ಬಿಜೆಪಿ ಬಣ ವೀರರ ಲಿಂಗಾಯತ ಸಭೆಗಳಿಗೆ ಹೈಕಮಾಂಡ್ ಬ್ರೇಕ್ – ಬಿವೈವಿ ವಿರುದ್ಧ ಅಮಿತ್ ಶಾಗೆ ಲಿಂಬಾವಳಿ ದೂರು

Public TV
2 Min Read

ನವದೆಹಲಿ\ಬೆಂಗಳೂರು: ರಾಜ್ಯ ಬಿಜೆಪಿ ಗೊಂದಲ ಶಮನಕ್ಕೆ ಕೊನೆಗೂ ಹೈಕಮಾಂಡ್ ಮುಂದಾಗಿದೆ. ಬಿಜೆಪಿಯಲ್ಲಿ ನಡೆಯುತ್ತಿದ್ದ ಲಿಂಗಾಯತ ವರ್ಸಸ್ ಲಿಂಗಾಯತ ಸಮರಕ್ಕೆ ಹೈಕಮಾಂಡ್ ಬ್ರೇಕ್ ಹಾಕಿದೆ. ಈ ಬೆನ್ನಲ್ಲೇ ಎರಡೂ ಬಣಗಳ ಸಭೆಗಳಿಗೂ ವಿರಾಮ ಸಿಕ್ಕಿದೆ. ಇನ್ನೊಂದು ಕಡೆ ಮೊನ್ನೆಯಷ್ಟೇ ದೆಹಲಿಗೆ ಹೋಗಿದ್ದ ಅರವಿಂದ ಲಿಂಬಾವಳಿ (Aravind Limbavali) ನೇರವಾಗಿ ಅಮಿತ್ ಶಾ (Amith Shah) ಅವರನ್ನ ಭೇಟಿ ಮಾಡಿ ವಿಜಯೇಂದ್ರ ವಿರುದ್ಧ ಚಾರ್ಜ್‌ಶೀಟ್‌ ಸಲ್ಲಿಸಿದರು.

ಇತ್ತೀಚೆಗೆ ರಾಜ್ಯಕ್ಕೆ ಬಂದಿದ್ದ ಅಮಿತ್ ಶಾ ಇದೀಗ ಬಿಜೆಪಿ ಮನೆ ರಿಪೇರಿಗೆ ಕೈ ಹಾಕಿದ್ದಾರೆ. ರಾಜ್ಯ ಬಿಜೆಪಿಯಲ್ಲಿ ನಡೆಯುತ್ತಿದ್ದ ಲಿಂಗಾಯತ ವರ್ಸಸ್ ಲಿಂಗಾಯತ ಸಮರಕ್ಕೆ ಅಮಿತ್ ಶಾ ಬ್ರೇಕ್ ಹಾಕಿದ್ದಾರೆ. ದೆಹಲಿಯಿಂದಲೇ ಖಡಕ್ ಸಂದೇಶ ರವಾನಿಸಿರುವ ಅಮಿತ್ ಷಾ, ಪ್ರತ್ಯೇಕ ಸಭೆಗಳನ್ನು ನಡೆಸದಂತೆ ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ: 83,00,00,00,00,000 ಕ್ರಿಪ್ಟೋ ವಂಚನೆ – ಕೇರಳದಲ್ಲಿ ಸಿಬಿಐನಿಂದ ಲಿಥುವೇನಿಯಾದ ಪ್ರಜೆ ಅರೆಸ್ಟ್‌

ಅಮಿತ್ ಶಾ ಎಚ್ಚರಿಕೆ ಬೆನ್ನಲ್ಲೇ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಡ್ಯಾಮೇಜ್ ಕಂಟ್ರೊಲ್‌ಗೆ ಮುಂದಾಗಿದ್ದಾರೆ. ಲಿಂಗಾಯತ ಅಸ್ತ್ರ ಮುಂದಿಟ್ಟುಕೊಂಡು ಯಾವುದೇ ಕಾರಣಕ್ಕೂ ಭವಿಷ್ಯದಲ್ಲಿ ಸಭೆ ಹಾಗೂ ಶಕ್ತಿ ಪ್ರದರ್ಶನ ನಡೆಸದಂತೆ ಮಾಜಿ ಶಾಸಕ ರೇಣುಕಾಚಾರ್ಯಗೆ ಬಿಎಸ್‌ವೈ ಅವರು ಖಡಕ್ ಸಂದೇಶ ನೀಡಿದ್ದಾರೆ. ಬುಧವಾರ ರಾತ್ರಿ ತಮ್ಮ ಧವಳಗಿರಿ ನಿವಾಸಕ್ಕೆ ರೇಣುಕಾಚಾರ್ಯ ಅವರನ್ನು ಕರೆಸಿಕೊಂಡು ಮಾತಾಡಿರುವ ಯಡಿಯೂರಪ್ಪ ಅವರು, ವಿಜಯೇಂದ್ರ ಬೆಂಬಲಿಸಿ ಲಿಂಗಾಯತರು ಯಾವುದೇ ಸಭೆ ನಡೆಸದಂತೆ ಸೂಚನೆ ನೀಡಿದ್ದಾರೆ. ಯಡಿಯೂರಪ್ಪ ಸೂಚನೆ ಹಿನ್ನೆಲೆಯಲ್ಲಿ ಸದ್ಯಕ್ಕೆ ಸುಮ್ಮನಿದ್ದರೂ ಸಮುದಾಯದ ಮಹಾಸಂಗಮ ಸಮಾವೇಶ ನಡೆಸುವುದಾಗಿ ರೇಣುಕಾಚಾರ್ಯ ತಿಳಿಸಿದ್ದಾರೆ. ಇದನ್ನೂ ಓದಿ: ಸರ್ಕಾರಿ ನೌಕರರಿಗೆ ಹಳೆ ಪಿಂಚಣಿ ಪದ್ದತಿ ಜಾರಿ ಮಾಡ್ತೀವಿ, ಸಮಯ ನಿಗದಿ ಮಾಡಲು ಆಗಲ್ಲ: ಬೋಸರಾಜು

ರೆಬೆಲ್ ನಾಯಕ ಯತ್ನಾಳ್ ಸಹ ಮಾ. 22ರಂದು ನಡೆಸಬೇಕಿದ್ದ ಲಿಂಗಾಯತ ಸಮಾವೇಶವನ್ನು ಮುಂದೂಡಿದ್ದಾರೆ. ಬುಧವಾರ ತಂಡದ ಪ್ರಮುಖರ ಸಭೆ ನಡೆಸಿದ್ದ ಯತ್ನಾಳ್ ಹಾಗೂ ಮಾಜಿ ಸಂಸದ ಜಿ.ಎಂ.ಸಿದ್ದೇಶ್ವರ ಅವರು ಲಿಂಗಾಯತ ಸಮಾವೇಶ ಸದ್ಯಕ್ಕೆ ನಡೆಸದಿರುವ ತೀರ್ಮಾನಕ್ಕೆ ಬಂದಿದ್ದಾರೆ. ಇದನ್ನೂ ಓದಿ: ಬೈಕ್ ಅಡ್ಡಗಟ್ಟಿ ವ್ಯಕ್ತಿಯ ಬರ್ಬರ ಹತ್ಯೆ

ಈ ನಡುವೆ ವಿಜಯೇಂದ್ರಗೆ ಕೊಂಚ ಹಿನ್ನಡೆಯಾಗುವ ವಿದ್ಯಮಾನ ನಡೆದಿದೆ. ರಾಜ್ಯಾಧ್ಯಕ್ಷ ಸ್ಥಾನದಲ್ಲಿ ವಿಜಯೇಂದ್ರರನ್ನ ಮುಂದುವರೆಸದಂತೆ ನೇರವಾಗಿ ಅಮಿತ್ ಷಾ ಅವರಿಗೆ ಮಾಜಿ ಸಚಿವ ಅರವಿಂದ ಲಿಂಬಾವಳಿ ಚಾರ್ಜ್‌ಶೀಟ್‌ ಸಲ್ಲಿಸಿದ್ದಾರೆ. ಇದನ್ನೂ ಓದಿ: ಹುಟ್ಟೂರಿನ ರಥೋತ್ಸವದಲ್ಲಿ ತೇರು ಎಳೆದ ಅರ್ಜುನ್ ಸರ್ಜಾ, ಧ್ರುವ ಸರ್ಜಾ

ಮಾ. 11ರಂದು ಅರವಿಂದ ಲಿಂಬಾವಳಿ, ಅಮಿತ್ ಷಾ ಬುಲಾವ್ ಮೇರೆಗೆ ದೆಹಲಿಗೆ ಹೋಗಿದ್ದರು. ದೆಹಲಿಯ ಸಂಸತ್ ಭವನದಲ್ಲಿ ಸುಮಾರು 15 ನಿಮಿಷಗಳ ಕಾಲ ಅಮಿತ್ ಶಾ ಜತೆ ಅರವಿಂದ ಲಿಂಬಾವಳಿ ಮಾತುಕತೆ ನಡೆಸಿ ರಾಜ್ಯ ಬಿಜೆಪಿಯ ಪ್ರಸಕ್ತ ಪರಿಸ್ಥಿತಿ ಬಗ್ಗೆ ಮಾಹಿತಿ ನೀಡಿದ್ದಾರೆ. ವಿಜಯೇಂದ್ರರನ್ನು ರಾಜ್ಯಾಧ್ಯಕ್ಷರಾಗಿ ಮುಂದುವರೆಸದಂತೆ ಕಾರಣ ಸಹಿತ ದೂರು ಕೊಟ್ಟು ಬಂದಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: ರನ್ಯಾಗೆ ಮಾತ್ರ ಸಿನಿಮಾ ನಂಟಿಲ್ಲ – ಆರೋಪಿ ತರುಣ್‌ಗೆ ಇದೆ ಟಾಲಿವುಡ್ ನಂಟು!

ರಾಜ್ಯ ಬಿಜೆಪಿಯತ್ತ ಹೈಕಮಾಂಡ್ ಈಗ ಗಮನ ಕೊಡುತ್ತಿರುವುದು ನಿಷ್ಠ ಬಿಜೆಪಿಗರಲ್ಲಿ ಸಮಾಧಾನ ತಂದಿದೆ. ವಿಜಯೇಂದ್ರ ಹಾಗೂ ಯತ್ನಾಳ್ ಬಣಗಳಲ್ಲಿ ಏನಾಗುತ್ತದೋ ಎಂಬ ಆತಂಕ ಸೃಷ್ಟಿಸಿದೆ. ಆದರೆ ಈ ಬಾರಿ ಹೈಕಮಾಂಡ್ ನಿಜಕ್ಕೂ ಬಿಜೆಪಿಯ ಭಿನ್ನಮತ, ಗೊಂದಲ ಸರಿಪಡಿಸುತ್ತದೆಯೇ ಎನ್ನುವ ಪ್ರಶ್ನೆಗೆ ಉತ್ತರವನ್ನು ಕಾದು ನೋಡಬೇಕಿದೆ.

Share This Article