ಹೊಸ 10 ರೂ. ನೋಟಿನ ಚಿತ್ರ ರಿಲೀಸ್- ಇಲ್ಲಿದೆ ಅದರ ವೈಶಿಷ್ಟ್ಯತೆಗಳು

Public TV
2 Min Read

ನವದೆಹಲಿ: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ(ಆರ್‍ಬಿಐ) ಶೀಘ್ರದಲ್ಲೇ ಹೊಸ ವಿನ್ಯಾಸದ 10 ರೂ. ನೊಟುಗಳನ್ನ ಬಿಡುಗಡೆಗೊಳಿಸಿದೆ. ಸದ್ಯ ಹೊಸ ನೋಟುಗಳ ಚಿತ್ರವನ್ನ ಆರ್‍ಬಿಐ ಬಿಡುಗಡೆ ಮಾಡಿದೆ.

ಹೊಸ 10 ರೂ. ನೋಟಿನಲ್ಲಿ ಕೊನಾರ್ಕ್ ಸೂರ್ಯ ದೇವಾಲಯ(ಸನ್ ಟೆಂಪಲ್) ನ ಚಿತ್ರವಿದೆ. ಮಹಾತ್ಮಾ ಗಾಂಧಿ ಹೊಸ ಸರಣಿಯ ಈ ನೋಟುಗಳಲ್ಲಿ ಗವರ್ನರ್ ಊರ್ಜಿತ್ ಪಟೇಲ್ ಅವರ ಸಹಿ ಇದೆ.

ನೋಟಿನ ಬಣ್ಣ ಕಂದು(ಚಾಕ್ಲೆಟ್ ಬ್ರೌನ್) ಆಗಿದ್ದು, ಇತರೆ ಡಿಸೈನ್‍ಗಳಿವೆ. ನೋಟಿನ ಮುಂಭಾಗದ ಮಧ್ಯಭಾಗದಲ್ಲಿ ಮಹಾತ್ಮಾ ಗಾಂಧೀಜಿ ಚಿತ್ರವಿದೆ. ಸಣ್ಣ ಅಕ್ಷರದಲ್ಲಿ ಆರ್‍ಬಿಐ, ಭಾರತ್, ಇಂಡಿಯಾ ಹಾಗೂ 10ರ ಮುದ್ರಣವಿದೆ. ಮಹಾತ್ಮಾ ಗಾಂಧೀಜಿ ಚಿತ್ರದ ಬಲಭಾಗಕ್ಕೆ ಆರ್‍ಬಿಐ ಗವರ್ನರ್ ಸಹಿ, ಆರ್‍ಬಿಐ ಲಾಂಛನ ಹಾಗೂ ಅಶೋಕ ಸ್ತಂಭದ ಲಾಂಛನವಿದೆ. ಮಹಾತ್ಮಾ ಗಾಂಧಿ ಚಿತ್ರ ಹಾಗೂ 10 ರೂ. ವಾಟರ್‍ಮಾರ್ಕ್ ಇದೆ. ಮೇಲಿನ ಎಡಭಾಗ ಹಾಗೂ ಕೆಳಗಿನ ಬಲಭಾಗದಲ್ಲಿ ಸಣ್ಣ ಗ್ರಾತದಿಂದ ದೊಡ್ಡದ್ದಕ್ಕೆ ಸಾಗುವ ನಂಬರ್ ಪ್ಯಾನೆಲ್ ಇದೆ.

ನೋಟಿನ ಹಿಂಭಾಗದಲ್ಲಿ ನೋಟು ಮುದ್ರಣದ ವರ್ಷ, ಸ್ವಚ್ಛ ಭಾರತ್ ಲಾಂಛನ ಹಾಗೂ ಘೋಷವಾಕ್ಯ ಮತ್ತು ಭಾಷೆಗಳ ಪ್ಯಾನೆಲ್ ಇದೆ. ಸೂರ್ಯ ದೇವಾಲಯ ಚಿತ್ರ ಹಾಗೂ ದೇವನಾಗರಿಯಲ್ಲಿ ಸಂಖ್ಯೆ 10 ಮುದ್ರಿಸಲಾಗಿದೆ. ನೋಟಿನ ಅಳತೆ 63ಮಿಮಿ * 123ಮಿಮಿ ಇರಲಿದೆ.

ಈ ಹಿಂದಿನ ಸರಣಿಯಲ್ಲಿ ಬಿಡುಗಡೆಗೊಂಡಿರೋ ಹಳೇ 10 ರೂ. ನೋಟುಗಳು ಕೂಡ ಚಲಾವಣೆಯಲ್ಲಿ ಇರಲಿವೆ ಎಂದು ಆರ್‍ಬಿಐ ತಿಳಿಸಿದೆ.

2016ರ ನವೆಂಬರ್ 8 ರಂದು 1 ಸಾವಿರ ರೂ. ಹಾಗೂ 500 ರೂ. ನೋಟು ನಿಷೇಧದ ಬಳಿಕ ಆರ್ ಬಿಐ ಹೊಸ 500 ರೂ. 2 ಸಾವಿರ ಮುಖ ಬೆಲೆಯ ನೋಟುಗಳನ್ನು ಬಿಡುಗಡೆಗೊಳಿಸಿತ್ತು. ನೋಟ್ ಬ್ಯಾನ್ ಬಳಿಕ ಸೃಷ್ಟಿಯಾಗಿದ್ದ ಚಿಲ್ಲರೆ ಸಮಸ್ಯೆಯನ್ನು ಬಗೆ ಹರಿಸಲು ಆಗಸ್ಟ್ ತಿಂಗಳಿನಲ್ಲಿ ಆರ್ ಬಿಐ ಹೊಸ 200 ರೂ. ಹಾಗೂ 50 ರೂ. ಮುಖ ಬೆಲೆಯ ನೋಟುಗಳನ್ನು ಬಿಡುಗಡೆಗೊಳಿಸಿತ್ತು. 200 ರೂ. ಮುಖ ಬೆಲೆ ನೋಟಿನಲ್ಲಿ ಭಾರತದ ಸಂಸ್ಕೃತಿ ಪರಂಪರೆ ತಿಳಿಸುವ ಸಲುವಾಗಿ ಸಾಂಚಿ ಸೂಪ್ತವನ್ನು ಮುದ್ರಿಸಿದ್ದರೆ, 50 ರೂ. ನೋಟಿನಲ್ಲಿ ಹಂಪಿಯ ಕಲ್ಲಿನ ರಥದ ಚಿತ್ರವನ್ನು ಮುದ್ರಿಸಲಾಗಿತ್ತು.

ಈ ಹಿಂದೆ 2005ರಲ್ಲಿ 10 ರೂ. ಮುಖ ಬೆಲೆಯ ಹೊಸ ನೋಟುಗಳನ್ನು ಆರ್‍ ಬಿಐ ಬಿಡುಗಡೆ ಮಾಡಿತ್ತು.

Share This Article
Leave a Comment

Leave a Reply

Your email address will not be published. Required fields are marked *