ಮುಸ್ಲಿಂ ಸಮುದಾಯದ ಪರ ಬ್ಯಾಟಿಂಗ್‌ – ಎಚ್‍ಡಿಕೆ ಲೆಕ್ಕಾಚಾರ ಏನು?

Public TV
1 Min Read

ಬೆಂಗಳೂರು: ಮುಸ್ಲಿಂ ಸಮುದಾಯದ ಪರ ಕುಮಾರಸ್ವಾಮಿ ಬ್ಯಾಟಿಂಗ್ ಹಿಂದೆ ಭಾರೀ ಲೆಕ್ಕಾಚಾರ ಇದೆ ಎಂಬ ಮಾತು ಕೇಳಿ ಬಂದಿದೆ. ಕಾಂಗ್ರೆಸ್‍ನ ಸಾಫ್ಟ್ ಹಿಂದುತ್ವ ನಡೆಯ ಲಾಭ ಮಾಡಿಕೊಳ್ಳಲು ಕುಮಾರಸ್ವಾಮಿ ಹೇಳಿಕೆ ಕೊಟ್ಟಿದ್ದಾರಾ ಎಂಬ ವಿಶ್ಲೇಷಣೆ ಬಂದಿದೆ.

ಜೆಡಿಎಸ್‌ ಪ್ಲ್ಯಾನ್‌ ಏನು?
ಹಿಜಬ್, ಹಲಾಲ್ ವಿಚಾರದಲ್ಲಿ ಕಾಂಗ್ರೆಸ್ ನಾಯಕರ ಮಧ್ಯೆ ಗೊಂದಲವಿದೆ. ಹಿಜಬ್‌ ವಿಚಾರದಲ್ಲಿ ಸಿದ್ದರಾಮಯ್ಯನವರು ಬಹಿರಂಗ ಹೇಳಿಕೆ ನೀಡಿದರೆ ಉಳಿದ ನಾಯಕರು ದೂರ ಇದ್ದಾರೆ. ಈ ಗೊಂದಲದ ಲಾಭ ಪಡೆಯಲು ಕಾಂಗ್ರೆಸ್ ಪರವಿರುವ ಅಲ್ಪಸಂಖ್ಯಾತ ವೋಟ್ ಬ್ಯಾಂಕ್‍ಗೆ ಕೈ ಹಾಕಲು ಮುಂದಾಗಿದೆ.

ಕಾಂಗ್ರೆಸ್ ರೀತಿ ಜೆಡಿಎಸ್‍ನದ್ದು ಸಾಫ್ಟ್ ಹಿಂದುತ್ವ ಅಲ್ಲ ಅಂತ ತೋರಿಸಿಕೊಳ್ಳಲು ಬಿಜೆಪಿ ವಿರುದ್ಧ ಗುಡುಗಬೇಕು. ಆಗ ಬಿಜೆಪಿ ವಿರೋಧಿ ಓಟ್ ಬ್ಯಾಂಕ್ ಧ್ರುವೀಕರಣಗೊಳ್ಳಬಹುದು. ಈ ರೀತಿ ಮಾಡಿದರೆ ಜೆಡಿಎಸ್-ಬಿಜೆಪಿ ಮೈತ್ರಿ ಗುಮಾನಿಯಿಂದ ಆಗಬಹುದಾದ ಡ್ಯಾಮೇಜ್ ಕಂಟ್ರೋಲ್ ಮಾಡಿದಂತಾಗುತ್ತದೆ ಎಂಬ ರಾಜಕೀಯ ಲೆಕ್ಕಾಚಾರ ಇದರಲ್ಲಿದೆ. ಇದನ್ನೂ ಓದಿ: ಮುಂದಿನ ಲೋಕಸಭೆ ಚುನಾವಣೆಯಲ್ಲಿ ಮಂಡ್ಯದಿಂದ ನಿಖಿಲ್ ಸ್ಪರ್ಧೆ: ಹೆಚ್‍ಡಿಕೆ ಘೋಷಣೆ

ಚುನಾವಣಾ ಸಮಯದಲ್ಲಿ ಕಾಂಗ್ರೆಸ್‌ ನಾಯಕರು ಬಿಜೆಪಿಯ ಬಿ ಟೀಂ, ಬಿಜೆಪಿ ಜೊತೆ ಕುಮಾರಸ್ವಾಮಿ ಮ್ಯಾಚ್‍ಫಿಕ್ಸಿಂಗ್ ಮಾಡುತ್ತಾರೆ ಎಂದು ಆರೋಪ ಮಾಡುತ್ತಿರುತ್ತಾರೆ. ಈ ರೀತಿ ನಡೆದುಕೊಂಡರೆ ಆ ಆರೋಪ ಮುಂದೆ ಬರುವುದಿಲ್ಲ. ಅಷ್ಟೇ ಅಲ್ಲದೇ ಪಕ್ಷದ ಜಾತ್ಯಾತೀತ ಇಮೇಜ್‌ಗೆ ಯಾವುದೇ ಧಕ್ಕೆ ಆಗುವುದಿಲ್ಲ ಎಂಬ ಅಭಿಪ್ರಾಯಕ್ಕೆ ಬಂದಿದೆ ಎನ್ನಲಾಗುತ್ತಿದೆ.

ಸಾಧಾರಣವಾಗಿ ಕುಮಾರಸ್ವಾಮಿ ಬಹಳ ತಾಳ್ಮೆಯಿಂದ ಪ್ರತಿಕ್ರಿಯೆ ನೀಡುತ್ತಾರೆ. ಆದರೆ ಹಿಜಬ್‌ ವಿವಾದದ ಆರಂಭದಲ್ಲಿ ಯಾವುದೇ ನಿಲುವನ್ನು ಪ್ರಕಟಿಸದೇ ಇದ್ದರೂ ನಂತರ ಸ್ಪಷ್ಟವಾಗಿ ಹಿಜಬ್‌ ಧರಿಸಿದರೆ ಏನು ಎಂದು ಪ್ರಶ್ನಿಸಿದ್ದರು. ಈಗ ಈ ವಿಚಾರದಲ್ಲೂ ಹಿಂದೂ ಕಾರ್ಯಕರ್ತರ ವಿರುದ್ಧ ಆಕ್ರೋಶವಾಗಿ ಪ್ರತಿಕ್ರಿಯಿಸುತ್ತಿದ್ದಾರೆ. ಹೀಗಾಗಿ ಕಾಂಗ್ರೆಸ್‌ ಮತಗಳನ್ನು ಸೆಳೆಯಲು ಕುಮಾರಸ್ವಾಮಿ ಈ ಹೇಳಿಕೆಗಳನ್ನು ನೀಡುತ್ತಿರಬಹುದು ಎಂಬ ಮಾತು ರಾಜಕೀಯ ವಲಯದಲ್ಲಿ ಹರಿದಾಡುತ್ತಿದೆ.

Share This Article
Leave a Comment

Leave a Reply

Your email address will not be published. Required fields are marked *