ಕರುಣಾನಿಧಿ ಅವರ ಕಪ್ಪು ಕನ್ನಡಕ, ಹಳದಿ ಶಾಲಿನ ರಹಸ್ಯ

Public TV
2 Min Read

ಚೆನ್ನೈ: ದೇಶದ ಯಾವ ಮೂಲೆಯ ಯಾವ ವ್ಯಕ್ತಿಯ ಬಳಿ ಬಗ್ಗೆ ವಿಚಾರಿಸಿದರೆ ಅವರು ಕರುಣಾನಿಧಿಯವರನ್ನ ಗುರುತಿಸ್ತಾ ಇದ್ದದ್ದು ಗಾಢ ಕಪ್ಪು ಕನ್ನಡಕ ಹಾಗೂ ಹಳದಿ ಶಾಲು. ಒಂದು ಲೆಕ್ಕಾಚಾರದಲ್ಲಿ ಕನ್ನಡಕ ಮತ್ತು ಹಳದಿ ಶಾಲೇ ಕರುಣಾನಿಧಿಯವರ ಟ್ರೇಡ್ ಮಾರ್ಕ್ ಆಗಿಬಿಟ್ಟಿತ್ತು.

ಬಿಳಿ ಪಂಚೆ, ವೈಟ್ ಶರ್ಟ್, ಬ್ಲ್ಯಾಕ್ ಕನ್ನಡಕ, ಎಡಗೈಯಲ್ಲಿ ಬ್ಲ್ಯಾಕ್ ವಾಚ್ ಹಾಗೂ ಹಳದಿ ಬಣ್ಣದ ಶಾಲು ಹಾಕಿ ಗತ್ತಿನ ಹೆಜ್ಜೆ ಇಡುತ್ತ ವೇದಿಕೆಗೆ ಎಂಟ್ರಿ ಕೊಟ್ಟರು ಎಂದರೆ ಅವರು ಬೇರೆ ಯಾರೂ ಅಲ್ಲ. ಖಡಕ್ ಮಾತು, ನೇರ ನುಡಿ ದಿಟ್ಟ ಹೆಜ್ಜೆಗಳನ್ನ ಇಡುತ್ತ ಕಳೆದ ಅರ್ಧಶತಕಗಳಿಗೂ ಹೆಚ್ಚು ಕಾಲ ತಮಿಳು ಜನರ ಮನಸ್ಸನ್ನ ಗೆದ್ದು ಹೆಸರಾದ ಕಲೈನರ್.

ತಮಿಳುನಾಡಿನ ಯಾವ ಮಹಾನಾಯಕರನ್ನು ಅಥವಾ ರಾಜಕಾರಣಿಗಳನ್ನು ನೋಡಿದ್ದರೂ ಅವರದ್ದೇ ಆದ ಒಂದು ಟ್ರೇಡ್ ಮಾರ್ಕ್ ಇರುತ್ತೆ. ತಮಿಳಿನ ಮಹಾನಟ ಅನ್ನಿಸಿಕೊಂಡಿದ್ದ ಎಂಜಿಆರ್ ಕನ್ನಡಕ ಟೋಪಿ ಇಲ್ಲದೆ ಹೊರಗಡೆ ಕಾಣಿಸಿಕೊಳ್ಳುತ್ತಿರಲಿಲ್ಲ. ಜಯಲಲಿತಾ ಯಾವಾಗಲೂ ಹಸಿರು ಸೀರೆಯುಡುತ್ತಾ ಇದ್ರು, ಹೀಗೆ ಕರುಣಾನಿಧಿ ಕೂಡ ಕಪ್ಪು ಕನ್ನಡಕ ಮತ್ತು ಹೆಗಲ ಮೇಲೆ ಹಳದಿ ಶಾಲಿಲ್ಲದೆ ಹೊರಗಡೆ ಕಾಲಿಡ್ತಾನೇ ಇರಲಿಲ್ಲ. ಕರುಣಾನಿಧಿಯವರ ಬಹುತೇಕ ಫೋಟೋಗಳಲ್ಲಿ ಅವರ ಹೆಗಲ ಮೇಲೊಂದು ಹಳದಿ ಶಾಲು ಇದ್ದೇ ಇರುತ್ತಿತ್ತು.

1940ರ ದಶಕದಲ್ಲಿ ಜಾತಿ ತಾರತಮ್ಯದ ವಿರುದ್ಧ ದೊಡ್ಡ ಮಟ್ಟದಲ್ಲಿ ಹೋರಾಟ ನಡೆಸಿದ್ದ, ದ್ರಾವಿಡರ್ ಕಳಗಮ್ ಹೋರಾಟವನ್ನು ಹುಟ್ಟುಹಾಕಿದ್ದ, ಪೆರಿಯಾರ್ ಇವಿ ರಾಮಸಾಮಿ ವಿಭಿನ್ನ ರೀತಿಯ ಚಳುವಳಿಯೊಂದನ್ನು ಹುಟ್ಟುಹಾಕಿದ್ದರು. ಹಳದಿ ಬಣ್ಣವನ್ನು ಸಮಾನತೆಯ ಪ್ರತೀಕವೆಂದು ಘೋಷಿಸಿದ್ದರು. ಪೆರಿಯಾರ್ ತತ್ವ ಆದರ್ಶಗಳನ್ನು ಬಲವಾಗಿ ನಂಬಿದ್ದ ಮತ್ತು ಅವರ ಹಾದಿಯಲ್ಲೇ ಸಾಗಿದ ಕರುಣಾನಿಧಿ ಅದೇ ಬಣ್ಣದ ಶಾಲನ್ನು ಧರಿಸೋದಕ್ಕೆ ತೀರ್ಮಾನಿಸಿದ್ದರು.

https://twitter.com/ANI/status/1026985238155730944

ನಾಸ್ತಿಕರೆಂದೇ ಗುರುತಿಸಿಕೊಂಡಿದ್ದ ಕರುಣಾನಿಧಿ ಅವರಿಗೆ ಇಷ್ಟವಾದ ಬಣ್ಣ ಕಪ್ಪು. ಆದರೆ ರಾಜಕೀಯ ಬದುಕಿನಲ್ಲಿದ್ದ ಅವರು ಧರಿಸುತ್ತಿದ್ದದ್ದು, ಬಿಳಿ ಬಣ್ಣದ ಶರ್ಟ್ ಹಾಗೂ ಪಂಚೆ. ಇವರು ಕಪ್ಪು ಬಣ್ಣವನ್ನು ಹೆಚ್ಚಾಗಿ ಇಷ್ಟ ಪಡುತ್ತಿದ್ದರಿಂದಲೇ ಇವರು ಕಟ್ಟುವ ವಾಚಿನ ಡೇಲ್ ಕಪ್ಪು ಬಣ್ಣದಾಗಿರುತ್ತಿತ್ತು. 1967ರಲ್ಲಿ ಅಪಘಾತವೊಂದರಲ್ಲಿ ಕರುಣಾನಿಧಿಯವರ ಎಡಗಣ್ಣಿಗೆ ಬಲವಾದ ಪೆಟ್ಟು ಬಿದ್ದಿತ್ತು. 4 ವರ್ಷಗಳವರೆಗೆ ಆ ನೋವನ್ನೂ ನುಂಗಿಕೊಂಡ ಕರುಣಾನಿಧಿ ಕೊನೆಗೆ 1971 ರಲ್ಲಿ ಅಮೆರಿಕಾದ ಜಾನ್ ಹಾಪ್ಕಿನ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದರು. ಆಗ ಧರಿಸಿದ ಕನ್ನಡಕವೇ ಕರುಣಾನಿಧಿಯವರ ಟ್ರೇಡ್ ಮಾರ್ಕ್ ಆಗಿಬಿಟ್ಟಿತ್ತು. ಸಾರ್ವಜನಿಕ ಸ್ಥಳಗಳಲ್ಲಿ ಕಪ್ಪು ಕನ್ನಡಕ ಇಲ್ಲದೆ ಕರುಣಾನಿಧಿ ಕಾಣಿಸಿಕೊಳ್ಳುತ್ತಿರಲಿಲ್ಲ. ಆದರೆ ಕೆಲವರು ತಮಿಳುನಾಡಿನ ದೊಡ್ಡ ದೊಡ್ಡ ವ್ಯಕ್ತಿಗಳಿಗೆ ಹೀಗೆ ಗಾಢ ಕಪ್ಪುಬಣ್ಣದ ಕನ್ನಡಕ ಧರಿಸುವ ಶೋಕಿ ಇದೆ ಅಂತ ವ್ಯಂಗ್ಯವಾಡಿದ್ದರು.

ಹೀಗೆ ಕರುಣಾನಿಧಿಯ ರಾಜಕೀಯ ಬದುಕು ವರ್ಣರಂಜಿತ ಅನ್ನಿಸಿಕೊಂಡಿತ್ತು. ಆದ್ರೀಗ ಕರುಣಾನಿಧಿ ಅನ್ನೋ ರಾಜಕೀಯ ಧುರೀಣ ಇನ್ನೇನಿದ್ರೂ ಪ್ರತಿಮೆಯಷ್ಟೇ.

Share This Article
Leave a Comment

Leave a Reply

Your email address will not be published. Required fields are marked *