ಸುನೀಲ್ ನಾಗಪ್ಪ ಡಾರ್ಲಿಂಗ್ ಕೃಷ್ಣ ಆದ ಬಲು ರೋಚಕ ಕಥೆ ಇಲ್ಲಿದೆ!

Public TV
3 Min Read

ಸೋಶಿಯಲ್ ಮೀಡಿಯಾದಲ್ಲಿ ಎಲ್ಲಿ ನೋಡೊದ್ರು ಲವ್ ಮೊಕ್ಟೈಲ್ ಚಿತ್ರದ್ದೇ ಸದ್ದು ಸುದ್ದಿ. ಡಾರ್ಲಿಂಗ್ ಕೃಷ್ಣ ನಿರ್ದೇಶಿಸಿ ನಟಿಸಿರುವ ಈ ಚಿತ್ರ ಸಖತ್ ಕ್ರೇಜ್ ಕ್ರಿಯೇಟ್ ಮಾಡಿದೆ. ಚಿತ್ರದ ಪ್ರತಿ ತುಣುಕುಗಳಿಗೂ ಸಖತ್ ರೆಸ್ಪಾನ್ಸ್ ಸಿಕ್ಕಿದ್ದು ಇದ್ರಿಂದ ಡಾರ್ಲಿಂಗ್ ಕೃಷ್ಣ ಸಂತಸಗೊಂಡಿದ್ದಾರೆ. ಇಂದು ಚಿತ್ರಮಂದಿರಕ್ಕೆ ಲಗ್ಗೆ ಇಡುತ್ತಿರುವ ಈ ಚಿತ್ರ ಸೆನ್ಸೇಶನ್ ಕ್ರಿಯೇಟ್ ಮಾಡಿದೆ. ಇದೇ ಸಮಯದಲ್ಲಿ ಡಾರ್ಲಿಂಗ್ ಕೃಷ್ಣ ತಮ್ಮ ಜರ್ನಿಯ ಮೆಲುಕು ಹಾಕಿದ್ದಾರೆ.

ಮೂಲತಃ ಮೈಸೂರಿನವರಾದ ಕೃಷ್ಣ ಅವರ ನಿಜವಾದ ಹೆಸರು ಸುನೀಲ್ ನಾಗಪ್ಪ. ಎಂಬಿಎ ಓದಲು ಬೆಂಗಳೂರಿಗೆ ಬಂದವರು. ಸಿನಿಮಾ ಕಡೆ ಕಣ್ಣೆತ್ತಿ ನೋಡದವರು ಸಡನ್ ಆಗಿ ಸಿನಿಮಾ ಕಡೆ ವಾಲೋಕೆ ಕಾರಣ ಚಾಲೆಂಜಿಂಗ್ ಸ್ಟಾರ್ ದರ್ಶನ್. ಒಮ್ಮೆ ಮೈಸೂರಿನಲ್ಲಿ ದರ್ಶನ್ ಅವರನ್ನು ಫ್ಯಾನ್ಸ್ ಮುತ್ತಿಕೊಂಡಿದ್ದನ್ನು ಕಂಡು ಪುಳಕಿತರಾದ ಕೃಷ್ಣ ನಾನು ಹೀರೋ ಆಗ್ಬೇಕು, ಸ್ಟಾರ್ ಆಗಬೇಕು ಎಂದು ಅಂದು ಕನಸು ಕಂಡವರು.

ಅಂದಿನಿಂದಲೇ ಕನಸಿಗೆ ನೀರೆರೆಯುತ್ತಾ ಪೋಷಿಸುತ್ತಾ ಬಂದ ಕೃಷ್ಣ ಎಂಬಿಎ ಓದುತ್ತಲೇ ನಟನೆ, ಜಿಮ್, ಡಾನ್ಸ್ ತರಗತಿಗೆ ಸೇರಿಕೊಂಡು ನಟನಾಗಲು ಬೇಕಾದ ಎಲ್ಲಾ ಪಟ್ಟುಗಳನ್ನು ಕಲಿಯ ತೊಡಗಿದ್ರು. ಎಂಬಿಎ ನಂತರ ಸಿನಿಮಾ ಇಂಡಸ್ಟ್ರಿಗೆ ಎಂಟ್ರಿ ಕೊಡಲು ತೀರ್ಮಾನಿಸಿದ್ರು. ಆದ್ರೆ ಇಂಡಸ್ಟ್ರಿಯಲ್ಲಿ ಯಾರೂ ಪರಿಚಯವಿರಲಿಲ್ಲ. ಆಗ ಕೈ ಹಿಡಿದವರು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್.

ಒಮ್ಮೆ ಜಿಮ್ ನಲ್ಲಿ ವರ್ಕೌಟ್ ಮಡುವಾಗ ಪುನೀತ್ ರಾಜ್ ಕುಮಾರ್, ರಾಘವೇಂದ್ರ ರಾಜ್ ಕುಮಾರ್ ಪರಿಚಯವಾಗಿ ಅವರ ಬಳಿ ತಾವೂ ನಟನಾಗಬೇಕೆಂಬ ಆಸೆಯನ್ನು ಹೇಳಿಕೊಂಡಾಗ ಜಾಕಿಯಲ್ಲಿ ಅಸಿಸ್ಟೆಂಟ್ ಡೈರೆಕ್ಟರ್ ಆಗಿ ಕೆಲಸ ಮಾಡಲು ಅವಕಾಶ ಮಾಡಿಕೊಟ್ರು. ಅವರ ಆರ್ಶೀವಾದದಿಂದ ಜಾಕಿಯಲ್ಲಿ ಒಂದು ಪಾತ್ರವನ್ನು ಸಹ ಕೃಷ್ಣ ಮಾಡಿದರು. ಅದಾದ ನಂತರ ಪುನೀತ್ ರಾಜ್ ಕುಮಾರ್ ಅಭಿನಯದ ಹುಡುಗರು ಚಿತ್ರದಲ್ಲಿಯೂ ಅಭಿನಯಿಸಲು ಅವಕಾಶ ಸಿಕ್ತು. ಹೀಗೆ ಹೀರೋ ಆಗಬೇಕು ಎಂದು ಬಂದವರು ಆಗಿದ್ದು ಅಸಿಸ್ಟೆಂಟ್ ಡೈರೆಕ್ಟರ್. ಆದರೆ ಮನಸ್ಸಲ್ಲಿ ಹೀರೋ ಆಗಿ ತೆರೆ ಮೇಲೆ ಮಿಂಚಬೇಕು ಎಂಬ ತುಡಿತ ಮಾತ್ರ ಹಾಗೆ ಇತ್ತು.

ಹೀಗಿರಬೇಕಾದ್ರೆ ಆರ್ಕುಟ್ ನಲ್ಲಿ ಇವರ ಫೋಟೋ ನೋಡಿ ನಿರ್ದೇಶಕ ರವಿಗರಣಿ ಕೃಷ್ಣ ರುಕ್ಮಿಣಿ ಸೀರಿಯಲ್ ನಲ್ಲಿ ನಟಿಸಲು ಆಫರ್ ನೀಡುತ್ತಾರೆ. ಈ ಕೃಷ್ಣ ರುಕ್ಮಿಣಿ ಧಾರವಾಹಿಯೇ ಇಂದು ಸುನೀಲ್ ನಾಗಪ್ಪ ಅವರನ್ನು ಕೃಷ್ಣ ಎಂದು ಮಾಡಿದ್ದು. ಕೃಷ್ಣ ರುಕ್ಮಿಣಿ ಧಾರಾವಾಹಿ ಬಹಳ ದೊಡ್ಡ ಮಟ್ಟದಲ್ಲಿ ಜನಪ್ರಿಯತೆ ಗಳಿಸಿಕೊಂಡಿತು. ಕೃಷ್ಣ ಪಾತ್ರದಲ್ಲಿ ಸುನೀಲ್ ನಾಗಪ್ಪ ಕರ್ನಾಟಕದಲ್ಲಿ ಮನೆಮಾತಾದ್ರು. ಅದ್ರಲ್ಲೂ ಹುಡಿಗಿಯರ ಡ್ರೀಮ್ ಬಾಯ್ ಆಗಿ ಹೋಗಿದ್ರು ಕೃಷ್ಣ. ಅಷ್ಟರ ಮಟ್ಟಿಗೆ ಅಭಿಮಾನಿಗಳು ಹುಟ್ಟಿಕೊಂಡಿದ್ರು. ಇದೇ ಕಾರಣಕ್ಕೆ ತಮ್ಮ ಸುನೀಲ್ ನಾಗಪ್ಪ ಹೆಸರನ್ನು ಕೃಷ್ಣ ಎಂದು ಬದಲಾಯಿಸಿಕೊಂಡ್ರು.

ಸೀರಿಯಲ್ ನಲ್ಲಿ ಸ್ಟಾರ್ ಆಗಿ ಮಿಂಚುತ್ತಿದ್ರೂ ತುಡಿತ ಇದ್ದಿದ್ದು ಮಾತ್ರ ಸಿನಿಮಾ ಕಡೆಗೆ. ಆಗ ಸಿಕ್ಕ ಸಿನಿಮಾವೇ ಮದರಂಗಿ. ಅಷ್ಟೇನು ಯಶಸ್ಸು ನೀಡದಿದ್ದರೂ ಈ ಚಿತ್ರದ ‘ಡಾರ್ಲಿಂಗ್ ಡಾರ್ಲಿಂಗ್’ ಸಾಂಗ್ ಸೂಪರ್ ಹಿಟ್ ಆಯ್ತು. ಅಲ್ಲಿಂದ ಡಾರ್ಲಿಂಗ್ ಕೃಷ್ಣ ಎಂದೇ ಇಂಡಸ್ಟ್ರಿಯಲ್ಲಿ ಚಿರಪರಿಚಿತ. ಮದರಂಗಿ ಕೃಷ್ಣ ಚಿತ್ರದ ನಂತರ ಚಾರ್ಲಿ, ನಮ್ ದುನಿಯಾ ನಮ್ ಸ್ಟೈಲ್, ದೊಡ್ಮನೆ ಹುಡ್ಗ, ರುದ್ರತಾಂಡವ, ಹುಚ್ಚಾ-2 ಹೀಗೆ ಹಲವು ಸಿನಿಮಾಗಳಲ್ಲಿ ಡಾರ್ಲಿಂಗ್ ಕೃಷ್ಣ ಹೀರೋ ಆಗಿ ನಟಿಸಿದ್ರು. ಆದರೆ ಯಾವ ಚಿತ್ರವೂ ಯಶಸ್ಸು ನೀಡಲಿಲ್ಲ. ಸಾಲು ಸಾಲು ಸೋಲಿನಿಂದ ಡಾರ್ಲಿಂಗ್ ಕೃಷ್ಣ ಕಂಗೆಟ್ಟರು. ಅವಕಾಶಗಳು ಕಮ್ಮಿಯಾಯ್ತು. ಮೂರ್ನಾಲ್ಕು ವರ್ಷ ಒಂದೊಳ್ಳೆ ಕಥೆಗಾಗಿ ಕಾದು ಕುಳಿತರು. ಆದರೆ ಯಾವ ಕಥೆಯೂ ಇಷ್ಟವಾಗಲಿಲ್ಲ. ಕೈಚೆಲ್ಲಿ ಕೂತಾಗ ಬಂದ ಒಂದು ಆಲೋಚನೆಯೇ ಇಂದು ಲವ್ ಮೊಕ್ಟೈಲ್ ಚಿತ್ರವಾಗಿ ಹೊರಹೊಮ್ಮಿದೆ.

ಲವ್ ಮೊಕ್ಟೈಲ್ ಚಿತ್ರದ ಮೂಲಕ ನಿರ್ದೇಶಕನಾಗಿ, ನಿರ್ಮಾಪಕನಾಗಿ ಕೂಡ ಡಾರ್ಲಿಂಗ್ ಕೃಷ್ಣ ತಮ್ಮ ಪ್ರತಿಭೆಯನ್ನು ಸಾಬೀತು ಮಾಡಿದ್ದಾರೆ. 2008ರಿಂದ ಶುರುವಾದ ಡಾರ್ಲಿಂಗ್ ಕೃಷ್ಣ ಜರ್ನಿ ಇಂದು ನಿರ್ದೇಶಕನಾಗಿ ಗಾಂಧಿ ನಗರದಲ್ಲಿ ಬಂದು ನಿಲ್ಲುವಂತೆ ಮಾಡಿದೆ. ಡೊಡ್ಡ ಬ್ರೇಕ್ ಗಾಗಿ ಕಾಯುತ್ತಿರುವ ಡಾರ್ಲಿಂಗ್ ಕೃಷ್ಣಗೆ ಲವ್ ಮೊಕ್ಟೈಲ್ ಚಿತ್ರ ದೊಡ್ಡ ಯಶಸ್ಸನ್ನು ನೀಡಲಿ. ಚಿತ್ರರಂಗದಲ್ಲಿ ಉತ್ತುಂಗಕ್ಕೆ ಬೆಳೆಯಲಿ.

 

Share This Article
Leave a Comment

Leave a Reply

Your email address will not be published. Required fields are marked *