-ವಿಚಾರಣೆ ಏಪ್ರಿಲ್ 23ಕ್ಕೆ ಮುಂದೂಡಿಕೆ
ಬೆಂಗಳೂರು: ದೈವಕ್ಕೆ ಅಪಮಾನ ಮಾಡಿದ ಆರೋಪ ಹೊತ್ತಿರುವ ನಟ ರಣವೀರ್ ಸಿಂಗ್‌ಗೆ (Ranveer Singh) ಮತ್ತೊಮ್ಮೆ ಅಫಿಡವಿಟ್ ಅನ್ನು ಸಲ್ಲಿಸುವಂತೆ ಹೈಕೋರ್ಟ್ (High Court) ಸೂಚನೆ ನೀಡಿದೆ.
ಕಾಂತಾರ (Kantara) ಚಿತ್ರದಲ್ಲಿನ ದೈವ ಸಂಪ್ರದಾಯ ಅಪಹಾಸ್ಯ ಮಾಡುವ ಮೂಲಕ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟು ಮಾಡಿರುವ ಆರೋಪ ಎದುರಿಸುತ್ತಿರುವ ನಟ ರಣವೀರ್ ಸಿಂಗ್ ಎಫ್‌ಐಆರ್ (FIR) ರದ್ದು ಕೋರಿ ಅರ್ಜಿ ಸಲ್ಲಿಸಿದ್ದರು. ಈ ಸಂಬಂಧ ಹೈಕೋರ್ಟ್ ನ್ಯಾಯಮೂರ್ತಿ ನಾಗಪ್ರಸನ್ನ ಪೀಠದಲ್ಲಿ ಅರ್ಜಿ ವಿಚಾರಣೆ ನಡೆಯಿತು. ಇದನ್ನೂ ಓದಿ: ತುಳುನಾಡಿನ ದೈವಕ್ಕೆ ಅಪಮಾನ ಮಾಡಿದ ಬಾಲಿವುಡ್ ನಟ ರಣವೀರ್ ಸಿಂಗ್
ರಣವೀರ್ ಸಿಂಗ್ ಮನಸಾರೆ ಕ್ಷಮೆ ಕೋರಿಲ್ಲ. ನಾವೇ ನ್ಯಾಯಾಲಯದ ಮುಂದೆ ಬಂದು ದೂರು ನೀಡಿದ್ದೇವೇನೋ ಎಂಬ ರೀತಿಯಲ್ಲಿ ಬಿಂಬಿಸಲಾಗಿದೆ ಅಂತಾ ದೂರುದಾರರ ಪರ ವಕೀಲರು ವಾದಿಸಿದ್ರು. ಇದಕ್ಕೆ ಆಕ್ಷೇಪ ವ್ಯಕ್ಯಪಡಿಸಿದ ರಣವೀರ್ ಪರ ವಕೀಲ ಸಜನ್ ಪೂವಯ್ಯ, ಸರಿಯಾದ ರೀತಿಯಲ್ಲಿಯೇ ಕ್ಷಮೆ ಕೋರಿ ಅಫಿಡವಿಟ್ ಸಲ್ಲಿಸಲಾಗಿದೆ. ಬೇಷರತ್ ಕ್ಷಮೆ ಕೋರಲಾಗಿದೆ. ಮೈಸೂರಿನ ಚಾಮುಂಡಿ ದೇವಾಲಯಕ್ಕೂ ಭೇಟಿ ನೀಡುತ್ತೇನೆಂದು ರಣವೀರ್ ಹೇಳಿದ್ದಾರೆ. ಇನ್ನೊಮ್ಮೆ ಬೇಕಿದ್ದರೆ ಕ್ಷಮೆಯ ಅಫಿಡವಿಟ್ ಕರಡನ್ನು ಅರ್ಜಿದಾರರಿಗೆ ಕಳುಹಿಸಿಕೊಡಲಾಗುವುದು ಅಂತ ಹೇಳಿದ್ರು. ಇನ್ನೊಮ್ಮೆ ಅಫಿಡವಿಟ್ ಹಾಕಿ ಎಂದು ಸೂಚನೆ ನೀಡಿದ ಹೈಕೋರ್ಟ್, ವಿಚಾರಣೆಯನ್ನು ಏಪ್ರಿಲ್ 23ಕ್ಕೆ ಮುಂದೂಡಿದೆ.

