ಸಾಧ್ವಿ ಪ್ರಜ್ಞಾ ಸಿಂಗ್ ಕ್ಷಮೆಯಾಚಿಸುವ ಅಗತ್ಯವಿರಲಿಲ್ಲ- ಹಿಂದೂ ಮಹಾಸಭಾ

Public TV
2 Min Read

ನವದೆಹಲಿ: ನಾಥೂರಾಮ್ ಗೋಡ್ಸೆ ದೇಶಭಕ್ತ ಎಂಬ ಹೇಳಿಕೆ ನೀಡಿದ್ದ ಸಂಸದೆ ಸಾಧ್ವಿ ಪ್ರಜ್ಞಾ ಸಿಂಗ್ ಬೆಂಬಲಕ್ಕೆ ಹಿಂದೂ ಮಹಾಸಭಾ ನಿಂತಿದೆ.

ಹಿಂದೂ ಮಹಾಸಭಾ ವಕ್ತಾರ ಅಶೋಕ್ ಪಾಂಡೆ ಈ ಕುರಿತು ಹೇಳಿಕೆ ನೀಡಿದ್ದು, ಸಂಸದೆ ಸಾಧ್ವಿ ಪಜ್ಞಾ ಸಿಂಗ್ ಠಾಕೂರ್ ಅವರು ಕ್ಷಮೆಯಾಚಿಸುವ ಅಗತ್ಯವಿರಲಿಲ್ಲ. ರಾಜಕೀಯದ ಒತ್ತಡಕ್ಕೆ ಮಣಿದು ಅವರು ಕ್ಷಮೆಯಾಚಿಸಬೇಕಾಯಿತು ಎಂದು ಅಭಿಪ್ರಾಯ ಪಟ್ಟಿದ್ದಾರೆ.

ಸಾಧ್ವಿ ಅವರು ಹೇಳಿದಂತೆ ನಾಥೂರಾಮ್ ಗೋಡ್ಸೆ ನಿಜವಾದ ದೇಶ ಭಕ್ತ. ಏಕೆಂದರೆ ಭಾರತ ಮತ್ತೆ ವಿಭಜನೆಯಾಗುವುದನ್ನು ತಪ್ಪಿಸಿದರು ಎಂದು ಸಮರ್ಥಿಸಿಕೊಂಡರು.

ಲೋಕಸಭೆಯಲ್ಲಿ ಪ್ರಜ್ಞಾ ಸಿಂಗ್ ಠಾಕೂರ್ ಅವರು ಗೋಡ್ಸೆ ದೇಶಭಕ್ತ ಎಂದು ಹೇಳಿಕೆ ನೀಡಿದ್ದರು. ಇದಕ್ಕೆ ವಿರೋಧ ಪಕ್ಷಗಳ ನಾಯಕರು ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಅಲ್ಲದೆ ಸದನದಲ್ಲಿ ಪ್ರತಿಭಟನೆ ನಡೆಸಿ ತೀವ್ರ ಗದ್ದಲ ಎಬ್ಬಿಸಿದ್ದರು. ಬಿಜೆಪಿ ಕಾರ್ಯಾಧ್ಯಕ್ಷ ಜೆ.ಪಿ.ನಡ್ಡಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್, ಪ್ರತಾಪ್‍ಚಂದ್ರ ಸಾರಂಗಿ, ಜಗದಂಬಿಕಾ ಪಾಲ್ ಹಾಗೂ ಪ್ರಹ್ಲಾದ್ ಜೋಶಿ ಸೇರಿದಂತೆ ವಿವಿಧ ಬಿಜೆಪಿ ನಾಯಕರು ಸಹ ಸಾಧ್ವಿ ಹೇಳಿಕೆಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದರು.

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಟ್ವೀಟ್ ಮಾಡಿ ಆಕ್ರೋಶ ವ್ಯಕ್ತಪಡಿಸಿ, ಸಾಧ್ವಿ ಪ್ರಜ್ಞಾ ಟೆರರಿಸ್ಟ್. ಪ್ರಜ್ಞಾ ಅವರು ಟೆರರಿಸ್ಟ್ ಗೋಡ್ಸೆಯನ್ನು ದೇಶಭಕ್ತ ಎಂದು ಕರೆದಿದ್ದಾರೆ ಎಂದು ಕಿಡಿಕಾರಿದ್ದರು.

ಈ ಹೇಳಿಕೆ ವಿಚಾರವಾಗಿ ಸ್ವಪಕ್ಷ ಬಿಜೆಪಿ ಕೂಡ ಸಾಧ್ವಿ ಪ್ರಜ್ಞಾಗೆ ತಪರಾಕಿ ಹಾಕಿ ಕ್ಷಮೆ ಕೋರುವಂತೆ ಸೂಚಿಸಿತ್ತು. ಈ ಹಿನ್ನೆಲೆಯಲ್ಲಿ ಶುಕ್ರವಾರ ಸಂಸತ್ತಿನಲ್ಲಿ ಮಾತನಾಡಿದ್ದ ಸಾಧ್ವಿ ಪ್ರಜ್ಞಾ, ನನ್ನ ಹೇಳಿಕೆಯಿಂದ ಯಾರಿಗಾದರು ನೋವಾಗಿದ್ದರೆ ನಾನು ಕ್ಷಮೆ ಕೇಳುತ್ತೇನೆ. ಆದರೆ ನಾನು ಸಂಸತ್ತಿನಲ್ಲಿ ಹೇಳಿದ ಹೇಳಿಕೆಯನ್ನು ತಿರುಚಿ ಅದಕ್ಕೆ ಬೇರೆ ರೂಪ ನೀಡಿದ್ದಾರೆ. ನಾನು ಗಾಂಧೀಜಿ ಅವರು ದೇಶಕ್ಕಾಗಿ ಮಾಡಿರುವ ತ್ಯಾಗವನ್ನು ಗೌರವಿಸುತ್ತೇನೆ ಎಂದಿದ್ದರು.

ಈ ಸಂಸತ್ತಿನ ಒಬ್ಬ ಸದಸ್ಯರು ನನ್ನನ್ನು ಭಯೋತ್ಪಾದಕರಿಗೆ ಹೋಲಿಸಿದ್ದಾರೆ. ಅದು ನನ್ನ ಘನತೆಗೆ ಮತ್ತು ವ್ಯಕ್ತಿತ್ವಕ್ಕೆ ಧಕ್ಕೆ ತಂದಿದೆ. ನನ್ನ ವಿರುದ್ಧ ನ್ಯಾಯಾಲಯದಲ್ಲಿ ಯಾವುದೇ ಆರೋಪಗಳು ಸಾಬೀತಾಗದೆ ಇದ್ದರೂ ಅವರು ಹೀಗೆ ಹೇಳಿರುವುದು ಒಬ್ಬ ಮಹಿಳಾ ಸಂಸದೆ ಮತ್ತು ಸನ್ಯಾಸಿಗೆ ಮಾಡಿರುವ ಅವಮಾನ ಎಂದು ಹೇಳುವ ಮೂಲಕ ರಾಹುಲ್ ಗಾಂಧಿ ಮೇಲೆ ವಾಗ್ದಾಳಿ ಮಾಡಿದ್ದರು.

ಏನಿದು ವಿವಾದ?
ಬುಧವಾರ ಸಂಸತಿನಲ್ಲಿ ಡಿಎಂಕೆ ಸಂಸದ ಎ.ರಾಜಾ ಅವರು ವಿಶೇಷ ಭದ್ರತಾ ಪಡೆ (ಎಸ್‍ಪಿಜಿ) ತಿದ್ದುಪಡಿ ಮಸೂದೆಯ ಕುರಿತು ಚರ್ಚೆ ನಡೆಯುತ್ತಿದ್ದ ವೇಳೆ ಗೋಡ್ಸೆ ಮಹಾತ್ಮಾ ಗಾಂಧಿಯವರನ್ನು ಏಕೆ ಕೊಲೆ ಮಾಡಿದರು ಎಂದು ಪ್ರಶ್ನಿಸಿದ್ದಾರೆ. ಈ ವೇಳೆ ಸಾಧ್ವಿ ಪ್ರಜ್ಞಾ ಸಿಂಗ್ ಮಧ್ಯೆ ಪ್ರವೇಶಿಸಿ, ದೇಶಭಕ್ತನ ಉದಾಹರಣೆಯನ್ನು ನೀವು ಈ ಸಂದರ್ಭದಲ್ಲಿ ಕೊಡಬೇಡಿ ಎಂದು ಕಿಡಿಕಾರಿದ್ದರು.

ಇದನ್ನು ಸ್ವತಃ ಗೋಡ್ಸೆ ಒಪ್ಪಿಕೊಂಡಿದ್ದಾರೆ. 32 ವರ್ಷಗಳಿಂದ ಗಾಂಧಿ ಮೇಲೆ ದ್ವೇಷ ಇತ್ತು ಹೀಗಾಗಿ ಹತ್ಯೆ ಮಾಡಲಾಗಿದೆ ಎಂದು ಹೇಳಿದ್ದಾರೆ. ಮಹಾತ್ಮಾ ಗಾಂಧಿಯವರ ವಿಚಾರಧಾರೆಗಳು ಪ್ರತ್ಯೇಕವಾಗಿದ್ದರಿಂದ ಗೋಡ್ಸೆ ಅವರನ್ನು ಹತ್ಯೆ ಮಾಡಿದ ಎಂದು ರಾಜಾ ಅವರು ಲೋಕಸಭೆಯ ಕಲಾಪದಲ್ಲಿ ತಿಳಿಸಿದ್ದರು. ರಾಜಾ ಅವರು ಮಾತನಾಡುತ್ತಿದ್ದ ವೇಳೆ ಸಾಧ್ವಿ ಪ್ರಜ್ಞಾ ಸಿಂಗ್ ಮಧ್ಯ ಪ್ರವೇಶಿಸಿದ್ದಕ್ಕೆ ವಿರೋಧ ಪಕ್ಷಗಳ ಸಂಸದರು ಪ್ರತಿಭಟನೆ ನಡೆಸಲು ಪ್ರಾರಂಭಿಸಿದರು. ಆಗ ಬಿಜೆಪಿ ಸಂಸದರು ಸಾಧ್ವಿಯವರಿಗೆ ಕುಳಿತುಕೊಳ್ಳುವಂತೆ ಸೂಚಿಸಿದ್ದರು.

Share This Article
Leave a Comment

Leave a Reply

Your email address will not be published. Required fields are marked *