ಪಾಕಿಸ್ತಾನದಲ್ಲಿ ಬಿರುಗಾಳಿ ಸಹಿತ ಭಾರೀ ಮಳೆ – 20 ಜನ ಸಾವು, 150ಕ್ಕೂ ಹೆಚ್ಚು ಮಂದಿಗೆ ಗಾಯ!

Public TV
1 Min Read

– ಹಲವು ಪ್ರದೇಶಗಳಲ್ಲಿ ವಿದ್ಯುತ್ ಕಡಿತ

ಇಸ್ಲಾಮಾಬಾದ್‌: ಪಾಕಿಸ್ತಾನದ ಪಂಜಾಬ್‌ ಪ್ರಾಂತ್ಯದಲ್ಲಿ ಬಿರುಗಾಳಿ ಸಹಿತ ಭಾರೀ ಮಳೆಯಿಂದಾಗಿ 20 ಮಂದಿ ಸಾವನ್ನಪ್ಪಿದ್ದು, 150ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆಂದು ವರದಿಯಾಗಿದೆ. ಮೃತಪಟ್ಟವರಲ್ಲಿ ಮಕ್ಕಳೂ ಸೇರಿದ್ದಾರೆ ಎನ್ನಲಾಗಿದೆ.

ಬಿರುಗಾಳಿಯಿಂದಾಗಿ ವಿದ್ಯುತ್‌ ಕಂಬಗಳು ಹಾನಿಯಾಗಿದ್ದು, ಹಲವು ಪ್ರದೇಶಗಳಲ್ಲಿ ವಿದ್ಯುತ್‌ ಸಂಪರ್ಕ ಕಡಿತಗೊಂಡಿದೆ. ರಸ್ತೆಗಳು ಸಂಪೂರ್ಣ ಜಲಾವೃತವಾಗಿದ್ದು, ಮರಗಳು ಧರೆಗುರುಳಿವೆ. ಅಲ್ಲದೇ ಹಲವೆಡೆ ಕಟ್ಟಡಗಳು ಕುಸಿದುಬಿದ್ದಿದ್ದು, ಶವಗಳು ಅವಶೇಷಗಳ ಅಡಿ ಸಿಲುಕಿಕೊಂಡಿವೆ. ಜೊತೆಗೆ ಮಳೆಯಿಂದಾಗಿ ರಸ್ತೆಗಳು ಹಾಳಾಗಿದ್ದು, ಹಲವೆಡೆ ಸಂಚಾರ ಅಸ್ತವ್ಯಸ್ಥಗೊಂಡಿದೆ.

ಮೂಲಗಳ ಪ್ರಕಾರ, ಲಾಹೋರ್ ಮತ್ತು ಝೀಲಂನಲ್ಲಿ ತಲಾ 3 ಜನರು ಸಾವನ್ನಪ್ಪಿದ್ದಾರೆ. ಸಿಯಾಲ್‌ಕೋಟ್ ಮತ್ತು ಮುಜಫರ್‌ಗಢದಲ್ಲಿ ತಲಾ 2 ಸಾವುಗಳು ಸಂಭವಿಸಿವೆ. ಶೇಖಪುರ, ನಂಕಾನಾ ಸಾಹಿಬ್, ಅಟಾಕ್, ಮುಲ್ತಾನ್, ರಾಜನ್‌ಪುರ, ಹಫೀಜಾಬಾದ್, ಮಿಯಾನ್‌ವಾಲಿ, ಜಾಂಗ್, ಗುಜ್ರಾನ್‌ವಾಲಾ ಮತ್ತು ಲಯ್ಯದಲ್ಲಿ ತಲಾ ಒಬ್ಬರು ಸಾವನ್ನಪ್ಪಿದ್ದಾರೆ ಎಂದು ವರದಿಗಳು ತಿಳಿಸಿವೆ.

ಇನ್ನೂ ಚಂಡಮಾರುತದ ಪರಿಣಾಮ ವಿಮಾನ ಪ್ರಯಾಣದ ಮೇಲೂ ಪರಿಣಾಮ ಬೀರಿದೆ. ಕರಾಚಿಯಿಂದ ಲಾಹೋರ್‌ಗೆ ಬರುತ್ತಿದ್ದ ಖಾಸಗಿ ವಿಮಾನ FL-842 ಲಾಹೋರ್ ವಿಮಾನ ನಿಲ್ದಾಣದಲ್ಲಿ ತೀವ್ರ ಪ್ರಕ್ಷುಬ್ಧತೆ ಎದುರಿಸಿದೆ. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

Share This Article