ಹಿಂದೂ ಜಾತ್ರೆಗಳಲ್ಲಿ ಮುಸ್ಲಿಮ್‌ ವ್ಯಾಪಾರಿಗಳಿಗೆ ನಿಷೇಧ: ನಿಯಮ ಏನಿದೆ?

Public TV
2 Min Read

ಬೆಂಗಳೂರು: ಹಿಜಬ್ ಕುರಿತಂತೆ ಹೈಕೋರ್ಟ್‌ ತೀರ್ಪು ವಿರೋಧಿಸಿದವರಿಗೆ ಬಹಿಷ್ಕಾರದ ಬಿಸಿ ತಾಗಿದೆ. ಹಿಂದೂ ದೇವರ ಜಾತ್ರೆಗಳಲ್ಲಿ ಮುಸ್ಲಿಮ್ ವ್ಯಾಪಾರಿಗಳಿಗೆ ಅವಕಾಶ ನೀಡದಿರುವ ಮಟ್ಟಕ್ಕೆ ಪರಿಸ್ಥಿತಿ ಬಿಗಡಾಯಿಸಿದೆ. ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆರಂಭವಾದ ಈ ಬಹಿಷ್ಕಾರದ ಬಿಸಿ ಈಗ ನಿಧಾನವಾಗಿ ರಾಜ್ಯದೆಲ್ಲೆಡೆ ವ್ಯಾಪಿಸತೊಡಗಿದೆ.

ಮುಸ್ಲಿಮ್ ಸಂಘಟನೆಗಳು ಬಂದ್ ನಡೆಸಿದ್ದಕ್ಕೆ ವಿರುದ್ಧವಾಗಿ, ಮುಸ್ಲಿಮ್ ವ್ಯಾಪಾರಿಗಳನ್ನು ಬಹಿಷ್ಕರಿಸಲು ಹಿಂದೂ ಸಂಘಟನೆಗಳು ಕರೆ ನೀಡಿವೆ. ಒಂದು ದಿನ ಬಂದ್‌ ಮಾಡುವುದಲ್ಲ ಸುಪ್ರೀಂಕೋರ್ಟ್ ತೀರ್ಪು ಬರುವ ತನಕ ಅವರು ಬಂದ್ ಮಾಡಲಿ ಎನ್ನುತ್ತಿದ್ದಾರೆ. ಮೊನ್ನೆ ಬಂದ್‌ ಮಾಡಿದ ಸಮಯದಲ್ಲಿ ಮುಸ್ಲಿಂ ಕಾಂಪ್ಲೆಕ್ಸ್‌ನಲ್ಲಿದ್ದ ಹಿಂದೂ ಜನರ ಅಂಗಡಿಗಳನ್ನು ಬಲವಂತವಾಗಿ ಬಂದ್‌ ಮಾಡಿಸಿದ್ದಾರೆ. ಈ ರೀತಿ ಬಲವಂತದ ಬಂದ್‌ ಮಾಡಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿವೆ.

ಹಿಂದೂ ಸಂಘಟನೆಗಳ ಒತ್ತಡಕ್ಕೆ ಮಣಿದ ಉಡುಪಿಯ ಕಾಪುವಿನ ಮೂರು ಮಾರಿಗುಡಿ ಆಡಳಿತ ಮಂಡಳಿ, ಜಾತ್ರೆಗೆ ಅಂಗಡಿ ಹಾಕಲು ಹಿಂದೂಯೇತರ ವ್ಯಾಪಾರಿಗಳಿಗೆ ಅವಕಾಶ ನೀಡಿಲ್ಲ. ಇದೀಗ ಇದು ಸರಿಯಲ್ಲ ಎಂದ ಸಿದ್ದರಾಮಯ್ಯ ವಿರುದ್ಧವೂ ಹಿಂದೂಪರ ಸಂಘಟನೆಗಳು ಆಕ್ರೋಶ ಹೊರಹಾಕಿವೆ. ಮುಸಲ್ಮಾನರು ಬಹಿಷ್ಕಾರ ಹಾಕಿದಾಗ ಸಿದ್ದರಾಮಯ್ಯ ಬಾಯಿ ತೆರೆದಿರಲಿಲ್ಲ ಏಕೆ ಎಂದು ಪ್ರಶ್ನಿಸಿವೆ. ಇದನ್ನೂ ಓದಿ: ಎಚ್ಚೆತ್ತುಕೊಳ್ಳದಿದ್ದರೆ ನಮಗೂ ಕಾಶ್ಮೀರಿ ಪಂಡಿತರದ್ದೇ ಪರಿಸ್ಥಿತಿ ಬರಬಹುದು – ಪೇಜಾವರ ಶ್ರೀ ಎಚ್ಚರಿಕೆ

ಹಿಜಬ್ ಮತ್ತಿತರ ಗೊಂದಲದ ವಿಚಾರದಲ್ಲಿ ನಾವು ಇಲ್ಲ. ದಯವಿಟ್ಟು ನಮಗೆ ವ್ಯಾಪಾರಕ್ಕೆ ಅವಕಾಶ ಮಾಡಿಕೊಡಿ ಎಂದು ಮುಸ್ಲಿಮ್ ವ್ಯಾಪಾರಿಗಳು ಮನವಿ ಮಾಡಿಕೊಂಡಿದ್ದಾರೆ. ಕಳೆದ ವರ್ಷದ ಅಕ್ಟೋಬರ್ ತಿಂಗಳಲ್ಲಿ ಗಂಗೊಳ್ಳಿಯಲ್ಲಾದ ಗೋಹತ್ಯೆ ವಿರೋಧಿ ಪ್ರತಿಭಟನೆ ಬಳಿಕ ಮುಸ್ಲಿಮರು, ಹಿಂದೂ ಮಹಿಳೆಯರಿಂದ ಮೀನು ಖರೀದಿ ನಿಲ್ಲಿಸಿದ್ದರು. ಅಲ್ಲಿಂದ ಶುರುವಾದ ಕೋಮು ರಾಜಕೀಯ ಈಗ ಇಲ್ಲಿಗೆ ಬಂದು ನಿಂತಿದೆ.

ದಕ್ಷಿಣ ಕನ್ನಡದ ಮಂಗಳಾದೇವಿ, ಬಪ್ಪನಾಡು ದುರ್ಗಾಪರಮೇಶ್ವರಿ ದೇವಸ್ಥಾನಗಳ ಜಾತ್ರೋತ್ಸವಗಳಲ್ಲೂ ಹಿಂದೂಯೇತರ ವ್ಯಾಪಾರಿಗಳಿಗೆ ಅವಕಾಶ ನೀಡಬಾರದು ಎಂಬ ತೀರ್ಮಾನಕ್ಕೆ ಬರಲಾಗಿದೆ. ದೇವಸ್ಥಾನಗಳ ಮುಂಭಾಗ ಬ್ಯಾನರ್ ಸಹ ಅಳವಡಿಕೆ ಮಾಡಲಾಗಿದೆ. ಇದನ್ನೂ ಓದಿ: ಜಾತ್ರೆ ಉತ್ಸವ ನಂಬಿರುವ ನಮಗೆ ವ್ಯಾಪಾರಕ್ಕೆ ಅವಕಾಶ ಮಾಡಿಕೊಡಿ: ಆರಿಫ್

ನಿಯಮ ಏನಿದೆ?
ಮುಸ್ಲಿಮರಿಗೆ ಅಂಗಡಿ ಹಾಕಲು ಅವಕಾಶ ನಿರಾಕರಿಸುತ್ತಿರುವ ದೇಗುಲದ ಆಡಳಿತ ಮಂಡಳಿಗಳು, 2002ರಲ್ಲಿ ರೂಪಿಸಲಾದ ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಯ ನಿಯಮವನ್ನೇ ಅಸ್ತ್ರವನ್ನಾಗಿ ಮಾಡಿಕೊಂಡಿವೆ. ಧಾರ್ಮಿಕ ದತ್ತಿ ಇಲಾಖೆಯ ನಿಯಮಾವಳಿ ಪುಸ್ತಕದ ಪುಟ ಸಂಖ್ಯೆ 446ರಲ್ಲಿರುವ 12 ನಿಯಮದಲ್ಲಿ, ಸಂಸ್ಥೆಯ ಸಮೀಪದ ಜಮೀನು ಕಟ್ಟಡ ಮತ್ತು ನಿವೇಶನಗಳೂ ಸೇರಿದಂತೆ ಯಾವುದೇ ಸವತ್ತನ್ನು ಹಿಂದೂಗಳಲ್ಲದವರಿಗೆ ಗುತ್ತಿಗೆ ನೀಡತಕ್ಕದಲ್ಲ ಎಂದು ಉಲ್ಲೇಖಿಸಲಾಗಿದೆ.

ಇದೀಗ ಇದೇ ನಿಯಮವನ್ನು ನಾವು ಜಾರಿ ಮಾಡಿದ್ದೇವೆ ಎಂದು ಕಾಪು ಮಾರಿಗುಡಿ ಆಡಳಿತ ಮಂಡಳಿ ಹೇಳುತ್ತಿದೆ. ಹಿಂದೂ ಸಂಘಟನೆಗಳಿಗೂ ಈ ನಿಯಮವನ್ನು ಮುಂದಿಟ್ಟುಕೊಂಡು ದೇವಾಲಯದ ಆಡಳಿತ ಮಂಡಳಿ ಜೊತೆ ಮಾತುಕತೆ ನಡೆಸಿ ಹಿಂದೂಯೇತರ ವ್ಯಕ್ತಿಗಳಿಗೆ ಅನುಮತಿ ನೀಡದಂತೆ ಮನವಿ ಮಾಡುತ್ತಿದೆ.

ಈ ನಿಯಮ ಜಾರಿಯಾಗಿದ್ದು 2002ರಲ್ಲಿ. ಈ ವೇಳೆ ರಾಜ್ಯದಲ್ಲಿ ಅಸ್ತಿತ್ವದಲ್ಲಿ ಇದ್ದಿದ್ದು ಎಸ್‍ಎಂ ಕೃಷ್ಣ ನೇತೃತ್ವದ ಕಾಂಗ್ರೆಸ್ ಸರ್ಕಾರ. ಇಂದು ಅದೇ ಕಾಂಗ್ರೆಸ್ಸಿಗರು ಇದು ಸರಿಯಲ್ಲ ಎನ್ನುತ್ತಿದ್ದಾರೆ.

ಹಿಜಬ್‌ ವಿವಾದ ಸೃಷ್ಟಿಯಾಗುವರೆಗೂ ಈ ನಿಯಮ ಇದೆ ಎನ್ನುವದು ಬಹುತೇಕ ಮಂದಿಗೆ ತಿಳಿದಿರಲಿಲ್ಲ. ಅಷ್ಟೇ ಅಲ್ಲದೇ ಕರಾವಳಿ ಭಾಗದಲ್ಲಿ ಹಿಂದೂ ದೇವಾಲಯಗಳಲ್ಲಿ ಇಲ್ಲಿಯವರೆಗೂ ಮುಸ್ಲಿಮ್‌ ವ್ಯಾಪಾರಿಗಳು ಅಂಗಡಿಗಳನ್ನು ತೆರೆಯುತ್ತಿದ್ದರು. ಆದರೆ ಹಿಜಬ್‌ ವಿವಾದ, ಕರ್ನಾಟಕ ಬಂದ್‌ ಬಳಿ ಈ ನಿಯಮ ಮುನ್ನೆಲೆಗೆ ಬಂದಿದೆ.

Share This Article
Leave a Comment

Leave a Reply

Your email address will not be published. Required fields are marked *