ಕದಂಬ ನೌಕಾ ನೆಲೆಯಲ್ಲಿ ಹೈ ಅಲರ್ಟ್- ನಿಷೇಧ ಉಲ್ಲಂಘಿಸಿದ ಎರಡು ಮೀನುಗಾರಿಕಾ ದೋಣಿ ವಶ

Public TV
1 Min Read

-ಬೆಂಗಳೂರಿನಲ್ಲೂ ಶುರುವಾಗಿದೆ ಉಗ್ರರ ದಾಳಿ ಆತಂಕ

ಕಾರವಾರ: ಮಂಗಳೂರಿನಲ್ಲಿ ಶಂಕಿತ ವ್ಯಕ್ತಿಗಳ ಬಂಧನ ಹಿನ್ನೆಲೆಯಲ್ಲಿ ಜಲಮಾರ್ಗದಲ್ಲಿ ತಪಾಸಣೆ, ಭದ್ರತೆ ತೀವ್ರಗೊಂಡಿದೆ. ಈ ಹಿನ್ನೆಲೆ ಉತ್ತರಕನ್ನಡದ ಅರಗಾದಲ್ಲಿರುವ ಕದಂಬ ನೌಕಾ ನೆಲೆಯಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ.

ಮುಂಜಾಗೃತ ಕ್ರಮವಾಗಿ ಕದಂಬ ನೌಕಾನೆಲೆಯ ಅರಬ್ಬಿ ಸಮುದ್ರದ ಮೂರು ನಾಟಿಕಲ್ ಮೈಲು ದೂರದವರೆಗೆ ಮೀನುಗಾರಿಕಾ ದೋಣಿಗಳಿಗೆ ನಿಷೇಧ ಹೇರಲಾಗಿದೆ. ಅಲ್ಲದೆ ನಿಯಮ ಉಲ್ಲಂಘನೆ ಮಾಡಿದರೆ ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಲಾಗಿದೆ. ಆದರೂ ಕೂಡ ನಿಷೇಧಾಜ್ಞೆ ಉಲ್ಲಂಘಿಸಿ ನೌಕಾನೆಲೆಯ ಭಾಗದಲ್ಲಿ ಸ್ಥಳೀಯ ಎರಡು ಮೀನುಗಾರಿಕಾ ದೋಣಿ ಹಾದುಹೋಗಿದೆ. ಹೀಗಾಗಿ ಆ ಎರಡು ಸ್ಥಳೀಯ ಮೀನುಗಾರಿಕಾ ದೋಣಿಗಳನ್ನು ನೌಕಾ ಸಿಬ್ಬಂದಿ ವಶಕ್ಕೆ ಪಡೆದಿದ್ದಾರೆ.

ಭಟ್ಕಳ-ಉಡುಪಿ ಭಾಗ ಹಾಗೂ ಉಡುಪಿ-ಕಾರವಾರ ಮಾರ್ಗದ ಅರಬ್ಬಿ ಸಮುದ್ರದಲ್ಲಿ ನೌಕಾದಳದಿಂದ ತೀವ್ರ ತಪಾಸಣೆ ಕೈಗೊಳ್ಳಲಾಗಿದೆ. ಯಾವುದೇ ಅಹಿತಕರ ಘಟನೆಗಳು ನಡೆಯಬಾರದೆಂದು ಅಧಿಕಾರಿಗಳು ಜಾಗೃತಿ ವಹಿಸಿದ್ದಾರೆ.

ಇತ್ತ ಬೆಂಗಳೂರಿನಲ್ಲೂ ಉಗ್ರರ ಆತಂಕ ಶುರುವಾಗಿದೆ. ಬೆಂಗಳೂರಿನ ವಿವಿಧೆಡೆ ಇಬ್ಬರು ಶಂಕಿತರಿಗಾಗಿ ಹುಡುಕಾಟ ನಡೆಸಲಾಗುತ್ತಿದೆ. ಚಾಮರಾಜಪೇಟೆ, ಪೀಣ್ಯದ ಕೆಲವು ಭಾಗಗಳಲ್ಲಿ ಶಂಕಿತರು ಅಡಗಿಕೊಂಡಿರುವ ಮಾಹಿತಿ ಆಧಾರದ ಮೇಲೆ ಹುಡುಕಾಟ ನಡೆಸಲಾಗುತ್ತಿದೆ ಎನ್ನಲಾಗುತ್ತಿದೆ.

ಪಾಕಿಸ್ತಾನದಿಂದ ನಕಲಿ ಪಾಸ್‍ಪೋರ್ಟ್ ಮೂಲಕ ಕರ್ನಾಟಕಕ್ಕೆ 4 ಶಂಕಿತರು ಎಂಟ್ರಿಕೊಟ್ಟಿದ್ದಾರೆ ಎನ್ನಲಾಗಿದ್ದು, ಶನಿವಾರದಂದು ಇಬ್ಬರು ಕಾಶ್ಮೀರ ಮೂಲದ ಶಂಕಿತ ವ್ಯಕ್ತಿಗಳನ್ನು ಮಂಗಳೂರಿನಲ್ಲಿ ಬಂಧಿಸಲಾಗಿದೆ. ಇನ್ನೂ ಉಳಿದ ಇಬ್ಬರು ಬೆಂಗಳೂರಿನಲ್ಲಿ ಅಡಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಈ ಬಾರಿ ಕೇವಲ ಟಿಫ್‍ನ್ ಬಾಕ್ಸ್ ಬಾಂಬ್ ಅಲ್ಲ, ಆತ್ಮಾಹುತಿ ದಾಳಿಗಾಗಿ ಮಹಾ ಪ್ಲಾನ್ ಮಾಡಲಾಗುತ್ತಿದೆ ಎನ್ನಲಾಗಿದೆ. ಸದ್ಯ ಆತ್ಮಾಹುತಿ ದಾಳಿಕೋರರು ಬೆಂಗಳೂರಿನ ಪೀಣ್ಯದಲ್ಲಿ ಇರೋ ಬಗ್ಗೆ ಮಾಹಿತಿ ದೊರಕಿದ್ದು, ಪೀಣ್ಯದ ನೆಲಗದರನಹಳ್ಳಿಯ ಆಸುಪಾಸಿನಲ್ಲಿ ಪೊಲೀಸರು ತೀವ್ರ ಶೋಧ ನಡೆಸುತ್ತಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *