ಇಲ್ಲಿದೆ ಕರುಣಾನಿಧಿಯವರ ರಸಮಯ ಬದುಕಿನ ಚಿತ್ರಣ!

Public TV
2 Min Read

ಚೆನ್ನೈ: ವಿದ್ಯಾರ್ಥಿ ಚಳುವಳಿ, ಸಾಮಾಜಿಕ ಹೋರಾಟ, ಸಿನಿಮಾ ರಂಗದ ಪಯಣ, ರಾಜಕೀಯದ ಏಳು-ಬೀಳು, ಏರಿದ ಉನ್ನತ ಹುದ್ದೆ ಇದರಿಂದಾಚೆಗೆ ಕರುಣಾನಿಧಿಯವರ ವೈಯಕ್ತಿಕ ಜೀವನ ರಂಗು ಹೊಂದಿತ್ತು. ತಮಿಳುನಾಡಿನ ಆರಾಧ್ಯ ದೈವ, ದ್ರಾವಿಡ ಚಳವಳಿಯ ಕಡೆಯ ಕೊಂಡಿ ಕಲೈನರ್ ಕರುಣಾನಿಧಿಯವರ ರಸಮಯ ಬದುಕಿನ ಚಿತ್ರಣ ಇಲ್ಲಿದೆ.

60ರ ದಶಕ ಕೊನೆಯಲ್ಲಿ ತಮಿಳುನಾಡಿನ ನೂತನ ಮುಖ್ಯಮಂತ್ರಿಯಾಗಿದ್ದ ಮುಥುವೇಲು ಕರುಣಾನಿಧಿಯವರ ಬಳಿ, ಸರ್ಕಾರದಿಂದ ಅಧಿಕೃತವಾಗಿ ನೀವು ಬಾಡಿಗೆ ಪಡೆದು ನೆಲೆಸುತ್ತಿರುವ ಆಲಿವರ್ ರಸ್ತೆಯಲ್ಲಿರುವ ಆ ಕಟ್ಟಡದಲ್ಲಿ ನಿಮ್ಮೊಂದಿಗಿರುವವರು ಯಾರು ಎಂಬ ವಿಚಿತ್ರ ಪ್ರಶ್ನೆಯನ್ನು ಕೇಳಲಾಗಿತ್ತು. ಈ ಸಂದರ್ಭದಲ್ಲಿ ಪ್ರಶ್ನಿಸಿದವರ ಕಣ್ಣಲ್ಲಿ ಕಣ್ಣಿಟ್ಟು ಉತ್ತರಿಸಿದ್ದ ಕರುಣಾನಿಧಿ, ಅಲ್ಲಿ ನನ್ನ ಮಗಳು ಕನಿಮೋಳಿಯ ತಾಯಿ ವಾಸಿಸುತ್ತಿದ್ದಾರೆ ಎಂದಿದ್ದರು. ಇದಾದ ಬಳಿಕ ರಜತಿ ಅಮ್ಮಲ್‍ರನ್ನು ಅವರ ಅಧಿಕೃತ ಪತ್ನಿ ಎನ್ನಲಾಯಿತು. ಇದಾದ ಬಳಿಕ ಯಾರೊಬ್ಬರೂ ಕರುಣಾನಿಧಿಯ ಬಳಿ ಇಂತಹ ಪ್ರಶ್ನೆ ಕೇಳಲಿಲ್ಲ.

ಕಳೆದ ಕೆಲ ದಶಕಗಳಿಂದ ಕರುಣಾನಿಧಿಯವರ ದಿನಚರಿ ಕಣ್ಣಿಗೆ ಕಟ್ಟುವಂತಿತ್ತು. ಅವರು ಸಿಜೆಐ ಕಾಲೋನಿಯ ಐಷಾರಾಮಿ ಬಂಗಲೆಯಲ್ಲಿ ರಜತಿ ಅಮ್ಮಲ್ ಜೊತೆಗೆ ರಾತ್ರಿ ಕಳೆಯುತ್ತಿದ್ದರು. ಬೆಳಗಾಗುತ್ತಿದ್ದಂತೆಯೇ ತಮ್ಮ ಪತ್ನಿ ದಯಾಲ್ ಅಮ್ಮಲ್ ಇದ್ದ ಗೋಪಾಲ್‍ಪುರ್ ನಲ್ಲಿದ್ದ ಅಧಿಕೃತ ನಿವಾಸಕ್ಕೆ ತೆರಳುತ್ತಿದ್ದರು. ತಮಿಳುನಾಡು ರಾಜಕಾರಣದಲ್ಲಿ, ರಾಜಕೀಯ ಮುಖಂಡರಿಗೆ ಒಂದಕ್ಕಿಂತ ಹೆಚ್ಚು ಪತ್ನಿಯರಿರುವ ಪರಂಪರೆ ಇದೆ. ಇದನ್ನು ಅಲ್ಲಿನ ಜನರು “ಚಿನ್ನವೀಡು” ಎನ್ನುತ್ತಾರೆ. ಆದರೆ ಹಿಂದೂ ಆಕ್ಟ್ ಅನ್ವಯ ಕಾನೂನಾತ್ಮಕವಾಗಿ ಒಂದಕ್ಕಿಂತ ಹೆಚ್ಚು ವಿವಾಹವಾಗುವುದು ಅಪರಾಧವಾಗಿದೆ. ಆದರೆ ಕರುಣಾನಿಧಿಗೆ ಈ ವಿಚಾರವಾಗಿ ಯಾವತ್ತೂ ಸಮಸ್ಯೆ ಎದುರಾಗಿಲ್ಲ. ಅವರು ತಮ್ಮ ಜೀವನದಲ್ಲಿ ಮೂವರನ್ನು ಮದುವೆಯಾಗಿದ್ದಾರೆ. ಇವರಲ್ಲಿ ಇಬ್ಬರನ್ನು ಸಕಲ ಸಂಪ್ರದಾಯದಂತೆ ವಿವಾಹವಾಗಿದ್ದರೆ, ಒಬ್ಬರನ್ನು ಅನ್ಯ ಪರಂಪರೆಯನ್ವಯ ಮದುವೆಯಾಗಿದ್ದರು.

ಸಿನಿಮಾ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದ ಕರುಣಾನಿಧಿಗೆಗೆ ಪ್ರಖ್ಯಾತ ಗಾಯಕ ಜಯರಾಮನ್ ಪರಿಚಯವಾಗಿತ್ತು. ಕ್ರಮೇಣ ಇವರ ತಂಗಿ ಪದ್ಮಾವತಿ ಅಮ್ಮಾಯ್ಯರ್ ಪರಿಚಯವಾಗಿ ಪ್ರೀತಿಗೆ ತಿರುಗಿತು. 1945 ರಲ್ಲಿ ಕರುಣಾನಿಧಿ ಪದ್ಮಾವತಿಯನ್ನು ವಿವಾಹವಾದರು. ಇವರಿಗೆ ಹುಟ್ಟಿದ ಗಂಡು ಮಗನೇ ಎಂ.ಕೆ ಮುತ್ತು. ಪದ್ಮಾವತಿ ಕರುಣಾನಿಧಿ ಜೊತೆ ಹೆಚ್ಚು ದಿನ ಬದುಕಲೇ ಇಲ್ಲ. 1948ರಲ್ಲಿ ಕಾಯಿಲೆಯೊಂದಕ್ಕೆ ತುತ್ತಾಗಿ ಕೊನೆಯುಸಿರೆಳದ್ದರು. ಇದಾಗಿ ನಾಲ್ಕು ವರ್ಷಗಳ ಬಳಿಕ 1952ರಲ್ಲಿ ಕರುಣಾನಿಧಿ ಪೋಷಕರು ದಯಾಲು ಅಮ್ಮಲ್‍ರೊಂದಿಗೆ ಎರಡನೇ ಮದುವೆ ಮಾಡಿಸಿದ್ದರು. ಇವರಿಗೆ ಮೂವರು ಗಂಡು ಮಕ್ಕಳು ಹಾಗೂ ಓರ್ವ ಹೆಣ್ಮಗು ಸೇರಿ ನಾಲ್ವರು ಮಕ್ಕಳಾದರು. ಅವರೇ ಎಂ.ಕೆ. ಅಳಗಿರಿ, ಎಂ.ಕೆ ಸ್ಟಾಲಿನ್, ಎಂ.ಕೆ ತಮಿಳಾರಸು ಹಾಗೂ ಸೆಲ್ವಿ. ಇದೊಂದು ಪರಿಪೂರ್ಣ ಕುಟುಂಬವಾಗಿತ್ತು.

ಈ ವೇಳೆಗಾಗಲೇ ಕರುಣಾನಿಧಿ ರಾಜಕೀಯವೆಂಬ ಹಡಗಿನಲ್ಲಿ ಅಣ್ಣಾದೊರೈಯೊಂದಿಗೆ ತಮ್ಮ ಪ್ರಯಾಣ ಆರಂಭಿಸಿದ್ದರು. ನಂತರ ಚುನಾವಣೆ ಸಂದರ್ಭದಲ್ಲಿ ಎಐಎಡಿಎಂಕೆ ಚುನಾವಣಾ ಪಕ್ಷದ ಪ್ರಚಾರ ತಂಡದಲ್ಲಿ ರಜತಿ ಎಂಬಾಕೆಯನ್ನು ಕಂಡ ಕುರುಣಾನಿಧಿಗೆ ಮತ್ತೊಂದು ಪ್ರೇಮಾಂಕುರವಾಯ್ತು. ದಯಾಲು ಅಮ್ಮಲ್‍ರನ್ನೂ ಬಿಡಲು ಇಷ್ಟಪಡದ ಕರುಣಾನಿಧಿ ರಜತಿಯನ್ನು ಬಿಟ್ಟುಕೊಡಲು ಮನಸ್ಸಿರಲಿಲ್ಲ. 1966ರಲ್ಲಿ ಪಕ್ಷದ ಹಲವಾರು ಹಿರಿಯರ ಸಮ್ಮುಖದಲ್ಲಿ ರಜತ ನಾನು ಜೀವಮಾನವಿಡೀ ಜೊತೆಯಾಗಿರುತ್ತೇವೆಂದು ಪ್ರತಿಜ್ಞೆ ಮಾಡಿ, ಆಶೀರ್ವಾದ ಪಡೆದರು. ಇದಾಗಿ ಒಂದು ವರ್ಷದಲ್ಲಿ ಕನಿಮೋಳಿ ಜನಿಸಿದರು. ಕಾನೂನಾತ್ಮಕವಾಗಿ ದಯಾಲು ಅವರ ಹೆಂಡತಿಯಾಗಿದ್ದರೂ, ಜಗತ್ತಿನ ದೃಷ್ಟಿಯಲ್ಲಿ ಇಬ್ಬರೂ ಅವರ ಹೆಂಡತಿಯರು. ಇಬ್ಬರು ಹೆಂಡತಿಯರು ಏಕಕಾಲದಲ್ಲಿ ಕರುಣಾನಿಧಿ ಭಾಗವಹಿಸುತ್ತಿದ್ದ ಸಾರ್ವಜನಿಕ ಸಭೆಗಳಲ್ಲಿ ಕಾಣಸಿಗುತ್ತಿದ್ದರು. ಆದರೆ ಇವರ ಮಕ್ಕಳ ನಡುವೆ ಮಾತ್ರ ಹೊಂದಾಣಿಕೆ ಬರಲೇ ಇಲ್ಲ. ಇಷ್ಟೆಲ್ಲಾ ಏರಿಳಿತಗಳನ್ನು ಹೊಂದಿರುವ ವರ್ಣರಂಜಿತ ವ್ಯಕ್ತಿತ್ವ ಈಗ ಕೊನೆಯಾಗಿದೆ.

Share This Article
Leave a Comment

Leave a Reply

Your email address will not be published. Required fields are marked *