ಸಾರ್ವಜನಿಕರ ದರ್ಶನಕ್ಕೆ ತೆರೆದ ಅಬುಧಾಬಿ ಹಿಂದೂ ದೇವಾಲಯ- ಡ್ರೆಸ್‌ ಕೋಡ್‌, ಟೈಮಿಂಗ್ಸ್‌ ವಿವರ ಇಲ್ಲಿದೆ

Public TV
2 Min Read

ಅಬುಧಾಬಿ: ಇದೇ ವರ್ಷ ಫೆಬ್ರವರಿ 14 ರಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಉದ್ಘಾಟಿಸಿದ UAEಯ ಮೊದಲ ಹಿಂದೂ ದೇವಾಲಯವನ್ನು ಶುಕ್ರವಾರ ಭಕ್ತರು ಮತ್ತು ಸಾರ್ವಜನಿಕರಿಗೆ ತೆರೆಯಲಾಗಿದೆ. ಆದರೆ ಭಕ್ತರಿಗೆ ಡ್ರೆಸ್‌ ಕೋಡ್‌ (Dress Code) ಮಾಡಲಾಗಿದ್ದು, ದರ್ಶನಕ್ಕೆ ಸಮಯ ಕೂಡ ನಿಗದಿಪಡಿಸಲಾಗಿದೆ.

ಈ ಸಂಬಂಧ BAPS ಹಿಂದೂ ಮಂದಿರದ ಎಕ್ಸ್‌ ಖಾತೆಯಲ್ಲಿ ವಿವರ ನೀಡಲಾಗಿದೆ. ಬಹಳ ದಿನಗಳ ಕಾಯುವಿಕೆ ಮುಗಿದಿದೆ. ಅಬುಧಾಬಿ ಮಂದಿರ ಈಗ ಸಾರ್ವಜನಿಕರ ದರ್ಶನಕ್ಕೆ ತೆರೆದಿರುತ್ತದೆ ಎಂಬ ಪೋಸ್ಟ್‌ ಜೊತೆಗೆ ಭವ್ಯ ದೇಗುಲದ ಅದ್ಭುತ ವೀಡಿಯೋವನ್ನು ಸಹ ಹಂಚಿಕೊಂಡಿದೆ. ಸೋಮವಾರ ಹೊರತುಪಡಿಸಿ ಎಲ್ಲಾ ದಿನಗಳಲ್ಲಿ ದೇವಾಲಯವು ಬೆಳಗ್ಗೆ 9 ರಿಂದ ರಾತ್ರಿ 8 ರವರೆಗೆ ತೆರೆದಿರುತ್ತದೆ ಎಂದು ಪೋಸ್ಟ್ ನಲ್ಲಿ ಉಲ್ಲೇಖಿಸಲಾಗಿದೆ. ಇದನ್ನೂ ಓದಿ:ಅಬುಧಾಬಿಯಲ್ಲಿ ಮೊದಲ ಹಿಂದೂ ದೇವಾಲಯ ಉದ್ಘಾಟಿಸಿದ ಪ್ರಧಾನಿ ಮೋದಿ

ನಿಯಮಗಳ ವಿವರ: ಅಬುಧಾಬಿ ದೇವಸ್ಥಾನಕ್ಕೆ (Abu Dhabi Hindu Temple) ಭೇಟಿ ನೀಡಲು ಡ್ರೆಸ್ ಕೋಡ್ ಮಾಡಲಾಗಿದೆ. ದೇವಾಲಯದ ವೆಬ್‌ಸೈಟ್‌ನಲ್ಲಿ ಭಕ್ತರು ಯಾವ ರೀತಿಯ ಬಟ್ಟೆಗೆ ಆದ್ಯತೆ ನೀಡಬೇಕು ಮತ್ತು ಯಾವುದನ್ನು ನಿಷೇಧಿಸಲಾಗಿದೆ. ಹಾಗೆಯೇ ಫೋಟೋಗ್ರಫಿ ನಿಯಮಗಳು ಇತ್ಯಾದಿಗಳ ಬಗ್ಗೆ ಸವಿವರವಾಗಿ ಉಲ್ಲೇಖಿಸಲಾಗಿದೆ.

ಡ್ರೆಸ್‌ ಕೋಡ್‌ ಏನು..?
* ಭಕ್ತರು ಕುತ್ತಿಗೆ, ಮೊಣಕೈ ಮತ್ತು ಮೊಣಕಾಲುಗಳು ಕಾಣುವಂತೆ ಬಟ್ಟೆ ಧರಿಸಬಾರದು.
* ಕ್ಯಾಪ್ಸ್, ಟೀ ಶರ್ಟ್‌ಗಳು ಮತ್ತು ಆಕ್ಷೇಪಾರ್ಹ ವಿನ್ಯಾಸಗಳನ್ನು ಹೊಂದಿರುವ ಇತರ ಉಡುಪುಗಳನ್ನು ಅನುಮತಿಸಲಾಗುವುದಿಲ್ಲ.
* ಅರೆಬರೆ ಬಟ್ಟೆ ಅಥವಾ ಬಿಗಿಯಾದ ಬಟ್ಟೆಗಳಿಗೆ ಅವಕಾಶ ಇಲ್ಲ.
* ತಬ್ಬಿಬ್ಬುಗೊಳಿಸುವ ಶಬ್ದಗಳು ಹಾಗೂ ಶೈನಿಂಗ್‌ ಬಟ್ಟೆಗಳಿಗೂ ನಿಷೇಧ.

ಈ ಮಾರ್ಗಸೂಚಿಗಳನ್ನು ಅನುಸರಿಸದ ಅಥವಾ ನಮ್ಮ ಸಿಬ್ಬಂದಿಯಿಂದ ಸೂಕ್ತವಲ್ಲವೆಂದು ಪರಿಗಣಿಸಲ್ಪಟ್ಟಿರುವ ಭಕ್ತರಿಗೆ ದೇಗುಲದೊಳಗೆ ಪ್ರವೇಶವನ್ನು ನಿರಾಕರಿಸಲಾಗುವುದು. ಒಟ್ಟಿನಲ್ಲಿ ಪ್ರಶಾಂತ ವಾತಾವರಣವನ್ನು ಕಾಪಾಡಲು ಮತ್ತು ನಮ್ಮ ಆವರಣದ ಕ್ರಮಬದ್ಧ ನಿರ್ವಹಣೆಯನ್ನು ಖಚಿತಪಡಿಸಿಕೊಳ್ಳಲು ಈ ಮಾರ್ಗಸೂಚಿಗಳನ್ನು ಅನುಸರಿಸುವುದು ಅವಶ್ಯಕ ಎಂದು ದೇವಸ್ಥಾನದ ಅಧಿಕಾರಿಗಳು ಹೇಳಿದ್ದಾರೆ.

ಸುಮಾರು 700 ಕೋಟಿ ರೂಪಾಯಿ ವೆಚ್ಚದಲ್ಲಿ ದುಬೈ-ಅಬುಧಾಬಿ ಶೇಖ್ ಜಾಯೆದ್ ಹೆದ್ದಾರಿಯ ಅಲ್ ರಹ್ಬಾ ಬಳಿಯ ಅಬು ಮುರೇಖಾದಲ್ಲಿ 27 ಎಕರೆ ಪ್ರದೇಶದಲ್ಲಿ ಬೋಚಸನ್ವಾಸಿ ಶ್ರೀ ಅಕ್ಷರ ಪುರುಷೋತ್ತಮ ಸ್ವಾಮಿನಾರಾಯಣ ಸಂಸ್ಥೆ (BAPS) ಈ ದೇವಾಲಯವನ್ನು ನಿರ್ಮಿಸಿದೆ. ದೇವಾಲಯದ ಭೂಮಿಯನ್ನು ಯುಎಇ ಸರ್ಕಾರ ದಾನ ಮಾಡಿದೆ.

Share This Article