ಜೆಎನ್‍ಯು ವಿದ್ಯಾರ್ಥಿಗಳ ಮೇಲೆ ದಾಳಿ – ಕೃತ್ಯದ ಹೊಣೆಹೊತ್ತ ‘ಹಿಂದೂ ರಕ್ಷಾ ದಳ’

Public TV
2 Min Read

ನವದೆಹಲಿ: ಜೆಎನ್‍ಯು ಕ್ಯಾಂಪಸ್ ನಲ್ಲಿ ನಡೆದ ಹಿಂಸಾಚಾರದ ಜವಾಬ್ದಾರಿಯನ್ನು ‘ಹಿಂದೂ ರಕ್ಷಾ ದಳ’ ಸಂಘಟನೆ ಹೊತ್ತುಕೊಂಡಿದೆ. ಸಂಘಟನೆಯ ಅಧ್ಯಕ್ಷ ಪಿಂಕಿ ಚೌಧರಿ ಸ್ವತಃ ಘಟನೆಯು ಜವಾಬ್ದಾರಿ ಹೊತ್ತುಕೊಂಡಿದ್ದು ಕ್ಯಾಂಪಸ್ ನಲ್ಲಿ ರಾಷ್ಟ್ರ ವಿರೋಧಿ ಚಟುವಟಿಗಳು ನಡೆಯುತ್ತಿದ್ದು ಅದನ್ನು ನಾವು ಸಹಿಸುವುದಿಲ್ಲ ಎಂದಿದ್ದಾರೆ.

ಸೋಮವಾರ ರಾತ್ರಿ ಘಟನೆಯ ಸಂಬಂಧ ಸೋಷಿಯಲ್ ಮಿಡಿಯಾಗಳಲ್ಲಿ ವಿಡಿಯೋ ಒಂದು ವೈರಲ್ ಆಗಿದ್ದು ಈ ವಿಡಿಯೋದಲ್ಲಿ ಮಾತನಾಡಿರುವ ಪಿಂಕಿ ಚೌಧರಿ ಕ್ಯಾಂಪಸ್‍ನಲ್ಲಿ ನಡೆದ ಹಿಂಸಾಚಾರದ ಹಿಂದೆ ನಮ್ಮ ಸಂಘಟನೆಯ ಪಾತ್ರವಿದೆ. ನಮ್ಮ ಸಂಘಟನೆಯ ಸದಸ್ಯರು ಈ ಘಟನೆಯಲ್ಲಿ ಭಾಗಿಯಾಗಿದ್ದು ನಾವು ಈ ದಾಳಿಯನ್ನು ಒಪ್ಪಿಕೊಳುತ್ತೇವೆ ಎಂದಿದ್ದಾರೆ.

ಸದ್ಯ ವಿಡಿಯೋ ಆಧಾರದ ಮೇಲೆ ತನಿಖೆಗೆ ಮುಂದಾಗಿರುವ ದೆಹಲಿ ಪೊಲೀಸರು ಪಿಂಕಿ ಚೌಧರಿಯನ್ನು ಬಂಧಿಸಿ ತನಿಖೆಗೆ ಒಳಪಡಿಸುವ ಸಾಧ್ಯತೆ ಇದ್ದು ಸಂಘಟನೆಯ ಅಸ್ತಿತ್ವ ಮತ್ತು ಅದರ ಅಧ್ಯಕ್ಷ ಸ್ಥಾನದ ಬಗ್ಗೆ ಮಾಹಿತಿ ಪಡೆಯಲಿದ್ದಾರೆ ಎನ್ನಲಾಗಿದೆ.

ದಾಳಿಯ ಜವಾಬ್ದಾರಿಯನ್ನು ವಹಿಸಿಕೊಂಡರುವ ಪಿಂಕಿ ಚೌಧರಿ ನಿಜವಾದ ಹೆಸರು ಭೂಪೇಂದ್ರ ತೋಮರ್, ಈ ವ್ಯಕ್ತಿ ಆಮ್ ಆದ್ಮಿ ಪಕ್ಷದ ಕಚೇರಿ ಮೇಲಿನ ದಾಳಿ ಸೇರಿದಂತೆ ಹಲವು ಪ್ರಕರಣಗಳಲ್ಲಿ ಜೈಲಿಗೆ ಹೋಗಿರುವ ವಿಚಾರ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ.

ದಾಳಿಗೊಳಾದವರ ಮೇಲೆ ಎಫ್‍ಐಆರ್:
ಭಾನುವಾರ ರಾತ್ರಿ ಜೆಎನ್‍ಯು ವಿದ್ಯಾರ್ಥಿಗಳ ಮೇಲೆ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲ್ಲೆಗೊಳಾದ ವಿದ್ಯಾರ್ಥಿಗಳ ಮೇಲೆಯೇ ಈಗ ದೂರು ದಾಖಲಾಗಿದ್ದು ವಿದ್ಯಾರ್ಥಿ ಸಂಘಟನೆಯ ಅಧ್ಯಕ್ಷೆ ಐಶೆ ಘೋಷ್ ಸೇರಿದಂತೆ 18 ವಿದ್ಯಾರ್ಥಿಗಳ ಮೇಲೆ ಎಫ್‍ಐಆರ್ ದಾಖಲಿಸಲಾಗಿದೆ. ವಿಶ್ವವಿದ್ಯಾಲಯದ ಭದ್ರತಾ ಸಿಬ್ಬಂದಿ ಮೇಲೆ ಹಲ್ಲೆ ಹಾಗೂ ಸರ್ವರ್ ಕೊಠಡಿ ಧ್ವಂಸ ಮಾಡಿರುವ ಆರೋಪದ ಹಿನ್ನಲೆಯಲ್ಲಿ ಜೆಎನ್‍ಯು ಆಡಳಿತ ಮಂಡಳಿ ದೂರು ದಾಖಲಿಸಲಾಗಿತ್ತು.

ಶುಲ್ಕ ಹೆಚ್ಚಳದ ವಿರುದ್ಧ ಹಿಂಸಾಚಾರ:
ಜೆಎನ್‍ಯು ಕ್ಯಾಂಪಸ್ ನಲ್ಲಿ ಭಾನುವಾರ ರಾತ್ರಿ ಮುಸುಕು ಧರಿಸಿದ ಪುರುಷರು ಗುಂಪೊಂದು ವಿದ್ಯಾರ್ಥಿಗಳು ಮತ್ತು ಶಿಕ್ಷಕರನ್ನು ಮೇಲೆ ದಾಳಿ ನಡೆಸಿತ್ತು. ಕೋಲುಗಳು ಮತ್ತು ಕಬ್ಬಿಣದ ಸರಳುಗಳಿಂದ ವಿದ್ಯಾರ್ಥಿಗಳ ಮೇಲೆ ಮಾರಾಣಾಂತಿಕ ಹಲ್ಲೆ ಮಾಡಲಾಗಿತ್ತು. ಕ್ಯಾಂಪಸ್‍ನಲ್ಲಿ ಎರಡೂವರೆ ಗಂಟೆಗಳ ಕಾಲ ಆತಂಕದ ಪರಿಸ್ಥಿತಿ ಸೃಷ್ಟಿಸುತ್ತಿದ್ದರು. ಈ ದಾಳಿಯಲ್ಲಿ ವಿದ್ಯಾರ್ಥಿ ಸಂಘದ ಅಧ್ಯಕ್ಷ ಐಶಿ ಘೋಷ್ ಸೇರಿದಂತೆ ಸುಮಾರು 35 ಮಂದಿ ವಿದ್ಯಾರ್ಥಿಗಳು ಗಾಯಗೊಂಡಿದ್ದರು. ಏಮ್ಸ್ ಆಸ್ಪತ್ರೆಗೆ ದಾಖಲಾಗಿದ್ದ 35 ಪೈಕಿ ಈವರೆಗೆ 23 ಮಂದಿ ವಿದ್ಯಾರ್ಥಿಗಳು ಡಿಸ್ಚಾರ್ಜ್ ಆಗಿದ್ದಾರೆ.

ದಾಳಿ ಖಂಡಿಸಿ ದೇಶದ್ಯಾಂತ ಪ್ರತಿಭಟನೆ ನಡೆಸಲಾಗಿತ್ತು. ಪ್ರಮುಖ ರಾಜಕೀಯ ನಾಯಕರು ಖಂಡನೆ ವ್ಯಕ್ತಪಡಿಸಿದ್ದರು ಸಾಮಾಜಿಕ ಜಾಲತಾಣದಲ್ಲೂ ಟೀಕೆಗೆ ಗುರಿಯಾಗಿತ್ತು. ಘಟನೆಯ ಹಿಂದೆ ಎಬಿವಿಬಿ ಬೆಂಬಲವಿದೆ ಎಂದು ಎಡಪಂಥೀಯ ವಿದ್ಯಾರ್ಥಿಗಳು ಆರೋಪಿಸಿದರೆ ಇತ್ತ ಎಬಿವಿಪಿ ಎಡಪಂಥೀಯ ವಿದ್ಯಾರ್ಥಿಗಳ ಮೇಲೆ ಪ್ರತ್ಯಾರೋಪ ಮಾಡಿದ್ದರು.

Share This Article
Leave a Comment

Leave a Reply

Your email address will not be published. Required fields are marked *