ಹಿಜಬ್‌ ಧರಿಸುವುದು ಮೂಲಭೂತ ಹಕ್ಕು: ಸಿದ್ದರಾಮಯ್ಯ

Public TV
3 Min Read

ಬೆಂಗಳೂರು: ಹಿಜಬ್‌ ಧರಿಸುವುದು ಮೂಲಭೂತ ಹಕ್ಕು. ಅದು ಸಾಕಷ್ಟು ವರ್ಷಗಳಿಂದ ನಡೆದುಕೊಂಡು ಬಂದಿದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಉಡುಪಿ ಸರ್ಕಾರಿ ಪಿಯು ಕಾಲೇಜಿನಲ್ಲಿ ತಲೆದೋರಿರುವ ಹಿಜಬ್‌-ಕೇಸರಿ ಶಾಲು ವಿವಾದ ಕುರಿತು ಮಾತನಾಡಿದ ಸಿದ್ದರಾಮಯ್ಯ, ಸಮವಸ್ತ್ರ ಕಡ್ಡಾಯ ಅಂತ ಸರ್ಕಾರ ಎಲ್ಲೂ ಹೇಳಿಲ್ಲ. ಪಿಯುಸಿ ಲೆವೆಲ್‌ನಲ್ಲಿ ಇಲ್ಲಾ. ಮುಸ್ಲಿಂ ಹೆಣ್ಣು ಮಕ್ಕಳಿಗೆ ಗೇಟ್ ಹಾಕಿಕೊಂಡು ಬರಬೇಡಿ ಅಂತ ಪ್ರಿನ್ಸಿಪಾಲ್ ಹೇಳಿದ್ದಾರೆ. ಸರ್ಕಾರಿ ಕಾಲೇಜು ಅದು. ಅದು ಮೂಲಭೂತ ಹಕ್ಕಿನ ಉಲ್ಲಂಘನೆ. ಹಿಜಬ್ ಹಾಕುವುದು ಮೂಲಭೂತ ಹಕ್ಕು. ಸಾಕಷ್ಟು ವರ್ಷಗಳಿಂದ ನಡೆದುಕೊಂಡು ಬಂದಿದೆ. ಈಗ ಅದು ನ್ಯಾಯಾಲಯದಲ್ಲಿದೆ, ಏನಾಗುತ್ತೆ ನೋಡೋಣ ಎಂದು ತಿಳಿಸಿದರು. ಇದನ್ನೂ ಓದಿ: ಸಮವಸ್ತ್ರದ ಆದೇಶ ಪಾಲಿಸದಿದ್ದರೆ ಕಾಲೇಜಿನಿಂದಲೇ ಡಿಬಾರ್

ಯಾರೋ ಬಿಜೆಪಿಯವರು ಹೇಳಿ ಮಾಡಿಸುತ್ತಿದ್ದಾರೆ. ಇದು ಮುಸ್ಲಿಂ ಹೆಣ್ಣುಮಕ್ಕಳ ವಿದ್ಯಾಭ್ಯಾಸವನ್ನು ತಡೆಯುವ ಪ್ರಯತ್ನ. ಸರ್ಕಾರಿ ಕಾಲೇಜಿನ ಪ್ರಿನ್ಸಿಪಾಲ್ ಹೆಣ್ಣುಮಕ್ಕಳನ್ನ ತಡೆದಿದ್ದು ಅಮಾನವೀಯ. ಕಣ್ಣೀರು ಹಾಕಿದರೂ ಬಿಡಲಿಲ್ಲ. ಅವನ್ಯಾವನೋ ಶಾಸಕ ರಘುಪತಿ ಬಟ್, ಅವನು ಹೇಳಿದನಂತೆ ಇವನು ತಡೆದನಂತೆ ಅವನು ಯಾರು ಹೇಳೋಕೆ ಯುನಿಫಾರ್ಮ್ ತನ್ನಿ ಅಂತ ಎಂದು ಏಕವಚನದಲ್ಲಿ ಕಿಡಿಕಾರಿದರು.

ಈ ಬೆಳವಣಿಗೆ ಸಂವಿಧಾನ ವಿರೋಧಿ ನಡೆ. ಕೇಸರಿ ಶಾಲು ಹಾಕಿಕೊಂಡು ಬಂದಿದ್ದರ ಉದ್ದೇಶ ಏನು? ಆ ಪ್ರಿನ್ಸಿಪಾಲ್‌ನ ಸಸ್ಪೆಂಡ್ ಮಾಡಬೇಕು. ಕೇಸರಿ ಶಾಲು ಮೊದಲಿನಿಂದ ಹಾಕ್ತಿದ್ರಾ? ಹಿಜಬ್ ಮೊದಲಿನಿಂದಲೂ ಹಾಕುತ್ತಿದ್ದರು. ಕೋರ್ಟ್‌ನಲ್ಲಿ ವಿಚಾರಣೆಯಿದೆ. ನಾನು ಲಾಯರ್, ಪ್ರತಿಪಕ್ಷ ನಾಯಕನಾಗಿಯೇ ಹೇಳುತ್ತಿದ್ದೇನೆ. ಕೇಸರಿ ಶಾಲು ಹಾಕೋದು ಯಾವಾಗಿಂತ ಬಂತು? ನಿನ್ನೆ, ಮೊನ್ನೆಯಿಂದ ಬಂದಿದೆ. ಹಿಜಬ್ ಹಿಂದಿನಿಂದಲೂ ಇದೆ. ಕರಾವಳಿಯು ಸಂಘ ಪರಿವಾರದ ಕೋಮುವಾದದ ಪ್ರಯೋಗಾಲಯವಾಗಿದೆ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಹಿಜಬ್ ನೆಪವೊಡ್ಡಿ ಮುಸ್ಲಿಂ ಹೆಣ್ಮಕ್ಕಳ ಶಿಕ್ಷಣಕ್ಕೆ ತಡೆ ಒಡ್ಡಲಾಗ್ತಿದೆ: ಮುಫ್ತಿ

ನದಿ ಜೋಡಣೆ ಸಂಬಂಧ ಮಾತನಾಡಿ, ನಿರ್ಮಲಾ ಸೀತಾರಾಮನ್ ಫೆಬ್ರವರಿ 1 ರಂದು ಬಜೆಟ್‌ನಲ್ಲಿ ದಕ್ಷಿಣದ ನದಿಗಳನ್ನು 46 ಸಾವಿರ ಕೋಟಿ ವೆಚ್ಚದಲ್ಲಿ ಜೋಡಣೆ ಮಾಡುತ್ತೇವೆ ಎಂದಿದ್ದಾರೆ. ಇದು ಕಾರ್ಯಸಾಧುವಾದ ಯೋಜನೆ ಅಲ್ಲ. ನಿರ್ಮಲಾ ಸೀತಾರಾಮನ್ ತಮಿಳುನಾಡಿನವರು ಅದಕ್ಕೆ ಇದನ್ನ ಪ್ರಸ್ತಾಪ ಮಾಡಿದಂತೆ ಕಾಣುತ್ತಿದೆ. ನಮ್ಮ ರಾಜ್ಯದ ಜೊತೆ ಚರ್ಚೆ ಮಾಡಿಲ್ಲ. ಕೃಷ್ಣ, ಗೋದಾವರಿ, ಪೆನ್ನಾರ್ ನದಿಗಳು ಆಂಧ್ರ, ತೆಲಂಗಾಣ, ತಮಿಳುನಾಡು ರಾಜ್ಯದ ವ್ಯಾಪ್ತಿಗೆ ಬರುತ್ತವೆ. ನ್ಯಾಷನಲ್ ವಾಟರ್ ಡೆವಲಪ್‌ಮೆಂಟ್ ಏಜೆನ್ಸಿಯಲ್ಲಿ ಇದರ ಬಗ್ಗೆ ಚರ್ಚೆ ಆಗಿದೆ. ರಾಜಸ್ಥಾನ ಬಿಟ್ಟರೆ ಹೆಚ್ಚು ಒಣ ಭೂಮಿ ಇರುವುದು ಕರ್ನಾಟಕದಲ್ಲಿ. ನದಿ ಜೋಡಣೆಯಿಂದ ತಮಿಳುನಾಡಿಗೆ ಹೆಚ್ಚು ನೀರು ಸಿಗುತ್ತದೆ ಎಂದು ವಿವರಿಸಿದರು.

ನ್ಯಾಷನಲ್ ವಾಟರ್ ಡೆವಲಪ್‌ಮೆಂಟ್‌ ಏಜೆನ್ಸಿ ಸಭೆ ಆಗಿದೆ. ಅಲ್ಲಿ ನದಿ ಜೋಡಣೆ ಬಗ್ಗೆ ಚರ್ಚೆ ಆಗಿದೆ. ಇದರಿಂದ 347 ಟಿಎಂಸಿ ನೀರು ಸಿಗುತ್ತದೆ. ಇದರಿಂದ ದಕ್ಷಿಣ ಭಾರತದ ರಾಜ್ಯಗಳಿಗೆ ಅನುಕೂಲ ಎಂದು ಚರ್ಚೆ ಆಗಿದೆ. ರಾಜಸ್ಥಾನ ಬಿಟ್ಟರೆ, ಬಹುತೇಕ ರಾಜ್ಯಗಳಲ್ಲಿ ಒಣ ಭೂಮಿಯಿದೆ. ಕೇರಳ, ಮಹಾರಾಷ್ಟ್ರ, ತಮಿಳುನಾಡು ನೀರಾವರಿ ಭೂಮಿಯಿದೆ. ಕರ್ನಾಟಕದಲ್ಲಿ 35% ನೀರಾವರಿ ಇದೆ. ರಾಜಸ್ಥಾನ ಬಿಟ್ಟರೆ ರಾಜ್ಯದಲ್ಲಿ ಒಣ ಭೂಮಿ ಹೆಚ್ಚಿದೆ. ನದಿ ಜೋಡಣೆಯಿಂದ ಹೆಚ್ಚು ನೀರು ಸಿಗಲ್ಲ. ಯಾವ ಯಾವ ನದಿಗಳಿಂದ ಹೆಚ್ಚು ನೀರು ಸಿಗುತ್ತದೆ ಎಂದು ರಾಜ್ಯದವರ ಜೊತೆಗೆ ಚರ್ಚೆ ಮಾಡಿಲ್ಲ. ಇದರಿಂದ ಜಲವಿವಾದ ಶುರುವಾಗುತ್ತದೆ. ಹಾಗಾಗಿ ದಕ್ಷಿಣ ಭಾರತದ ರಾಜ್ಯಗಳ ಜೊತೆ ಸಭೆ ಕರಿಯಬೇಕು. ಸರ್ವ ಪಕ್ಷ ಸಭೆ ಕರೆಯಬೇಕು. ಎಲ್ಲಾ ಮಾಹಿತಿ ಜನರ ಮುಂದೆ ಇಡಬೇಕು ಎಂದು ಆಗ್ರಹಿಸಿದರು. ಇದನ್ನೂ ಓದಿ: ಹಿಜಬ್ ವಿರುದ್ಧ ಕೇಸರಿ ಶಾಲು ಧರಿಸಿ ಜೈ ಶ್ರೀರಾಮ್ ಘೋಷಣೆ ಕೂಗುತ್ತ ಆಗಮಿಸಿದ ವಿದ್ಯಾರ್ಥಿಗಳು

ಗೋದಾವರಿಯಿಂದ ಎಷ್ಟು, ಕಾವೇರಿಯಿಂದ ಎಷ್ಟು, ಪೆನ್ನಾರ್‌ನಿಂದ ಎಷ್ಟು ನೀರು ಲಭ್ಯವಾಗಲಿದೆ. ಯಾವ್ಯಾವ ರಾಜ್ಯಕ್ಕೆ ಎಷ್ಟು ನೀರು ಸಿಗುತ್ತದೆ. ಇದರ ಬಗ್ಗೆ ಸಂಪೂರ್ಣ ಮಾಹಿತಿ ಜನರಿಗೆ ತಿಳಿಸಬೇಕು. ನಾವು ಒಕ್ಕೂಟ ವ್ಯವಸ್ಥೆಯಲ್ಲಿದ್ದೇವೆ. ಏಕಮುಖವಾಗಿ ನಡೆದುಕೊಳ್ಳುವುದು ಸರಿಯಲ್ಲ. ಅದು ಸರ್ವಾಧಿಕಾರಿ ಧೋರಣೆಯಾಗಲಿದೆ. ಇದಕ್ಕೆ ನಮ್ಮ ತೀವ್ರ ವಿರೋಧವಿದೆ ಎಂದರು.

Share This Article
Leave a Comment

Leave a Reply

Your email address will not be published. Required fields are marked *