ದೀಪಾವಳಿ ಪ್ರಯುಕ್ತ ಊರಿಗೆ ಹೊರಟ ಪ್ರಯಾಣಿಕರಿಂದ ಬಸ್, ರೈಲು ನಿಲ್ದಾಣ ಜಾಮ್

Public TV
1 Min Read

ಬೆಂಗಳೂರು: ದೇಶಾದ್ಯಂತ ಸಂಭ್ರಮದಿಂದ ದೀಪಾವಳಿ ಹಬ್ಬವನ್ನು ಆಚರಿಸಲಾಗುತ್ತಿದೆ. ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಮಂಗಳವಾರ ಸಿಲಿಕಾನ್ ಸಿಟಿಯಿಂದ ಜನರು ಊರಿನ ಕಡೆ ಹೊರಟ ಪರಿಣಾಮ ನಗರದ ಬಸ್ ನಿಲ್ದಾಣ ಮತ್ತು ರೈಲು ನಿಲ್ದಾಣಗಳಲ್ಲಿ ಪ್ರಯಾಣಿಕರು ಹೆಚ್ಚಿನ ಸಂಖ್ಯೆಯಲ್ಲಿ ತುಂಬಿದ್ದರು.

ಪ್ರಯಾಣಿಕರು ಹಾಗೂ ಬಸ್ ಗಳಿಂದ ನಗರದಲ್ಲಿ ಭಾರೀ ಟ್ರಾಫಿಕ್ ಜಾಮ್ ಉಂಟಾಗಿತ್ತು. ಹೀಗಾಗಿ ಜನರು ನಿಲ್ದಾಣ ತಲುಪಲು ಹರಸಾಹಸ ಪಡಬೇಕಾಯಿತು. ಕಳೆದ ಕೆಲ ದಿನಗಳಿಂದ ಮಳೆ ಸುರಿಯುತ್ತಿದ್ದು, ಮಂಗಳವಾರ ರಾತ್ರಿ ಮಳೆ ಇಲ್ಲದಿದ್ದರಿಂದ ಪ್ರಯಾಣಿಕರು ನೆಮ್ಮದಿಯ ನಿಟ್ಟಿಸುರು ಬಿಟ್ಟಿದ್ದರು. ಆದ್ರೆ ಸಂಜೆಯಿಂದಲೇ ಬಸ್ ನಿಲ್ದಾಣಕ್ಕೆ ಪ್ರಯಾಣಿಕರು ಮುಗಿಬೀಳೂತ್ತಿದ್ದು, ಇದರಿಂದ ಸಂಚಾರ ದಟ್ಟಣೆ ಅಧಿಕವಾಗಿತ್ತು.

ಮೈಸೂರು ರಸ್ತೆಯ ಬಾಪೂಜಿನಗರ, ಯಶವಂತಪುರ, ಪೀಣ್ಯ, ಹೊಸೂರು ರಸ್ತೆ ಹಾಗೂ ಶಾಂತಿನಗರ ಆನಂದರಾವ್ ಸರ್ಕಲ್ ಸೇರಿದಂತೆ ಮೆಜೆಸ್ಟಿಕ್ ಸುತ್ತಮುತ್ತ ವಾಹನಗಳು ಸಾಲುಗಟ್ಟಿ ನಿಂತಿದ್ದರಿಂದ ಟ್ರಾಫಿಕ್ ಜಾಮ್ ಉಂಟಾಗಿತ್ತು.

ಹಬ್ಬದ ಹಿನ್ನೆಲೆಯಲ್ಲಿ ಸುಮಾರು 1500 ಹೆಚ್ಚುವರಿ ಬಸ್ ವ್ಯವಸ್ಥೆಯನ್ನು ಕೆಎಸ್‍ಆರ್‍ಟಿಸಿ ಮಾಡಿದೆ. ಸರ್ಕಾರಿ ಬಸ್ ಮಾತ್ರವಲ್ಲದೇ ಖಾಸಗಿ ಬಸ್ ಗಳು ಕೂಡ ಅಧಿಕವಾಗಿದ್ದವು. ಈ ಹಿನ್ನೆಲೆಯಲ್ಲಿ ವಾಹನ ಸಂಚಾರ ದಟ್ಟಣೆ ಮತ್ತಷ್ಟು ಹೆಚ್ಚಲು ಕಾರಣವಾಗಿತ್ತು. ಕೆ.ಜಿ ರಸ್ತೆ, ಯಶವಂತಪುರ, ಆನಂದ ರಾವ್ ಸರ್ಕಲ್, ಮೌರ್ಯ ವೃತ್ತ, ಶಾಂತಿ ನಗರ, ವಿಜಯನಗರ ಮೊದಲಾದ ಕಡೆಗಳಲ್ಲಿ ಖಾಸಗಿ ಬಸ್ ಏಜೆನ್ಸಿಗಳ ಕಚೇರಿ ಬಳಿ ಪ್ರಯಾಣಿಕರ ದಂಡೇ ನೆರೆದಿತ್ತು.

ಖಾಸಗಿ ಬಸ್‍ಗಳು ರಸ್ತೆಯಲ್ಲಿಯೇ ನಿಂತಿದ್ದರಿಂದ ಪಾದಾಚಾರಿಗಳ ಓಡಾಟಕ್ಕೂ ತೊಂದರೆಯಾಗಿತ್ತು. ಅಲ್ಲದೇ ಇದರಿಂದ ವಾಹನ ಸವಾರರು ಕೂಡ ಪರದಾಡಬೇಕಾಯಿತು. ಒಟ್ಟಿನಲ್ಲಿ ಸಂಚಾರ ದಟ್ಟಣೆಯನ್ನು ನಿಯಂತ್ರಿಸಲು ಟ್ರಾಫಿಕ್ ಪೊಲೀಸರು ಹರಸಾಹಸಪಡಬೇಕಾಯಿತು.

ಇನ್ನು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ, ಯಶವಂತಪುರ ರೈಲು ನಿಲ್ದಾಣ, ಬೆಂಗಳೂರು ದಂಡು ನಿಲ್ದಾಣ, ಕೆಆರ್ ಪುರ ರೈಲು ನಿಲ್ದಾಣ ಸೇರಿದಂತೆ ಸಿಲಿಕಾನ್ ಸಿಟಿಯಲ್ಲಿರೋ ಎಲ್ಲಾ ರೈಲು ನಿಲ್ದಾಣಗಳಲ್ಲಿ ಪ್ರಯಾಣಿಕರು ಕಿಕ್ಕಿರಿದು ತುಂಬಿದ್ದರು.

Share This Article
Leave a Comment

Leave a Reply

Your email address will not be published. Required fields are marked *