ಜಾಗರಣೆ ಮಾಡಿದ್ದಕ್ಕೆ ಶಿವರಾತ್ರಿ ಮರುದಿನ ಹಿಂದೂ ಉದ್ಯೋಗಿಗಳಿಗೆ ರಜೆ ಕೊಡಿ: ಸರ್ಕಾರಕ್ಕೆ ಮನವಿ

Public TV
1 Min Read

– ರಂಜನ್‌ಗೆ ಮುಸ್ಲಿಂ ಉದ್ಯೋಗಿಗಳಿಗೆ ಅನುಮತಿ ಕೇಳಿದ ಬೆನ್ನಲ್ಲೆ ಹಿಂದೂ ಮುಖಂಡರಿಂದಲೂ ಮನವಿ

ಬೆಂಗಳೂರು: ರಾಜ್ಯದಲ್ಲಿ ಕಳೆದ ಕೆಲ ತಿಂಗಳಿನಿಂದ ತಣ್ಣಗಿದ್ದ ಧರ್ಮ ದಂಗಲ್ ಈಗ ಮತ್ತೆ ಮುನ್ನಲೆಗೆ ಬಂದಿದ್ದು, ಹಿಂದೂ ಸಂಘಟನೆ ಮುಖಂಡರು ಸರ್ಕಾರದ ಮುಂದೆ ಮತ್ತೊಂದು ವಿಭಿನ್ನ ಬೇಡಿಕೆ ಇಟ್ಟಿದ್ದಾರೆ.

ರಂಜನ್‌ಗಾಗಿ ಆ ಸಮುದಾಯದ ಉದ್ಯೋಗಿಗಳಿಗೆ ನಿತ್ಯ ಒಂದು ಗಂಟೆ ಮುಂಚಿತವಾಗಿ ಕಚೇರಿಯಿಂದ ತೆರಳಲು ಅನುಮತಿ ನೀಡುವಂತೆ ಸಿಎಂಗೆ ಪತ್ರ ಬರೆದ ಬೆನ್ನಲ್ಲೆ, ಈಗ ಹಿಂದೂ ಸಮುದಾಯದ ಮುಖಂಡರು ಬೇಡಿಕೆಯೊಂದನ್ನು ಸರ್ಕಾರದ ಮುಂದಿಟ್ಟಿದ್ದಾರೆ.

ಹೌದು. ತೆಲಂಗಾಣ, ಆಂಧ್ರದಲ್ಲಿ ಸರ್ಕಾರ ಸ್ವಯಂಪ್ರೇರಿತವಾಗಿ ಮುಸ್ಲಿಂ ಸಮುದಾಯದ ಉದ್ಯೋಗಿಗಳಿಗೆ ರಂಜನ್ ಸಮಯದಲ್ಲಿ ನಿತ್ಯ ಒಂದು ಗಂಟೆ ವಿನಾಯಿತಿ ಕೊಟ್ಟಿದೆ. ಅದರಂತೆ ರಾಜ್ಯದಲ್ಲೂ ಈ ರೀತಿಯ ಅವಕಾಶ ಮಾಡಬೇಕೆಂದು ಕೆಪಿಸಿಸಿ ಉಪಾಧ್ಯಕ್ಷ ಎಆರ್‌ಎಂ ಹುಸೇನ್ ಹಾಗೂ ಸೈಯದ್ ಅಹಮ್ಮದ್, ಮುಖ್ಯಮಂತ್ರಿಗಳಿಗೆ ಪತ್ರದ ಮೂಲಕ ಮನವಿ ಮಾಡಿದ್ದರು. ಈ ಸಂಬಂಧ ಆರಂಭದಲ್ಲಿ ಕಿಡಿಕಾರಿದ್ದ ಹಿಂದೂ ಸಂಘಟನೆಗಳು, ಬಳಿಕ ಅವರದ್ದೇ ದಾರಿಯಲ್ಲಿ ಹೋಗಿ ಮತ್ತೆ ಸರ್ಕಾರದ ಮುಂದೆ ಹಿಂದೂಗಳಿಗೆ ಹಬ್ಬದ ಸಂದರ್ಭಗಳಲ್ಲಿ ಹೆಚ್ಚುವರಿ ರಜೆ ನೀಡಬೇಕೆಂದು ಮನವಿ ಮಾಡಿದ್ದಾರೆ.

ಶಿವರಾತ್ರಿ ವೇಳೆ ಜನ ಜಾಗರಣೆ ಮಾಡುವ ಕಾರಣ ಮರುದಿನ ಕೆಲಸ ಕಾರ್ಯಗಳಲ್ಲಿ ತೊಡಗಲು ಸಮಸ್ಯೆಯಾಗಲಿದೆ. ಜೊತೆಗೆ ಮರುದಿನ ಪೂಜೆ ಕೈಂಕರ್ಯಗಳು ಮುಂದುವರಿಯುತ್ತವೆ. ಈ ಕಾರಣ ಶಿವರಾತ್ರಿ ಮರುದಿನವೂ ಹಿಂದೂ ಉದ್ಯೋಗಿಗಳಿಗೆ ರಜೆ ನೀಡಬೇಕೆಂದು ಮನವಿ ಮಾಡಿದ್ದಾರೆ.

ಈ ಸಂಬಂಧ ಸರ್ಕಾರ ಮತ್ತು ಸಿಎಂಗೆ ಮನವಿ ಮಾಡಿರುವ ಸಂಘಟನೆಗಳು, ಈ ಬಗ್ಗೆ ಶೀಘ್ರ ಆದೇಶ ಮಾಡಬೇಕು. ಪ್ರತಿವರ್ಷ ಕೂಡ ಇದು ಜಾರಿಯಲ್ಲಿರುವಂತೆ ಆದೇಶ ಹೊರಡಿಸಬೇಕೆಂದು ಮನವಿ ಸಲ್ಲಿಸಿದ್ದಾರೆ.

Share This Article