ಐದು ನಿಮಿಷ ಬೀಸಿದ ಬಿರುಗಾಳಿಗೆ ಉಡುಪಿ ಅಲ್ಲೋಲ ಕಲ್ಲೋಲ – ವಿಡಿಯೋ ನೋಡಿ

Public TV
1 Min Read

ಉಡುಪಿ: ಜಿಲ್ಲೆಯಲ್ಲಿ 5 ನಿಮಿಷ ಬೀಸಿದ ಭಾರೀ ಗಾಳಿ ಎಲ್ಲರನ್ನೂ ತಬ್ಬಿಬ್ಬು ಮಾಡಿದೆ. ಎರಡು ದಿನಗಳ ಹಿಂದೆ ಮಳೆಗೂ ಮುನ್ನ ಬಂದ ಬಿರುಗಾಳಿ ಜನ ಜೀವನವನ್ನು ಅಲ್ಲೋಲ ಕಲ್ಲೋಲ ಮಾಡಿರುವ ವಿಡಿಯೋ ನೋಡಿದರೆ ಒಂದು ಕ್ಷಣ ಎದೆ ಝಲ್ ಎನಿಸುತ್ತದೆ.

ಏಕಾಏಕಿ ಬೀಸಿದ ಭಾರೀ ಗಾಳಿಯ ಕೆಲ ದೃಶ್ಯಗಳು ಪಬ್ಲಿಕ್ ಟಿವಿಗೆ ಲಭ್ಯವಾಗಿದ್ದು, ಈ ದೃಶ್ಯಗಳು ನಡುಕ ಹುಟ್ಟಿಸುವಂತಿದೆ. ಉಡುಪಿಯ ಮಲ್ಪೆಯಲ್ಲಿ ಬೀಸಿದ ಭಾರೀ ಗಾಳಿಗೆ ಎದ್ದ ಧೂಳು ಇಡೀ ಪರಿಸರವನ್ನೇ ಕೆಂಪಾಗಿಸಿತ್ತು. ಬೋರ್ಡ್ ಬ್ಯಾನರ್ ಗಳು ಗಾಳಿಯ ರಭಸಕ್ಕೆ ಕಿತ್ತು ಹಾರಿಹೋಗಿದೆ. ಇನ್ನೊಂದೆಡೆ ಭಾರಿ ಬಿರುಗಾಳಿ ತೆಂಗಿನ ಮರಗಳ ಆಕಾರವೇ ಬದಲಿಸಿದಂತೆ ಕಾಣುತಿತ್ತು.

ಮಣಿಪಾಲದಲ್ಲಿ ಬೀಸಿದ ಭಾರೀ ಗಾಳಿಗೆ ದ್ವಿಚಕ್ರ ಸವಾರರು, ರಸ್ತೆಯಲ್ಲಿ ನಡೆದುಕೊಂಡು ಹೋಗುವವರು ತಬ್ಬಿಬ್ಬಾಗುವಂತಹ ಪರಿಸ್ಥಿತಿ ಎದುರಾಗಿತ್ತು. ಅಲ್ಲದೆ ಅಂಗಡಿಗಳಿಗೆ ಅಳವಡಿಸಿರುವ ಕಬ್ಬಿಣದ ಶೀಟ್‍ಗಳು, ಅಂಗಡಿಯ ಬೋರ್ಡ್ ಗಳು ಹಾರಿ ಹೋಗಿ ಆಟೋ ಹಾಗೂ ಇತರೇ ವಾಹನಗಳ ಮೇಲೆ ಬಿದ್ದ ಶಬ್ದಕ್ಕೆ ಜನರು ಭೂಕಂಪದ ಆಗುತ್ತಿದೆಯೋ ಏನೋ ಎನ್ನುವ ರೀತಿ ಪರಿಸ್ಥಿತಿ ನಿರ್ಮಾಣವಾಗಿತ್ತು. ಈ ಭಯಾನಕ ದೃಶ್ಯವನ್ನು ಕಾರಿನ ಚಾಲಕರೊಬ್ಬರು ಮೊಬೈಲ್‍ನಲ್ಲಿ ಚಿತ್ರೀಕರಿಸಿದ್ದು ಆ ವಿಡಿಯೋ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

ಅದರಲ್ಲೂ ಉಡುಪಿಯ ಉದ್ಯಾವರ ಸಮೀಪದ ಪಿತ್ರೋಡಿಯಲ್ಲಿ ಸಂಜೆ ಹೊತ್ತು ಆಟವಾಡುತ್ತಿರುವ ವೇಳೆ ಬೀಸಿದ ಗಾಳಿಯ ರಭಸಕ್ಕೆ ಮಕ್ಕಳು ಕಂಗಾಲಾಗಿ ಓಡುತ್ತಿದ್ದ ದೃಶ್ಯ ವಿಡಿಯೋದಲ್ಲಿ ಸೆರೆಯಾಗಿದೆ. ಗಾಳಿಯ ಅಬ್ಬರ ಎಷ್ಟಿತ್ತೆಂದರೆ ವಾಲಿ ಬಾಲ್ ನೆಟ್ ಹರಿದು ಹಾರಿ ಹೋಗಿದೆ. ಮೈದಾನದಲ್ಲಿದ್ದ ಮಕ್ಕಳಿಗೆ ಏನಾಗುತ್ತಿದೆ ಅಂತ ಗೊತ್ತಾಗದೇ ಬಿರುಗಾಳಿಗೆ ಎದ್ನೋ ಬಿದ್ನೋ ಅಂತ ಓಡಿ ಹೋಗಿದ್ದಾರೆ.

ಇತ್ತೀಚಿನ ವರ್ಷಗಳಲ್ಲಿ ಇಂತಹ ಗಾಳಿ ಬಂದಿರುವ ಬಗ್ಗೆ ದಾಖಲಾಗಿರಲಿಲ್ಲ. ಸುಮಾರು 10 ನಿಮಿಷಗಳ ಕಾಲ ಮಳೆ ಸುರಿದಿ ಬಳಿಕ ಗಾಳಿಯ ವೇಗ ಹತೋಟಿಗೆ ಬಂದಿದೆ. ಕೆಲ ನಿಮಿಷಗಳಷ್ಟೇ ಬೀಸಿದ ಭಾರೀ ಗಾಳಿಗೆ ಜನರು ತತ್ತರಿಸಿ ಹೋಗಿದ್ದು, ಜಿಲ್ಲೆಯಲ್ಲಿ ಅಪಾರ ಪ್ರಮಾಣದ ಆಸ್ತಿ ನಷ್ಟವಾಗಿದೆ.

Share This Article
Leave a Comment

Leave a Reply

Your email address will not be published. Required fields are marked *