಆ.23 ಮತ್ತು 24ರ ಮಧ್ಯರಾತ್ರಿ ಆರೋಪಿಯು ದುರ್ಗ್ ಹೊರವಲಯದಲ್ಲಿರುವ ಜೈನ ದೇವಾಲಯಕ್ಕೆ ನುಗ್ಗಿ ಕಳ್ಳತನ ಮಾಡಿದ್ದ.ಇದನ್ನೂ ಓದಿ: ಧರ್ಮಸ್ಥಳ ಬುರುಡೆ ಕೇಸ್‌ಗೆ ಬೆಂಗಳೂರಿನ ನಂಟು – ತಿಮರೋಡಿ ಆಪ್ತ ಜಯಂತ್ ಮನೆ ಜಾಲಾಡಿದ SIT

ಕೊನೆಗೆ ಅಪರಾಧ ನಿಗ್ರಹ ದಳ, ಸೈಬರ್ ಘಟಕ ಮತ್ತು ನೆವಾಯಿ ಪೊಲೀಸ್ ಠಾಣೆಯ ಜಂಟಿ ತಂಡವು ಕಳ್ಳತನ ನಡೆದ ಪ್ರದೇಶದಲ್ಲಿನ ಸಿಸಿಟಿವಿ ದೃಶ್ಯಗಳನ್ನು ಸ್ಕ್ಯಾನ್ ಮಾಡಿ `ತ್ರಿಣಯನ್’ ಅಪ್ಲಿಕೇಶನ್ ಬಳಸಿ ಆತನ ಚಲನವಲನಗಳನ್ನು ಪತ್ತೆಹಚ್ಚಿದರು. ಬಳಿಕ ಆತನ ಮಾರ್ಗವನ್ನು ಕಂಡುಹಿಡಿದು, ಮನೆಯನ್ನು ಪತ್ತೆಹಚ್ಚಿ ವ್ಯಕ್ತಿಯನ್ನು ವಶಕ್ಕೆ ಪಡೆದುಕೊಂಡರು.

ಬಳಿಕ ಆತನನ್ನು ವಿಚಾರಣೆಗೊಳಪಡಿಸಿದಾಗ ಈವರೆಗೆ ನೆವಾಯ್, ಸುಪೇಲಾ, ಪದ್ಮನಾಭಪುರ, ಭಿಲಾಯಿ ಭಟ್ಟಿ ಮತ್ತು ಭಿಲಾಯಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರುವ 10ಕ್ಕೂ ಹೆಚ್ಚು ದೇವಾಲಯಗಳಲ್ಲಿ ಹುಂಡಿ ಕಳ್ಳತನ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ. ನಾನು ಜೈಲಿನಲ್ಲಿರುವಾಗ ನನಗೆ ಹೆಚ್‌ಐವಿ ಸೋಂಕು ತಗುಲಿತ್ತು. ಈ ಮೂಲಕ ದೇವರು ನನ್ನ ಜೀವನವನ್ನೇ ಹಾಳು ಮಾಡಿದ. ಹೀಗಾಗಿ ನಾನು ದೇವರ ವಿರುದ್ಧ ಸೇಡು ತೀರಿಸಿಕೊಳ್ಳಲು ಈ ರೀತಿ ಮಾಡಿದೆ. ಇನ್ನೂ ಕದ್ದ ಹಣವನ್ನು ನಾನು ಕೇವಲ ಜೀವನ ನಡೆಸಲು ಬಳಸುತ್ತೇನೆ ಎಂದು ಹೇಳಿಕೊಂಡಿದ್ದಾನೆ.

ಸದ್ಯ ಆತನನ್ನು ಬಂಧಿಸಿ, 14 ದಿನ ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ. ಪೊಲೀಸರು 1,282 ರೂ. ಮೌಲ್ಯದ ನಾಣ್ಯಗಳು ಮತ್ತು ಸ್ಕೂಟರ್ ಅನ್ನು ವಶಪಡಿಸಿಕೊಂಡಿದ್ದಾರೆ.ಇದನ್ನೂ ಓದಿ: ಕಿಚ್ಚನ ಬರ್ತ್‌ಡೇ ಸೆಲಬ್ರೇಷನ್‌ಗೆ ಸ್ಥಳ, ಟೈಮಿಂಗ್ ಫಿಕ್ಸ್!

Share This Article