ಬಾಂಗ್ಲಾದೇಶದಲ್ಲಿ ಹಿಂದೂ ಶಿಕ್ಷಕನ ಮನೆಗೆ ಬೆಂಕಿ

1 Min Read

ಢಾಕಾ: ಬಾಂಗ್ಲಾದೇಶದಲ್ಲಿ (Bangladesh) ಹಿಂದೂಗಳ ಮೇಲಿನ ದೌರ್ಜನ್ಯ ಮುಂದುವರಿದಿದೆ. ಸಿಲ್ಹೆಟ್‌ ಜಿಲ್ಲೆಯ ಗೋವೈನ್‌ಘಾಟ್‌ ಉಪಜಿಲ್ಲಾದಲ್ಲಿ ಹಿಂದೂ ಶಿಕ್ಷಕರೊಬ್ಬರ (Hindu Teacher) ಮನೆಗೆ ಬೆಂಕಿ ಹಚ್ಚಲಾಗಿದೆ.

ಶಾಲಾ ಶಿಕ್ಷಕ ಬೀರೇಂದ್ರ ಕುಮಾರ್ ಡೇ ಅವರ ಮನೆಯಲ್ಲಿ ಈ ಘಟನೆ ನಡೆದಿದ್ದು, ಅವರ ಕುಟುಂಬ ಮತ್ತು ಹತ್ತಿರದ ನಿವಾಸಿಗಳಲ್ಲಿ ಭಯ ಹುಟ್ಟುಹಾಕಿದೆ. ನಂದಿರ್‌ಗಾಂವ್ ಒಕ್ಕೂಟದ ಬಹೋರ್ ಗ್ರಾಮದಲ್ಲಿ ಇಸ್ಲಾಮಿಸ್ಟ್ ಗುಂಪುಗಳು ಈ ಕೃತ್ಯ ಎಸಗಿವೆ ಎಂದು ಆರೋಪಿಸಲಾಗಿದೆ. ಇದನ್ನೂ ಓದಿ: ಬಾಂಗ್ಲಾದೇಶದ ಹಿಂದೂ ವ್ಯಕ್ತಿ ದೀಪು ದಾಸ್ ಹತ್ಯೆ ಕೇಸ್‌ – ಪ್ರಮುಖ ಆರೋಪಿ ಬಂಧನ

ದಾಳಿಯ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಪ್ರಸಾರವಾಗಿದೆ. ಬೆಂಕಿಯು ಮನೆಯನ್ನು ವೇಗವಾಗಿ ಆವರಿಸಿಕೊಂಡು, ಕುಟುಂಬ ಸದಸ್ಯರು ತಪ್ಪಿಸಿಕೊಳ್ಳಲು ಹೆಣಗಾಡುತ್ತಿರುವ ದೃಶ್ಯವು ವೀಡಿಯೋದಲ್ಲಿದೆ.

ಈ ವಾರದ ಆರಂಭದಲ್ಲಿ, ಫೆನಿ ಜಿಲ್ಲೆಯ ದಗನ್‌ಭುಯಾನ್ ಉಪಜಿಲ್ಲಾದಲ್ಲಿ ಮತ್ತೊಬ್ಬ ಹಿಂದೂ ವ್ಯಕ್ತಿಯನ್ನು ದುಷ್ಕರ್ಮಿಗಳು ಕಡಿದು, ಇರಿದು ಕೊಂದಿದ್ದರು. ಬಾಂಗ್ಲಾದೇಶದ ಜಗತ್‌ಪುರ ಗ್ರಾಮದ ಬೆಳೆ ಹೊಲದಿಂದ 27 ವರ್ಷದ ಆಟೋರಿಕ್ಷಾ ಚಾಲಕ ಸಮೀರ್ ದಾಸ್ ಅವರ ಮೃತದೇಹ ಪತ್ತೆಯಾಗಿತ್ತು.

ಸಮೀರ್ ಭಾನುವಾರ ಸಂಜೆ ತನ್ನ ಆಟೋರಿಕ್ಷಾದಲ್ಲಿ ಮನೆಯಿಂದ ಹೊರಟಿದ್ದ. ತಡರಾತ್ರಿಯಾದರೂ ಅವನು ಹಿಂತಿರುಗದಿದ್ದಾಗ, ಕುಟುಂಬಸ್ಥರು ವಿವಿಧ ಸ್ಥಳಗಳಲ್ಲಿ ಅವನನ್ನು ಹುಡುಕಲು ಪ್ರಾರಂಭಿಸಿದರು. ಸ್ಥಳೀಯ ನಿವಾಸಿಗಳು ಉಪಜಿಲ್ಲಾದ ಸದರ್ ಒಕ್ಕೂಟದ ವ್ಯಾಪ್ತಿಯ ಜಗತ್‌ಪುರ ಗ್ರಾಮದ ಹೊಲವೊಂದರಲ್ಲಿ ಸಮೀರ್‌ನ ಶವವನ್ನು ಪತ್ತೆ ಮಾಡಿದ್ದರು. ಪೊಲೀಸರು ಸ್ಥಳಕ್ಕೆ ಧಾವಿಸಿ ಶವವನ್ನು ಹೊರತೆಗೆದಿದ್ದಾರೆ. ಇದನ್ನೂ ಓದಿ: ಬಾಂಗ್ಲಾದೇಶದಲ್ಲಿ ಮತ್ತೊಬ್ಬ ಹಿಂದೂ ಬಲಿ – ಕಿಡಿಗೇಡಿಗಳಿಂದ ಪಾರಾಗಿದ್ದ ಉದ್ಯಮಿ ಚಿಕಿತ್ಸೆ ಫಲಕಾರಿಯಾಗದೇ ಸಾವು

ಇದು 24 ದಿನಗಳಲ್ಲಿ ಒಂಬತ್ತನೇ ಘಟನೆಯಾಗಿದ್ದು, ಬಾಂಗ್ಲಾದೇಶದಾದ್ಯಂತ ಹಿಂದೂ ಸಮುದಾಯಗಳನ್ನು ಗುರಿಯಾಗಿಸಿಕೊಂಡು ನಡೆಯುತ್ತಿರುವ ಹಿಂಸಾಚಾರದಲ್ಲಿ ಆತಂಕಕಾರಿ ಏರಿಕೆ ಕಂಡುಬಂದಿದೆ.

Share This Article