-16 ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳಲ್ಲಿ ಸಂಚಾರ ಸ್ಥಗಿತ
ಚಿಕ್ಕೋಡಿ: ಮಹಾರಾಷ್ಟ್ರದಲ್ಲಿ (Maharashtra) ಧಾರಾಕಾರ ಮಳೆಯಾಗುತ್ತಿರುವ (Heavy Rain) ಹಿನ್ನೆಲೆ ಕೃಷ್ಣಾ, ದೂದಗಂಗಾ ನದಿಗಳಿಗೆ ಒಳಹರಿವು ಹೆಚ್ಚಾಗಿದ್ದು, 8 ಸೇತುವೆಗಳು ಜಲಾವೃತಗೊಂಡಿವೆ.
ಮಹಾರಾಷ್ಟ್ರದ ಜಲಾಶಯಗಳಿಂದ ಕೃಷ್ಣಾ, ದೂದಗಂಗಾ ನದಿಗಳಿಗೆ ನೀರು ಬಿಡುಗಡೆ ಮಾಡಲಾಗಿದ್ದು, ಎರಡು ನದಿಗಳು ಮೈದುಂಬಿ ಹರಿಯುತ್ತಿವೆ. ಕೃಷ್ಣಾ ನದಿ ನೀರಿನ ಮಟ್ಟದಲ್ಲಿ 30,000 ಕ್ಯೂಸೆಕ್ ಏರಿಕೆಯಾಗಿದ್ದು, ದೂದಗಂಗಾ ನದಿ ನೀರಿನಲ್ಲೂ ಗಣನೀಯ ಹೆಚ್ಚಳವಾಗಿದೆ. ಪರಿಣಾಮ ಚಿಕ್ಕೋಡಿ ಉಪವಿಭಾಗ ವ್ಯಾಪ್ತಿಯ 8 ಸೇತುವೆಗಳು 4ನೇ ಬಾರಿಗೆ ಜಲಾವೃತವಾಗಿವೆ.ಇದನ್ನೂ ಓದಿ: ಎತ್ತಿನಹೊಳೆ ಯೋಜನೆಗೆ ಹೆಚ್ಚುವರಿ 3,000 ಕೋಟಿ ಅನುದಾನ ಕೊಡಲಾಗಿದೆ, ಸಿಎಂಗೆ ರೈತರ ಬಗ್ಗೆ ಕಾಳಜಿ ಇದೆ: ಬೈರತಿ ಸುರೇಶ್
ಕೃಷ್ಣಾ ನದಿಗೆ ಅಡ್ಡಲಾಗಿರುವ ಯಡೂರು-ಕಲ್ಲೋಳ, ಭಾವನಸೌಂದತ್ತಿ-ಮಾಂಜರಿ, ದೂದಗಂಗಾ ನದಿಯ ಮಲ್ಲಿಕವಾಡ-ದತ್ತವಾಡ, ಕಾರದಗಾ-ಭೋಜ, ಭೋಜವಾಡಿ-ಕಾರದಗಾ, ಎಕ್ಸಂಬಾ-ದತ್ತವಾಡ, ಭಾರವಾಡ-ಕುನ್ನೂರು, ಬೋಜವಾಡಿ-ಕುನ್ನೂರು ಸೇರಿ ಒಟ್ಟು 16 ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಸೇತುವೆಗಳು ಜಲಾವೃತಗೊಂಡಿವೆ. ಜನರು ಪರ್ಯಾಯ ಮಾರ್ಗಗಳ ಮೂಲಕ ಸಂಚಾರ ಮಾಡುತ್ತಿದ್ದು, ನದಿ ತೀರಕ್ಕೆ ತೆರಳದಂತೆ ಬೆಳಗಾವಿ ಜಿಲ್ಲಾಡಳಿತ ಸೂಚನೆ ನೀಡಿ ಬ್ಯಾರಿಕೇಡ್ ಅಳವಡಿಸಿದೆ.
ಸದ್ಯ ಮಹಾರಾಷ್ಟ್ರ ಮಳೆಯಿಂದಾಗಿ ಅಲ್ಲಿನ ಜಲಾಶಯಗಳು ಭರ್ತಿಯಾಗುತ್ತಿದ್ದು, ಪರಿಣಾಮ ರಾಜ್ಯಕ್ಕೆ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದುಬರುತ್ತಿದೆ. ಒಂದು ವೇಳೆ ಮಳೆ ಹೀಗೆ ಮುಂದುವರೆದರೆ ಚಿಕ್ಕೋಡಿ (Chikkodi) ಉಪವಿಭಾಗದಲ್ಲಿ ಪ್ರವಾಹ ಎದುರಾಗುವ ಸಾಧ್ಯತೆಗಳಿವೆ.ಇದನ್ನೂ ಓದಿ: ಬೈಕ್‌ಗಳ ನಡುವೆ ಮುಖಾಮುಖಿ ಡಿಕ್ಕಿ – ಇಬ್ಬರು ಸವಾರರ ದಾರುಣ ಸಾವು