ಡಿಸಿ ಬಗ್ಗೆ ವಿವಾದಾತ್ಮಕ ಹೇಳಿಕೆ | ಕರ್ನಲ್ ಸೋಫಿಯಾ ವಿರುದ್ಧದ ಹೇಳಿಕೆಗೆ ಆದೇಶ ಗೊತ್ತಾ? – ರವಿಕುಮಾರ್‌ಗೆ ಹೈಕೋರ್ಟ್ ಚಾಟಿ

By
2 Min Read

– ಕ್ಷಮೆಯಾಚನೆ ಪತ್ರದಲ್ಲಿ ಕೊಡಿ – ಕೋರ್ಟ್ ಸೂಚನೆ
– ಜೂ.16ಕ್ಕೆ ವಿಚಾರಣೆ ಮುಂದೂಡಿಕೆ

ಬೆಂಗಳೂರು: ಕಲಬುರಗಿ (Kalaburagi) ಡಿಸಿ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿದ್ದ ವಿಧಾನ ಪರಿಷತ್ ಸದಸ್ಯ ರವಿಕುಮಾರ್  (N.Ravikumar) ವಿರುದ್ಧ ಹೈಕೋರ್ಟ್ (High Court) ಚಾಟಿ ಬೀಸಿದೆ.

ಹೇಳಿಕೆ ವಿರುದ್ಧ ದಾಖಲಾದ ಎಫ್‍ಐಆರ್ ರದ್ದು ಕೋರಿ ರವಿಕುಮಾರ್ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯ ವಿಚಾರಣೆ ನಡೆಸಿತು. ಈ ವೇಳೆ ರವಿಕುಮಾರ್ ಅವರನ್ನು ಪೀಠ ತೀವ್ರ ತರಾಟೆಗೆ ತೆಗೆದುಕೊಂಡಿತು. ಭಾರತೀಯ ಸೇನೆಯ ಅಧಿಕಾರಿ ಕರ್ನಲ್ ಸೋಫಿಯಾ ಖುರೇಷಿಯವರ ವಿರುದ್ಧ ಹೇಳಿಕೆ ಗಮನಿಸಿದ್ದೀರಿ ಅಲ್ವಾ? ಆ ಸಚಿವರ ಹೇಳಿಕೆಗೆ ಮಧ್ಯಪ್ರದೇಶ ಹೈಕೋರ್ಟ್ ಆದೇಶ ಮಾಡಿರುವುದು ಗೊತ್ತಿದೆಯಾ? ಎಂದು ನ್ಯಾಯಾಧೀಶರು ಪ್ರಶ್ನಿಸಿದರು. ಅಲ್ಲದೇ ನಿಮ್ಮ ಹೇಳಿಕೆ ಸರ್ವತಾ ಅನಗತ್ಯವಾದದ್ದು. ನೀವು ಈ ರೀತಿ ಹೇಳಿಕೆ ಕೊಡಬಾರದು ಎಂದು ಕೋರ್ಟ್ ತಾಕೀತು ಮಾಡಿದೆ. ಇದನ್ನೂ ಓದಿ: ಕಲಬುರಗಿ ಡಿಸಿ ವಿರುದ್ಧ ಅವಹೇಳನಕಾರಿ ಹೇಳಿಕೆ – ಬಿಜೆಪಿ ಎಂಎಲ್‌ಸಿ ರವಿಕುಮಾರ್‌ಗೆ ಬಂಧನ ಭೀತಿ!

ರವಿಕುಮಾರ್ ಪರ ವಕೀಲರು, ಅವರು ಕ್ಷಮೆಯಾಚಿಸುತ್ತಾರೆ ಎಂದು ಕೋರ್ಟ್‍ಗೆ ಮನವಿ ಮಾಡಿದರು. ಕ್ಷಮೆಯಾಚನೆಯನ್ನು ಪ್ರಮಾಣ ಪತ್ರದ ಮೂಲಕ ಸಲ್ಲಿಸಲು ಕೋರ್ಟ್ ಸೂಚನೆ ನೀಡಿತು.

ರವಿಕುಮಾರ್ ಅವರನ್ನು ಬಂಧಿಸುವುದಿಲ್ಲ. ಅವರು ತನಿಖೆಗೆ ಸಹಕರಿಸಲಿ ಎಂದು ಎಸ್‍ಪಿಪಿ ಜಗದೀಶ್ ಹೈಕೋರ್ಟ್‍ಗೆ ತಿಳಿಸಿದರು. ವಾದ – ಪ್ರತಿವಾದ ಆಲಿಸಿದ ನ್ಯಾಯಾಲಯ ಜೂನ್ 19 ಕ್ಕೆ ವಿಚಾರಣೆ ಮುಂದೂಡಿತು.

ರವಿಕುಮಾರ್‌ ಹೇಳಿದ್ದೇನು?
ಮೇ 24 ರಂದು ಬಿಜೆಪಿಯ ʻಕಲಬುರಗಿ ಚಲೋʼ ಪ್ರತಿಭಟನಾ ರ‍್ಯಾಲಿಯನ್ನುದ್ದೇಶಿಸಿ ಮಾತನಾಡುವಾಗ ಎನ್‌. ರವಿಕುಮಾರ್, ʻʻಜಿಲ್ಲಾಡಳಿತವು ಆಡಳಿತಾರೂಢ ಕಾಂಗ್ರೆಸ್ ಸರ್ಕಾರದ ಪ್ರಭಾವದಿಂದ ಕಾರ್ಯನಿರ್ವಹಿಸುತ್ತಿದೆ. ಕಲಬುರಗಿ ಡಿಸಿ ಕಚೇರಿಯೂ ತನ್ನ ಸ್ವಾತಂತ್ರ್ಯ ಕಳೆದುಕೊಂಡಿದೆ. ಡಿಸಿ ಮೇಡಂ ಅವರು (ಕಾಂಗ್ರೆಸ್) ಹೇಳುವುದನ್ನು ಸಹ ಕೇಳುತ್ತಿದ್ದಾರೆ. ಡಿಸಿ ಪಾಕಿಸ್ತಾನದಿಂದ ಬಂದಿದ್ದಾರೋ ಅಥವಾ ಇಲ್ಲಿ ಐಎಎಸ್ ಅಧಿಕಾರಿಯೋ ನನಗೆ ತಿಳಿದಿಲ್ಲʼʼ ಎಂದು ನಾಲಿಗೆ ಹರಿಬಿಟ್ಟಿದ್ದರು. ಈ ವೇಳೆ ಜನರ ಚಪ್ಪಾಳೆಗೆ ಪ್ರತಿಕ್ರಿಯಿಸಿ, ನಿಮ್ಮ ಚಪ್ಪಾಳೆ ನೋಡಿದರೆ, ʻಡಿಸಿ ಬಹುಶಃ ಪಾಕಿಸ್ತಾನದಿಂದ ಬಂದಿದ್ದಾರೆʼ ಎಂದು ಅವಹೇಳನ ಮಾಡಿದ್ದರು.

ಇದರ ಬೆನ್ನಲ್ಲೇ ಕಾಂಗ್ರೆಸ್‌ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದರು. ರವಿಕುಮಾರ್‌ ಅವರ ಹೇಳಿಕೆ ವಿರುದ್ಧ ರಾಜ್ಯ ಸರ್ಕಾರ ಕೂಡ ಕ್ರಮ ಕೈಗೊಳ್ಳಲಿದೆ ಎಂದು ಡಿಸಿಎಂ ಡಿಕೆ ಶಿವಕುಮಾರ್‌ ಎಚ್ಚರಿಕೆ ನೀಡಿದ್ದರು. ಇದನ್ನೂ ಓದಿ: ಭೀಮಾ ನದಿ ತೀರದಲ್ಲಿ ಪ್ರವಾಹದ ಆತಂಕ – ನದಿಗಿಳಿಯದಂತೆ ಜಿಲ್ಲಾಡಳಿತ ಸೂಚನೆ

Share This Article