– ಮುಂದುವರಿದ ಶೋಧ ಕಾರ್ಯ
– ಜು.1ರವರೆಗೆ ಹಿಮಾಚಲ ಸೇರಿ 5 ರಾಜ್ಯಗಳಿಗೆ ಭಾರೀ ಮಳೆ ಸಾಧ್ಯತೆ – ಐಎಂಡಿ
ನವದೆಹಲಿ: ಕಳೆದ 24 ಗಂಟೆಯಲ್ಲಿ ಹಿಮಾಚಲ ಪ್ರದೇಶದ 5 ಕಡೆಗಳಲ್ಲಿ ಮೇಘಸ್ಫೋಟಗೊಂಡ ಪರಿಣಾಮ ಐವರು ಪ್ರಾಣ ಕಳೆದುಕೊಂಡಿದ್ದು, ಹಲವರು ನಾಪತ್ತೆಯಾಗಿದ್ದಾರೆ.
ಉತ್ತರ ಭಾರತದ ಹಲವೆಡೆ ಮಳೆ ಅಬ್ಬರಿಸುತ್ತಿದ್ದು, ಭಾರೀ ಅವಾಂತರವನ್ನೇ ಸೃಷ್ಟಿ ಮಾಡಿದೆ. ಹಿಮಾಚಲ ಪ್ರದೇಶದಲ್ಲಿ ಕಳೆದ 24 ಗಂಟೆ ಅವಧಿಯಲ್ಲಿ ಕುಲು ಜಿಲ್ಲೆಯ ಸೈನ್ಜ್ ಕಣಿವೆ, ಜೀಭಿ, ತೀರ್ಥನ್, ಮತ್ತು ಮಣಿಕರಣ್-ಬಂಜರ್ ಕಣಿವೆಗಳಲ್ಲಿ ಭಾರಿ ಮಳೆಯಾಗಿದೆ. ಪರಿಣಾಮ ಪಾರ್ವತಿ ನದಿ ಉಕ್ಕಿ ಹರಿದು ಭೀಕರ ಪ್ರವಾಹ ಸಂಭವಿಸಿದೆ. ಮರದ ದಿಮ್ಮಿಗಳು ತರಗೆಲೆಗಳಂತೆ ತೇಲಿ ಬರುತ್ತಿದೆ. ಇನ್ನೂ ಕೆಲವಡೆ ಮನೆ, ಕಚೇರಿಗಳಿಗೆ ನೀರು ನುಗ್ಗಿ, ಅವ್ಯವಸ್ಥೆ ಉಂಟಾಗಿದೆ.ಇದನ್ನೂ ಓದಿ: ಹುಲಿಗಳ ಸಾವು ಪ್ರಕರಣ | ಗಂಧದಗುಡಿಯನ್ನ ಕಸಾಯಿಖಾನೆ ಮಾಡುತ್ತಿದೆ ಕಾಂಗ್ರೆಸ್ ಸರ್ಕಾರ – ಆರ್. ಅಶೋಕ್
ಸರಿಸುಮಾರು 15ಕ್ಕೂ ಹೆಚ್ಚು ಮನೆಗಳು ಹಾನಿಗೊಳಗಾಗಿದೆ. ಗ್ರಾಮೀಣ ಪ್ರದೇಶದ ರಸ್ತೆಗಳು ಜಲಾವೃತಗೊಂಡಿವೆ. ಇದೇ ವೇಳೆ ಪ್ರವಾಸಿ ತಾಣಗಳಲ್ಲಿ 2 ಸಾವಿರ ಪ್ರವಾಸಿಗರು ಸಿಲುಕಿಕೊಂಡಿದ್ದು, ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ. ಕಾಂಗ್ರಾ ಜಿಲ್ಲೆಯ ಧರ್ಮಶಾಲಾದಲ್ಲಿ ಭಾರೀ ಮಳೆಯಾಗುತ್ತಿದ್ದು, ಪ್ರವಾಹದ ಪರಿಸ್ಥಿತಿ ಎದುರಾಗಿದೆ.
ಈ ನಡುವೆ ಭಾರತೀಯ ಹವಾಮಾನ ಇಲಾಖೆ ಜು.1 ರವರೆಗೆ ಹಿಮಾಚಲ ಪ್ರದೇಶ, ಪಂಜಾಬ್, ಹರಿಯಾಣ, ಉತ್ತರಾಖಂಡ ಮತ್ತು ಪಶ್ಚಿಮ ಉತ್ತರ ಪ್ರದೇಶದಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ತಿಳಿಸಿದೆ.
ಇನ್ನೂ ಮಹಾರಾಷ್ಟ್ರದಲ್ಲೂ ಕೆಲ ಕಡೆ ಪ್ರವಾಹ ನಿರ್ಮಾಣವಾಗಿದೆ. ಗುಜರಾತ್‌ನ ಅಹಮದಾಬಾದ್-ಮುಂಬೈ ಹೈವೇಯಲ್ಲಿ 15 ಕಿ.ಮೀ. ಟ್ರಾಫಿಕ್ ಜಾಮ್ ಆಗಿದೆ. ಕೇರಳದ ವಯನಾಡ್‌ನಲ್ಲೂ ಭಾರಿ ಮಳೆಯಾಗ್ತಿದೆ. ಚೂರಲ್ಮಲ ಮತ್ತು ಮುಂಡಕ್ಕೈನಲ್ಲಿ ದಾಖಲೆಯ ಮಳೆ ಆಗುತ್ತಿದ್ದು, ಕಳೆದ ವರ್ಷ ಸಂಭವಿಸಿದ ಭೀಕರ ಭೂಕುಸಿತದ ದುರಂತ ಈಗ ಜನರಲ್ಲಿ ಆತಂಕ ಹುಟ್ಟಿಸಿದೆ. ಕೇರಳದ 12 ಜಿಲ್ಲೆಗಳಿಗೆ ಭಾರಿ ಮಳೆಯ ಎಚ್ಚರಿಕೆ ನೀಡಲಾಗಿದೆ.ಇದನ್ನೂ ಓದಿ: ಇಲ್ಲಿಂದ ಭೂಮಿಯನ್ನು ನೋಡುವುದೇ ಸೌಭಾಗ್ಯ – ಬಾಹ್ಯಾಕಾಶ ನಿಲ್ದಾಣದಿಂದ ಶುಭಾಂಶು ಮೊದಲ ಸಂದೇಶ!