ಅಯೋಧ್ಯೆಗೆ ವೀಕೆಂಡ್‌ನಲ್ಲಿ ಭಕ್ತಸಾಗರ- VIP ಗೇಟ್ ತೆರೆದ ಆಡಳಿತ ಮಂಡಳಿ

Public TV
2 Min Read

– 18 ದಿನದಲ್ಲಿ 40 ಲಕ್ಷಕ್ಕೂ ಹೆಚ್ಚು ಮಂದಿ ದರ್ಶನ

ಅಯೋಧ್ಯೆ: ರಾಮಮಂದಿರದಲ್ಲಿ ಬಾಲಕರಾಮನ ಪ್ರಾಣಪ್ರತಿಷ್ಠಾಪನೆ ಆದಾಗಿಂದ ಪ್ರತಿನಿತ್ಯ ಸಾವಿರಾರು ಮಂದಿ ಭಕ್ತರು ದೇವರ ದರ್ಶನ ಪಡೆದು ಪುನೀತರಾಗುತ್ತಿದ್ದಾರೆ. ಅಂತೆಯೇ ಇಂದು ಕೂಡ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿರುವ ಭಕ್ತರು ಬಾಲಕರಾಮನ ದರ್ಶನ ಪಡೆಯುತ್ತಿದ್ದಾರೆ.

ಹೌದು. ವೀಕೆಂಡ್‌ ಹಾಗೂ ಅಮಾವಾಸ್ಯೆ ಹಿನ್ನೆಲೆಯಲ್ಲಿ ಇಂದು ಅಯೋಧ್ಯೆಗೆ (Ayodhya Ram Mandir) ಭಕ್ತ ಸಾಗರವೇ ಹರಿದುಬಂದಿದೆ. ಇಂದು ಮಧ್ಯಾಹ್ನ 1 ಗಂಟೆ ಸುಮಾರಿಗೆ ಲಕ್ಷಕ್ಕೂ ಹೆಚ್ಚು ಮಂದಿ ದರ್ಶನ ಪಡೆದಿದ್ದಾರೆ. ಭಕ್ತರು ಪ್ರಯಾಗ್ ರಾಜ್ ನಲ್ಲಿ ಪುಣ್ಯಸ್ನಾನ ಮಾಡಿ ರಾಮ ಮಂದಿರದತ್ತ ದೌಡಾಯಿಸುತ್ತಿರುವ ವೀಡಿಯೋ ಇದೀಗ ವೈರಲ್‌ ಆಗುತ್ತಿದೆ.

ಭಕ್ತರ ಸಂಖ್ಯೆ ಹೆಚ್ಚಿದ ಹಿನ್ನೆಲೆಯಲ್ಲಿ ಆಡಳಿತ ಮಂಡಳಿಯು ವಿಐಪಿ ಗೇಟ್ ಕೂಡ ತೆರೆದಿದೆ. ಒಂದೆಡೆ ಭಕ್ತರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡುತ್ತಿದ್ದಾರೆ. ಇನ್ನೊಂದೆಡೆ ಭಕ್ತರಿಗೆ ಲಾಕರ್ ವ್ಯವಸ್ಥೆ ಸಿಗದಿದ್ದರಿಂದ ಮೊಬೈಲ್ ಫೋನ್, ಲಗೇಜ್ ಜೊತೆಯೇ ಮಂದಿರದೊಳಗೆ ನುಗ್ಗುತ್ತಿದ್ದಾರೆ. ಇದನ್ನೂ ಓದಿ: ರಾಮಮಂದಿರ ನಿರ್ಮಾಣಕ್ಕೆ ಶ್ರಮಿಸಿದ ಪ್ರಧಾನಿ ಮೋದಿಗೆ HDD ಧನ್ಯವಾದ

ಜನವರಿ 22ರಂದು ಅಯೋಧ್ಯೆಯಲ್ಲಿ ನೂತನವಾಗಿ ನಿರ್ಮಾಣವಾಗಿರುವ ರಾಮಮಂದಿರದಲ್ಲಿ ಬಾಲಕರಾಮನ ಪ್ರಾಣಪ್ರತಿಷ್ಠೆ ನಡೆದಿದೆ. ಈ ಕಾರ್ಯಕ್ರಮಕ್ಕೆ ರಾಜಕೀಯ ಗಣ್ಯರು, ಸಿನಿಮಾ ತಾರೆಗಳು ಹೀಗೆ ಸಾಕಷ್ಟು ಗಣ್ಯ ವ್ಯಕ್ತಿಗಳು ಸಾಕ್ಷಿಯಾಗಿದ್ದರು. ಇದಾದ ಬಳಿಕ ಮುಸ್ಲಿಮರು ಸೇರಿದಂತೆ ಸಾವಿರಾರು ಮಂದಿ ರಾಮಮಂದಿರಕ್ಕೆ ಆಗಮಿಸಿದ್ದಾರೆ.

ಈ ಹಿಂದೆ ರಾಷ್ಟ್ರೀಯ ಸ್ವಯಂ ಸೇವಕ ಸಂಘ (RSS) ಬೆಂಬಲಿತ ಮುಸ್ಲಿಂ ಸಂಘಟನೆಯಾದ ಮುಸ್ಲಿಂ ರಾಷ್ಟ್ರೀಯ ಮಂಚ್ (MRM) ನೇತೃತ್ವದ ಗುಂಪು ಜನವರಿ 25 ರಂದು ಲಕ್ನೋದಿಂದ ಕಾಲ್ನಡಿಗೆಯ ಮೂಲಕ ರಾಮಮಂದಿರಕ್ಕೆ ಆಗಮಿಸಿತ್ತು. 350 ಮಂದಿ ಮುಸ್ಲಿಂ ಭಕ್ತರ ಗುಂಪು ‘ಜೈ ಶ್ರೀ ರಾಮ್’ ಎಂದು ಘೋಷಣೆ ಕೂಗುತ್ತಾ ಕೊರೆಯುವ ಚಳಿಯ ನಡುವೆಯೇ ಸುಮಾರು 150 ಕಿ.ಮೀ ಕಾಲ್ನಡಿಗೆಯಲ್ಲಿ ಸಾಗಿ ಅಯೋಧ್ಯೆಗೆ ತಲುಪಿತ್ತು. 6 ದಿನಗಳಲ್ಲಿ ಪ್ರತಿ 25 ಕಿ.ಮೀ ಬಳಿಕ ರಾತ್ರಿ ವೇಳೆ ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದರು. ಮರುದಿನ ಬೆಳಗ್ಗೆ ತಮ್ಮ ಪ್ರಯಾಣವನ್ನು ಮುಂದುವರಿಸುತ್ತಿದ್ದರು ಎಂದು MRM ನ ಮಾಧ್ಯಮ ಉಸ್ತುವಾರಿ ಶಾಹಿದ್ ಸಯೀದ್ ಹೇಳಿದ್ದರು.

Share This Article