ಲ್ಯಾಂಬೋರ್ಗಿನಿ ಕಾರಲ್ಲಿ ಹೋಗಿ ರಸ್ತೆ ಕಸ ಗುಡಿಸಿ, ಅದೇ ಕಾರಲ್ಲಿ ವಾಪಸ್‌ ಬನ್ನಿ – ಸಂಚಾರ ನಿಯಮ ಉಲ್ಲಂಘಿಸಿದವನಿಗೆ ಹೈಕೋರ್ಟ್ ಶಿಕ್ಷೆ!

2 Min Read

ಬೆಂಗಳೂರು: ಅತಿವೇಗವಾಗಿ ಲ್ಯಾಂಬೋರ್ಗಿನಿ ಕಾರು (Lamborghini Car) ಚಲಾಯಿಸಿ ಸಂಚಾರ ನಿಯಮ ಉಲ್ಲಂಘಿಸಿದ್ದ ಸವಾರನಿಗೆ ಲ್ಯಾಂಬೋರ್ಗಿನಿ ಕಾರಿನಲ್ಲಿ ಹೋಗಿ ರಸ್ತೆ ಕಸ ಗುಡಿಸಿ ಅದೇ ಕಾರಲ್ಲಿ ವಾಪಸ್ ಬರುವಂತೆ ಹೈಕೋರ್ಟ್ (Karnataka Highcourt) ಸಮುದಾಯ ಶಿಕ್ಷೆ ವಿಧಿಸಿದೆ.

ಕೆಲವರಿಗೆ ಹೈ ಎಂಡ್ ಕಾರಲ್ಲಿ ಸಂಚಾರ ನಿಯಮ ಉಲ್ಲಂಘಿಸಿ ಅತಿ ವೇಗದ ಚಾಲನೆ ಮಾಡೊ ಖಯಾಲಿ.. ಇತ್ತೀಚೆಗೆ ರಿಕ್ಕಿ ರೈ ಕಾರು ಡ್ರಿಫ್ಟಿಂಗ್ (ಗಿರಗಿಟ್ಳೆ ಹೊಡೆಸುವುದು) ಮಾಡಿದ್ದು ಇದಕ್ಕೊಂದು ತಾಜಾ ನಿದರ್ಶನ. ಇದೇ ರೀತಿ ಅಜಾಗರೂಕತೆಯಿಂದ ಐಷಾರಾಮಿ ಲ್ಯಾಂಬೋರ್ಗಿನಿ ಕಾರು ಚಲಾಯಿಸಿ ಸಂಚಾರ ನಿಯಮ ಉಲ್ಲಂಘಿಸಿದ್ದ ವ್ಯಕ್ತಿಗೆ ಹೈಕೋರ್ಟ್ ಸಮುದಾಯ ಸೇವಾ ಶಿಕ್ಷೆ ವಿಧಿಸಿದೆ.

ಆರೋಪಿಯು ತನ್ನದೇ ಲ್ಯಾಂಬೋರ್ಗಿನಿ ಕಾರಿನಲ್ಲಿ ಹೋಗಿ ರಸ್ತೆ ಕಸ ಗುಡಿಸಿ, ಅದೇ ಕಾರಿನಲ್ಲಿ ವಾಪಸ್ ಬರಬೇಕು ಎಂದು ನ್ಯಾಯಾಲಯ ಆದೇಶಿಸಿದೆ. ಹಸಿರು ಲ್ಯಾಂಬೋರ್ಗಿನಿಯಲ್ಲಿ ಹೋಗಿ ರಸ್ತೆ ಕಸ ಗುಡಿಸಿ, ಮತ್ತದೇ ಕಾರಿನಲ್ಲಿ ವಾಪಸ್ ಬನ್ನಿ ಎಂದು ನ್ಯಾಯಮೂರ್ತಿ ನಾಗಪ್ರಸನ್ನ ಅವರಿದ್ದ ಪೀಠ ಮೌಖಿಕವಾಗಿ ಸೂಚನೆ ನೀಡಿದೆ.

ಜನವರಿ 20 ರಂದು ಚಿರಂತನ್ ಎಂಬಾತ ಕೆಂಗೇರಿ ಸಂಚಾರ ಠಾಣಾ ವ್ಯಾಪ್ತಿಯಲ್ಲಿ ತನ್ನ ಲ್ಯಾಂಬೋರ್ಗಿನಿ ಕಾರನ್ನು ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿ ಸಂಚಾರ ನಿಯಮ ಉಲ್ಲಂಘಿಸಿದ್ದ. ಈ ಸಂಬಂಧ ಬಿಎನ್‌ಎಸ್ 281 ಮತ್ತು ಐಎಂವಿ ಕಾಯ್ದೆಯ 177ನೇ ಸೆಕ್ಷನ್ ಅಡಿಯಲ್ಲಿ ಆತನ ವಿರುದ್ಧ ಕೆಂಗೇರಿ ಸಂಚಾರ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿತ್ತು. ಎಫ್‌ಐಆರ್‌ ರದ್ದು ಕೋರಿ ಲ್ಯಾಂಬೋರ್ಗಿನಿ ಕಾರು ಚಾಲಕ ಹೈಕೋರ್ಟ್ ಮೊರೆ ಹೋಗಿದ್ರು. ಈ ಪ್ರಕರಣದ ಅರ್ಜಿ ವಿಚಾರಣೆ ಇಂದು ಹೈಕೋರ್ಟ್‌ನಲ್ಲಿ ನ್ಯಾಯಮೂರ್ತಿ ನಾಗಪ್ರಸನ್ನ ಪೀಠದ ಮುಂದೆ ಬಂದಿತ್ತು. ವಿಚಾರಣೆ ವೇಳೆ ಆರೋಪಿ ಪರ ವಕೀಲರು, ತಮ್ಮ ಕಕ್ಷಿದಾರನಿಗೆ ಪಶ್ಚಾತ್ತಾಪವಾಗಿದೆ ಎಂದು ತಿಳಿಸಿದ್ದರು. ಅಲ್ಲದೇ, ಬಿಎನ್‌ಎಸ್ ಅಡಿಯಲ್ಲಿ ಸಮುದಾಯ ಸೇವೆಗೆ ಕೆಲವು ಅವಕಾಶಗಳಿದ್ದು, ಆರೋಪಿಯು ಮಕ್ಕಳಿಗೆ ಸಂಚಾರ ನಿಯಮಗಳ ಕುರಿತು ಪಾಠ ಮಾಡುವುದಾಗಿ ನ್ಯಾಯಾಲಯಕ್ಕೆ ಮನವಿ ಮಾಡಿದರು.

ಆದರೆ, ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದ ವಿಶೇಷ ಸರ್ಕಾರಿ ಅಭಿಯೋಜಕರು ಲ್ಯಾಂಬೋರ್ಗಿನಿ ಕಾರಿನಲ್ಲಿ ನಿಯಮ ಉಲ್ಲಂಘಿಸಿದ ವ್ಯಕ್ತಿ ಮಕ್ಕಳಿಗೆ ಸಂಚಾರ ನಿಯಮಗಳ ಪಾಠ ಮಾಡುವುದು ಎಷ್ಟು ಸೂಕ್ತ ಎಂದು ಪ್ರಶ್ನಿಸಿದರು. ಬದಲಿಗೆ ಆರೋಪಿಯಿಂದ ಗಿಡಗಳನ್ನು ನೆಡಿಸುವುದು ಸೂಕ್ತ ಎಂದು ನ್ಯಾಯಾಲಯಕ್ಕೆ ಸಲಹೆ ನೀಡಿದರು. ಎರಡೂ ಕಡೆಯ ವಾದಗಳನ್ನು ಆಲಿಸಿದ ಹೈಕೋರ್ಟ್ ಪೀಠ, ಚಿರಂತನ್‌ಗೆ ಕಸ ಗುಡಿಸುವ ಸಮುದಾಯ ಶಿಕ್ಷೆ ವಿಧಿಸಿತು. ಈ ಸಮುದಾಯ ಶಿಕ್ಷೆಯ ದಿನಾಂಕ ಮತ್ತು ಸಮಯವನ್ನು ನ್ಯಾಯಾಲಯದ ಆದೇಶದಲ್ಲಿ ತಿಳಿಸಲಾಗುವುದು ಎಂದು ಹೇಳಿದೆ. ಹೈಕೋರ್ಟ್ ನ ಈ ಆದೇಶ ನಿಜಕ್ಕೂ ಜನ್ರಿಂದ ಒಳ್ಳೆ ಪ್ರಶಂಸನೆಗೆ ಒಳಗಾಗಿದೆ. ದುಡ್ಡಿನ ಮತ್ತಲ್ಲಿ ಏನ್ ಬೇಕಾದ್ರು ಮಾಡಿದ್ರೂ ನಡೆಯುತ್ತೆ ಅನ್ನೋರಿಗೆ ಇದು ಎಚ್ಚರಿಕೆಯ ಗಂಟೆಯಾಗಿದೆ‌.

Share This Article