ತೆಲಂಗಾಣದಲ್ಲಿ ಇನ್ನು ಮುಂದೆ ಕಿಂಗ್‌ಫಿಷರ್, ಹೈನೆಕೆನ್ ಬಿಯರ್‌ ಸಿಗೋದು ಡೌಟ್‌ – ಕಾರಣವೇನು ಗೊತ್ತಾ?

Public TV
3 Min Read

– ಪ್ರತಿ ಕೇಸ್‌ ಮೇಲೆ 100 ರೂ. ನಷ್ಟ!

ಕಿಂಗ್‌ಫಿಶರ್ ಮತ್ತು ಹೈನೆಕೆನ್ ಬಿಯರ್‌ಗಳ (Beer) ತಯಾರಕರಾದ ಯುನೈಟೆಡ್ ಬ್ರೂವರೀಸ್ ಲಿಮಿಟೆಡ್ (UB), ತೆಲಂಗಾಣ (Telangana) ಬೆವರೇಜಸ್ ಕಾರ್ಪೊರೇಷನ್ ಲಿಮಿಟೆಡ್‌ಗೆ (TGBCL) ತನ್ನ ಬಿಯರ್ ಪೂರೈಕೆಯನ್ನು ಸ್ಥಗಿತಗೊಳಿಸಲು ನಿರ್ಧರಿಸಿದೆ.

ಈ ಬಿಯರ್‌ಗಳು ತನ್ನದೇ ಆದ ಮದ್ಯ ಪ್ರಿಯ ಗ್ರಾಹಕರನ್ನು ಹೊಂದಿದೆ. ಈಗ ಯುವ ಜನತೆ ಹಾಟ್‌ ಡ್ರಿಂಕ್ಸ್‌ಗಿಂತ ಬಿಯರ್‌ಗಳನ್ನು ಹೆಚ್ಚು ಇಷ್ಟಪಡುತ್ತಾರೆ. ಆದರಲ್ಲಿಯೂ ಕಿಂಗ್ ಫಿಶರ್ ಬಿಯರ್ ಕ್ರೇಜ್ ಬೇರೆಯದೇ ಇದೇ! ಇದೀಗ ಸ್ಥಗಿತಗೊಳಿಸಲು ನಿರ್ಧರಿಸಿರುವುದು ಬಿಯರ್‌ ಪ್ರಿಯರಿಗೆ ಶಾಕ್‌ ಆಗಿದೆ.

ಪೂರೈಕೆ ನಿಲ್ಲಿಸಲು ಕಾರಣವೇನು?
2 ವರ್ಷದಿಂದಲೂ ತೆಲಂಗಾಣದಲ್ಲಿ ಬಿಯರ್‌ ಮೂಲ ದರ ಹೆಚ್ಚಳ ಮಾಡುವಂತೆ ಸರ್ಕಾರಕ್ಕೆ ಕಂಪನಿ ಮನವಿ ಮಾಡಿತ್ತು. ಆದರೆ ತೆಲಂಗಾಣ ಸರ್ಕಾರ ಯಾವುದೇ ರೀತಿಯ ಕ್ರಮ ಕೈಗೊಂಡಿಲ್ಲ. ಇದರಿಂದಾಗಿ ಭಾರೀ ಪ್ರಮಾಣದ ನಷ್ಟವಾಗಿದೆ ಎಂದು ಕಂಪನಿ ಹೇಳಿಕೊಂಡಿದೆ. ಅಂದರೆ 2019-20ನೇ ಹಣಕಾಸು ವರ್ಷದಿಂದ ಯುನೈಟೆಡ್ ಬ್ರೇವರಿಸ್‌ ಬಿಯರ್‌ನ ಮೂಲ ಬೆಲೆಯನ್ನು TGBCL ಪರಿಷ್ಕರಿಸಿಲ್ಲ, ಇದು ರಾಜ್ಯದಲ್ಲಿ ಕಂಪನಿಗೆ ಆರ್ಥಿಕ ನಷ್ಟಕ್ಕೆ ಕಾರಣ ಎಂದು ಕಂಪನಿ ದೂರಿದೆ.

ಹೆಚ್ಚುತ್ತಿರುವ ಬಿಯರ್‌ ತಯಾರಿಕೆಗೆ ಕಚ್ಚಾ ವಸ್ತುಗಳ ಬೆಲೆಗಳಿಂದ ಉತ್ಪಾದನಾ ವೆಚ್ಚದಲ್ಲಿ 40% ಹೆಚ್ಚಳವನ್ನು ಸರಿದೂಗಿಸಲು 2024ರ ನವೆಂಬರ್‌ನಲ್ಲಿ ತೆಲಂಗಾಣ ಸರ್ಕಾರವನ್ನು ಕಂಪನಿ ಒತ್ತಾಯಿಸಿತ್ತು. ಅಂದರೆ ಪ್ರತಿ ಬಾಟಲಿಗೆ ಕನಿಷ್ಠ 10 ರೂ.ಗಳಷ್ಟು ಬಿಯರ್ ಬೆಲೆಯನ್ನು ಹೆಚ್ಚಿಸಬೇಕು ಎಂದು ಮನವಿ ಮಾಡಲಾಗಿತ್ತು. ಇನ್ನೂ ಡಿಸೆಂಬರ್‌ನಲ್ಲಿ, ಮುಖ್ಯಮಂತ್ರಿ ರೇವಂತ್ ರೆಡ್ಡಿ ಬಿಯರ್ ಕಂಪನಿಗಳ ಬೇಡಿಕೆಗಳನ್ನು ತಿರಸ್ಕರಿಸಿದ್ದರು.

2019 ರಿಂದ ಉತ್ಪಾದನಾ ವೆಚ್ಚವನ್ನು ಆಧರಿಸಿದ ದರವೇ ಇಂದಿಗೂ ಇದೆ. ಇದು ಪ್ರತಿ ಬಿಯರ್ ಕೇಸ್‌ ಮೇಲೆ ಅಂದಾಜು 100 ರೂ. ನಷ್ಟಕ್ಕೆ ಕಾರಣವಾಗುತ್ತಿದೆ ಎಂದು ಕಂಪನಿ ಅಳಲು ತೋಡಿಕೊಂಡಿದೆ.

TGBCL ಉಳಿಸಿಕೊಂಡ ಹಳೆಯ ಬಾಕಿ 3,900 ಕೋಟಿ!
TGBCL ಕಂಪನಿಗೆ 3,900 ಕೋಟಿ ರೂ. ಪಾವತಿಸಿಲ್ಲ. ಇದು ಕಂಪನಿಯ ನಷ್ಟಕ್ಕೆ ಕಾರಣವಾಗಿದೆ. ಬ್ರೇವರಿಸ್‌ ಅಸೋಸಿಯೇಷನ್ ಆಫ್ ಇಂಡಿಯಾ (ಬಿಎಐ) ಕೂಡ ಮದ್ಯ ತಯಾರಿಕಾ ವಲಯ ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಸರ್ಕಾರದ ಗಮನಕ್ಕೆ ತಂದಿದೆ. ಇಲ್ಲಿಯವರೆಗೂ ಸಮಸ್ಯೆಗೆ ಪರಿಹಾರ ಸಿಕ್ಕಿಲ್ಲ. ಆದರೂ ಆರ್ಥಿಕ ಒತ್ತಡ ಪರಿಸ್ಥಿತಿಯ ನಡುವೆಯೂ ಗ್ರಾಹಕರಿಗೆ ಯಾವುದೇ ತೊಂದರೆಯಾಗದಂತೆ ಮದ್ಯ ಪೂರೈಸಲಾಗಿದೆ ಎಂದು ಕಂಪನಿ ಹೇಳಿಕೊಂಡಿದೆ.

ಯುನೈಟೆಡ್ ಬ್ರೇವರಿಸ್‌ ಕಂಪನಿ ಹೇಳೋದೇನು?
ನಷ್ಟದಿಂದಾಗಿ ಬಿಯರ್‌ನ್ನು ಟಿಜಿಬಿಸಿಎಲ್‌ಗೆ ನಿರಂತರವಾಗಿ ಪೂರೈಸಲು ಸಾಧ್ಯವಿಲ್ಲ. ಇದಲ್ಲದೇ ತೆಲಂಗಾಣ ಸರ್ಕಾರಕ್ಕೆ ಸೇರಿದ ಸಾರ್ವಜನಿಕ ವಲಯದ ಕಂಪನಿಯಾದ TGBCL ರಾಜ್ಯದಲ್ಲಿ ಮದ್ಯದ ಸಗಟು ಮತ್ತು ಚಿಲ್ಲರೆ ಮಾರಾಟದ ಮೇಲೆ ಹಿಡಿತವಿದೆ. ಆದರೂ ನಮ್ಮ ಮನವಿಗೆ ಸ್ಪಂದಿಸಿ ಬೆಲೆ ಏರಿಸಿಲ್ಲ ಎಂದು ಕಂಪನಿ ಹೇಳಿದೆ. ಈ ಬಗ್ಗೆ TGBCL ಇನ್ನೂ ಯಾವುದೇ ಹೇಳಿಕೆಯನ್ನೂ ನೀಡಿಲ್ಲ.

ರಾಜ್ಯಕ್ಕೆ ಭಾರೀ ಆದಾಯ!
ಯುನೈಟೆಡ್ ಬ್ರೇವರಿಸ್‌ ಕಂಪನಿಯು ಮದ್ಯ ಪೂರೈಕೆ ಮತ್ತು ಮಾರಾಟದಿಂದ ರಾಜ್ಯ ಸರ್ಕಾರಕ್ಕೆ ವಾರ್ಷಿಕವಾಗಿ 24,500 ಕೋಟಿ ರೂ. ಆದಾಯ ಬರುತ್ತಿದೆ. ಆದರೆ, ಕಂಪನಿಗಳಿಗೆ ಲಾಭವಾಗುತ್ತಿಲ್ಲ. ಸರ್ಕಾರವು ಕೂಡಲೇ ಮದ್ಯದ ಬೆಲೆ ಏರಿಕೆಗೆ ಕ್ರಮಕೈಗೊಳ್ಳಬೇಕು ಎಂದು ಮದ್ಯ ತಯಾರಕರು ಒತ್ತಾಯಿಸಿದ್ದಾರೆ. ಇದಕ್ಕೆ ಸರ್ಕಾರ ಒಪ್ಪದಿದ್ದರೆ ಇನ್ಮುಂದೆ ತೆಲಂಗಾಣದಲ್ಲಿ ಕಿಂಗ್‌ ಫಿಶರ್‌ ಬಿಯರ್‌ ಪೂರೈಕೆ ಸಂಪೂರ್ಣವಾಗಿ ನಿಲ್ಲಲಿದೆ ಎಂದು ಎಚ್ಚರಿಕೆ ನೀಡಿದೆ.

302 ಲಕ್ಷಕ್ಕೂ ಹೆಚ್ಚು ಬಿಯರ್‌ಗಳ ಮಾರಾಟ
ತೆಲಂಗಾಣವು ಬಿಯರ್‌ಗೆ ಪ್ರಮುಖ ಮಾರುಕಟ್ಟೆಯಾಗಿ ಬೆಳದಿದೆ. ರಾಷ್ಟ್ರೀಯ ಸಾರ್ವಜನಿಕ ಹಣಕಾಸು ಮತ್ತು ನೀತಿ ಸಂಸ್ಥೆ (NIPFP) ಇತ್ತೀಚಿನ ಸಮೀಕ್ಷೆಯು ಬಿಯರ್ ಮಾರಾಟದಲ್ಲಿ ದಕ್ಷಿಣ ಭಾರತದಲ್ಲಿಯೇ ಮುಂಚೂಣಿಯಲ್ಲಿದೆ ಎಂದು ಉಲ್ಲೇಖಿಸಲಾಗಿದೆ. ಏಪ್ರಿಲ್ ಮತ್ತು ಅಕ್ಟೋಬರ್ 2024 ರ ನಡುವೆ, ತೆಲಂಗಾಣದಲ್ಲಿ 302 ಲಕ್ಷಕ್ಕೂ ಹೆಚ್ಚು ಬಿಯರ್‌ಗಳು ಮಾರಾಟವಾಗಿದೆ.

Share This Article