ರಂಜಾನ್ ಹಬ್ಬಕ್ಕೆ ಮುಸ್ಲಿಂ ಬಾಂಧವರಿಗೆ ಶ್ಯಾವಿಗೆ ಸಿದ್ಧಪಡಿಸಿದ ಹಿಂದೂ ಕುಟುಂಬ

Public TV
1 Min Read

ನವದೆಹಲಿ: ಕೋಮು ಸೌಹಾರ್ದತೆಗೆ ನಿದರ್ಶನ ಎನ್ನುವಂತೆ ಈಗ ವಾರಣಾಸಿಯಲ್ಲಿ ಹಿಂದೂ ಕುಟುಂಬವೊಂದು ಮುಸ್ಲಿಂ ಬಾಂಧವರಿಗಾಗಿ ರಂಜಾನ್ ಹಬ್ಬಕ್ಕೆ ಶ್ಯಾವಿಗೆ ಸಿದ್ಧಪಡಿಸುವ ಕಾಯಕದಲ್ಲಿ ತೊಡಗಿದ್ದು ಎಲ್ಲರ ಮನ ಗೆದ್ದಿದೆ.

ರಂಜಾನ್ ಹಬ್ಬದ ಪ್ರಯುಕ್ತ ಕೊನೆಯ ದಿನ ಮುಸ್ಲಿಮರು ಶೀರ ಕುರ್ಮಾವನ್ನು ಸೇವಿಸುವ ಮೂಲಕ ತಮ್ಮ ಉಪವಾಸವನ್ನು ಕೊನೆ ಮಾಡುತ್ತಾರೆ. ಹೀಗಾಗಿ ವಾರಣಾಸಿಯ ಉರಿಯುವ ಬಿಸಿಲಿನಲ್ಲಿಯೂ ಕೂಡ ಹಿಂದೂ ಕುಟುಂಬವೊಂದು ಶ್ಯಾವಿಗೆಯನ್ನು ಒಣಗಿಸುವಲ್ಲಿ ಬ್ಯುಸಿಯಾಗಿದೆ. ಈ ಶ್ಯಾವಿಗೆಯನ್ನು ಮುಖ್ಯವಾಗಿ ಮುಸ್ಲಿಂ ಬಾಂಧವರಿಗಾಗಿಯೇ ತಯಾರಿಸಲಾಗುತ್ತಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.

ಪ್ರತಿ ರಂಜಾನ್ ಹಬ್ಬದ ಸಮಯದಲ್ಲಿ ರುಮಾನಿ ಶ್ಯಾವಿಗೆಯನ್ನು ಮುಸ್ಲಿಂ ಗ್ರಾಹಕರು ಬಹಳ ಇಷ್ಟ ಪಟ್ಟು ಖರೀದಿಸುತ್ತಾರೆ. ನಾವು ಈಗ ಮೂರು ಪ್ರಕಾರದ ಶ್ಯಾವಿಗೆಯನ್ನು ತಯಾರಿಸುತ್ತೇವೆ. ಅವುಗಳು ಗಾತ್ರದಲ್ಲಿ ವಿಭಿನ್ನವಾಗಿವೆ. ರಂಜಾನ್ ಹಬ್ಬದ ಮೂರು ತಿಂಗಳ ಮೊದಲೇ ನಾವು ಶ್ಯಾವಿಗೆಯನ್ನು ತಯಾರಿಸುತ್ತಿದ್ದೇವೆ. ಮುಸ್ಲಿಂ ಸಹೋದರು ನಮ್ಮಲ್ಲಿ ಬಂದು ಇವುಗಳನ್ನು ಖರೀದಿಸುತ್ತಾರೆ. ನಾವು ಧರ್ಮದ ಆಧಾರದ ಮೇಲೆ ಯಾವುದೇ ತಾರತಮ್ಯ ಮಾಡುವುದಿಲ್ಲ. ಮುಸ್ಲಿಂ ಗ್ರಾಹಕರ ಜೊತೆ ನಮಗೆ ಒಳ್ಳೆಯ ಸಂಬಂಧವಿದೆ. ನಮ್ಮ ಉತ್ಪನ್ನಗಳನ್ನು ಇತರ ದೇಶಗಳಿಗೆ ಕೂಡ ರಫ್ತು ಮಾಡುತ್ತೇವೆ ಎಂದು ಅಂಗಡಿ ಮಾಲೀಕರು ಹೇಳಿದ್ದಾರೆ.

ಕಳೆದ ವಾರ ಬಿಹಾರ್ ದರ್ಭಾಂಗ್ ನಲ್ಲಿ ಮುಸ್ಲಿಂ ಯುವಕ ಮೊಹಮ್ಮದ್ ಅಶ್ಫಾಕ್ 2 ವರ್ಷದ ಮಗುವಿನ ಜೀವವನ್ನು ಉಳಿಸುವುದಕ್ಕಾಗಿ ತನ್ನ ರಂಜಾನ್ ಉಪವಾಸವನ್ನು ಮುರಿದು ರಕ್ತದಾನವನ್ನು ಮಾಡಿ ಮಾನವೀಯತೆ ಮೆರೆದಿದ್ದರು.

Share This Article
Leave a Comment

Leave a Reply

Your email address will not be published. Required fields are marked *