ವಿಡಿಯೋ: ರಾತ್ರಿ ಸುರಿದ ಮಳೆಗೆ ಬೆಂಗ್ಳೂರಿನ ‘ಚಿಕ್ಕಪೇಟೆ’ ತತ್ತರ

Public TV
2 Min Read

ಬೆಂಗಳೂರು: ಭಾನುವಾರ ರಾತ್ರಿ ಸುರಿದ ಭಾರೀ ಮಳೆಗೆ ಸಿಲಿಕಾನ್ ಸಿಟಿಯಲ್ಲಿರುವ ಕಮರ್ಷಿಯಲ್ ಏರಿಯಾ ಚಿಕ್ಕಪೇಟೆ ತತ್ತರವಾಗಿದೆ.

ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಪ್ರತಿನಿಧಿಸುವ ಈ ಕ್ಷೇತ್ರದಲ್ಲಿ ನಿನ್ನೆ ಸುರಿದ ಮಳೆಗೆ ರಸ್ತೆಗಳು ಕೆರೆಯಂತಾಗಿತ್ತು. ಈ ಬಗ್ಗೆ ಪಬ್ಲಿಕ್ ಟಿವಿ ಇಂದು ವಿಸ್ತೃತವಾಗಿ ವರದಿ ಮಾಡಿತ್ತು. ಈ ಬೆನ್ನಲ್ಲೇ ಪಬ್ಲಿಕ್ ಟಿವಿಗೆ ಪ್ರತಿಕ್ರಿಯಿಸಿದ ಜಂಟಿ ಆಯುಕ್ತರು ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಒಂದು ಹಬ್ಬ, ಮಳೆ ಬಂದರೂ ಸಾಕು ಬಿಬಿಎಂಪಿಯ ಅಸಲಿಯತ್ತು ಬೆಳಕಿಗೆ ಬರುತ್ತಿದೆ. ಇದಕ್ಕೆ ಚಿಕ್ಕಪೇಟೆ ಪ್ರತ್ಯಕ್ಷ ಸಾಕ್ಷಿಯಾಗಿದೆ. ಇಡೀ ಬೆಂಗಳೂರಿನ ಕಸವನ್ನು ಹೊರಗೆ ಹಾಕುತ್ತೇವೆ ಎಂದು ಕೋಟಿ ಕೋಟಿ ಹಣ ಪಡೆಯುತ್ತಾರೆ. ರಸ್ತೆ ಮಾಡುವುದಾಗಿಯೂ ಹಣ ಮಾಡುತ್ತಾರೆ. ಆದರೆ ಅದರ ಅಸಲಿಯತ್ತು ಚಿಕ್ಕಪೇಟೆಯಲ್ಲಿ ಬಯಲಾಗಿದೆ.

ಮೊದಲೇ ಜನಜಂಗುಳಿಯಿಂದ ತುಂಬಿರುವ ಚಿಕ್ಕಪೇಟೆಯಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ಇತರ ಮಾರಾಟದ ಜೊತೆಗೆ ಬಾಳೆ ಗಿಡಗಳನ್ನು ಕೂಡ ಮಾರಾಟ ಮಾಡಲಾಗುತ್ತಿತ್ತು. ಆದರೆ ಏಕಾಏಕಿ ಸುರಿದ ಮಳೆಯಿಂದಾಗಿ ಮಾರಾಟಗಾರರು ಬಾಳೆಗಿಡಗಳನ್ನು ಅಲ್ಲೇ ಬಿಟ್ಟು ಹೋಗಿದ್ದರಿಂದ ರಸ್ತೆ ಕೊಳೆಚೆ ಕೆರೆಯಂತಾಗಿತ್ತು.

ಚಿಕ್ಕಪೇಟೆ ಮೆಟ್ರೋ ಸ್ಟೇಷನ್ ಸಮೀಪದಲ್ಲಿಯೇ ಇರುವ ಮುಖ್ಯರಸ್ತೆಯಲ್ಲಿ ನಿನ್ನೆ ಸುರಿದ ಮಳೆಗೆ ಬೈಕ್ ಗಳು ಮುಳುಗಿ ಹೋಗಿದ್ದವು. ಹಬ್ಬದ ಪ್ರಯುಕ್ತ ಮಾರುವಂತಹ ಬಾಳೆ ಗಿಡ, ಎಲೆಗಳನ್ನು ವ್ಯಾಪಾರಸ್ಥರು ಅಲ್ಲಲ್ಲಿಯೇ ಬಿಟ್ಟು ಹೋಗಿದ್ದಾರೆ. ಇವೆಲ್ಲ ರಸ್ತೆಗೆ ಬಿದ್ದಿದ್ದರಿಂದ ಇಡೀ ರಸ್ತೆ ಗಲೀಜಾಗಿದೆ. ಇದು 30 ವರ್ಷಗಳ ಸಮಸ್ಯೆಯಾಗಿದೆ. ಯಾಕೆಂದರೆ ಇಲ್ಲಿಯ ಜನ ಮತ ಹಾಕಲ್ಲ ಅನ್ನೋ ಕಾರಣಕ್ಕೆ ಜನಪ್ರತಿನಿಧಿಗಳು ಈ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ ಎಂದು ಸ್ಥಳೀಯರು ಹೇಳುತ್ತಿದ್ದಾರೆ.

ಶಾಸಕರು, ಅಧಿಕಾರಿಗಳು ಅಲ್ಲದೆ ಇಲ್ಲಿ ಘನತ್ಯಾಜ್ಯ ವಿಲೇವಾರಿಗೆ ಅಂತಾನೇ ವಿಶೇಷ ಆಯುಕ್ತರು ಕೂಡ ಇದ್ದಾರೆ. ಆದರೆ ಇವರ್ಯಾರು ಇಲ್ಲಿನ ಸಮಸ್ಯೆ ಬಗ್ಗೆ ತಲೆಕೆಡಿಸಿಕೊಳ್ಳುತ್ತಿಲ್ಲ ಎಂದು ದೂರಿದ್ದಾರೆ.

ಈ ಬಗ್ಗೆ ಸ್ಥಳೀಯ ವ್ಯಕ್ತಿಯೊಬ್ಬರು ಮಾತನಾಡಿ, ಪ್ರತಿ ಬಾರಿಯೂ ಮಳೆ ಬಂದಾಗ ಪೋತಿಸ್ ಮಾಲ್ ನಿಂದ ನೀರು ಈ ಕಡೆಯಿಂದಾಗಿ ಬರುತ್ತಿದೆ. ಇಲ್ಲಿ ಚರಂಡಿಗಳನ್ನು ಕ್ಲೀನ್ ಮಾಡುತ್ತಿಲ್ಲ. 6 ತಿಂಗಳಿಗೊಮ್ಮೆ ಕ್ಲೀನ್ ಮಾಡಲೆಂದು ಕಲ್ಲು ಎತ್ತುತ್ತಾರೆ ಮತ್ತೆ ಹಾಕ್ತಾರೆ. ಇದಾದ ಒಂದು ತಿಂಗಳಲ್ಲಿಯೇ ಮತ್ತೆ ನೀರು ನಿಲ್ಲುತ್ತದೆ. ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದ ಈ ರೀತಿಯಾಗುತ್ತಿದೆ. ಏನೇನೋ ಮಾಡಿ ಹೋಗುತ್ತಾರೆ ಹೊರತು ಯಾವುದೇ ಕ್ರಮ ಕೈಗೊಳ್ಳುವುದಿಲ್ಲ ಎಂದು ದೂರಿದ್ದಾರೆ.

ಮತ್ತೊಬ್ಬ ಯುವಕ ಮಾತನಾಡಿ, ಇಲ್ಲಿನ ಶಾಸಕ ದಿನೇಶ್ ಗುಂಡೂರಾವ್. ಇದು ಒಂದು ಕಮರ್ಷಿಯಲ್ ಏರಿಯಾ. ಇಡೀ ಕರ್ನಾಟಕದಲ್ಲಿಯೇ ಹೆಚ್ಚಿನ ತರಿಗೆ ಬರೋದು ಅಂದರೆ ಅದು ಚಿಕ್ಕಪೇಟೆಯಿಂದಲೇ. ಇಲ್ಲಿ ಪ್ರತಿನಿತ್ಯ ಲಕ್ಷಾಂತರ ಜನ ಬಂದು ವ್ಯಾಪಾರ ಮಾಡುತ್ತಾರೆ. ಇಲ್ಲಿ ಎಲ್ಲಾ ರೀತಿಯ ಬ್ಯುಸಿನೆಸ್ ಇದ್ದು, ಕ್ಲೀನ್ ಮಾಡುತ್ತಿಲ್ಲ. 6 ತಿಂಗಳಿಗೊಮ್ಮೆ ಕ್ಲೀನ್ ಮಾಡಲು ಬಂದು ಕಲ್ಲು ಎತ್ತಿ ಸ್ವಲ್ಪ ಕಸ ತೆಗೆದು ಮತ್ತೆ ಮುಚ್ಚುತ್ತಾರೆ. ಹೀಗಾಗಿ ಅರ್ಧ ಗಂಟೆ ಮಳೆ ಬಂದರೂ ಸ್ವಿಮ್ಮಿಂಗ್ ಪೂಲ್ ರೀತಿ ಆಗಿ ಬಿಡುತ್ತದೆ ಎಂದು ಶಾಸಕರ ವಿರುದ್ಧ ಗರಂ ಆದರು.

ಚಿಕ್ಕಪೇಟೆಯ ಅವ್ಯವಸ್ಥೆಯ ವರದಿ ಬೆನ್ನಲ್ಲೇ ಎಚ್ಚೆತ್ತುಕೊಂಡ ಜಂಟಿ ಆಯುಕ್ತ ಚಿದಾನಂದ್ ಸ್ಥಳಕ್ಕೆ ಭೆಟಿ ನೀಡುವುದಾಗಿ ತಿಳಿಸಿದ್ದಾರೆ. ಈ ಬಗ್ಗೆ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಈಗಲೇ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *