– ಜನಜೀವನ ಅಸ್ತವ್ಯಸ್ತ
ಬೆಂಗಳೂರು: ರಾಜ್ಯದಲ್ಲಿ ಮಳೆ (Rain) ಆರ್ಭಟ ಮತ್ತೆ ಮುಂದುವರಿದಿದೆ. ದೀಪಾವಳಿ ಸಂಭ್ರಮದಲ್ಲಿದ್ದ ಜನತೆಗೆ ಮಳೆರಾಯ ಕೊಂಚ ಬೇಸರ ತರಿಸಿದ್ದಾನೆ. ಹಾಸನ, ಚಿಕ್ಕಮಗಳೂರು, ಉಡುಪಿ ಸೇರಿ ರಾಜ್ಯದ ನಾನಾ ಜಿಲ್ಲೆಗಳಲ್ಲಿ ಮಳೆ ಅಬ್ಬರ ಜೋರಾಗಿದ್ದು, ಸಾಕಷ್ಟು ಅವಾಂತರ ಸೃಷ್ಟಿಸಿದೆ. ಸತತ ಮಳೆಯಿಂದ ಬೆಳೆನಾಶವಾಗಿದ್ದು, ಬೆಳೆ ಕಳೆದುಕೊಂಡ ರೈತರು ಕಣ್ಣೀರಿಡುವಂತೆ ಮಾಡಿದೆ.
ಹಾಸನ ಜಿಲ್ಲೆಯಲ್ಲಿ ಕಳೆದ ಐದು ದಿನಗಳಿಂದ ಬಹುತೇಕ ತಾಲೂಕುಗಳಲ್ಲಿ ನಿರಂತರ ಮಳೆಯಾಗುತ್ತಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಹೊಳೆನರಸೀಪುರ ತಾಲೂಕಿನ ಸೋಮನಹಳ್ಳಿ ಗ್ರಾಮದಲ್ಲಿ ಬಾರಿ ಮಳೆಯಿಂದ ಕೆರೆಯ ಕೋಡಿ ಒಡೆದು ನೂರಾರು ಎಕರೆ ಪ್ರದೇಶದ ರೈತರ ಜಮೀನುಗಳು ಜಲಾವೃತಗೊಂಡಿವೆ. ಅಡಿಕೆ, ತೆಂಗಿನ ತೋಟ, ಹೊಲ, ಗದ್ದೆಗಳಲ್ಲಿ ನೀರು ತುಂಬಿಕೊಂಡಿದೆ.
ಅರಸೀಕೆರೆ ತಾಲೂಕಿನ ಚಿಕ್ಕಮ್ಮನಹಳ್ಳಿ ಗ್ರಾಮದ ಶಂಕರಲಿಂಗಪ್ಪ ಎಂಬವರ ಮನೆಗೆ ನೀರು ನುಗ್ಗಿದೆ. ಮನೆಯಲ್ಲಿದ್ದ ವಸ್ತುಗಳೆಲ್ಲಾ ನೀರಿನಲ್ಲಿ ತೇಲಿವೆ. ಹೊಳೆನರಸೀಪುರ ಪಟ್ಟಣದ, ಕಾರ್ಖಾನೆ ಬೀದಿಯಲ್ಲಿರುವ ಮಂಜು ಎಂಬವರ ಮನೆಗೂ ನೀರು ನುಗ್ಗಿ ಅಪಾರ ಹಾನಿ ಆಗಿದೆ. ಚನ್ನರಾಯಪಟ್ಟಣ ತಾಲೂಕಿನಲ್ಲಿ ಮಳೆಗೆ ಹಳ್ಳಕೊಳ್ಳ, ಕೆರೆ ಕಟ್ಟೆಗಳು ತುಂಬಿ ಹರಿದು ಹೊಲ, ಗದ್ದೆಗಳು ಜಲಾವೃತವಾಗಿವೆ.
ಅರಸೀಕೆರೆ ತಾಲೂಕಿನಲ್ಲೂ ಮಳೆ ಅಬ್ಬರಿಸಿದ್ದು, ಮಳೆನೀರು ಆಸ್ಪತ್ರೆ ಒಳಗೆ ನುಗ್ಗಿ ಅವಾಂತರ ಸೃಷ್ಟಿಸಿದೆ. ರೋಗಿಗಳು ಬೆಡ್‌ನಿಂದ ಕೆಳಗೆ ಇಳಿಯದಂತಹ ಪರಿಸ್ಥಿತಿ ನಿರ್ಮಾಣವಾಗಿದ್ದರೆ, ರೋಗಿಗಳ ಕಡೆಯವರು ನೀರಿನಲ್ಲೇ ನಿಲ್ಲಬೇಕಾಗಿದೆ.
ಚಿಕ್ಕಮಗಳೂರಿನ ಮಲೆನಾಡು ಭಾಗದಲ್ಲಿ ಭಾರೀ ಮಳೆಯಾಗುತ್ತಿದ್ದು, ಜನಜೀವನವನ್ನ ಅಸವ್ಯಸ್ತಗೊಳಿಸಿದೆ. ದೀಪಾವಳಿ ಹಬ್ಬದಂದೇ ಅಬ್ಬರಿಸಿದ ಮಳೆಗೆ ಮಲೆನಾಡು ಜನರು ಹೈರಾಣಾಗಿದ್ದಾರೆ. ಜಿಲ್ಲೆಯ ಕಳಸ, ಹೊರನಾಡು, ಕುದುರೆಮುಖ ಭಾಗದಲ್ಲಿ ಭಾರೀ ಮಳೆಯಾಗಿದ್ದು. ಹಳ್ಳದಂತಾದ ರಸ್ತೆಗಳಲ್ಲಿ ವಾಹನ ಚಲಾಯಿಸಲು ವಾಹನ ಸವಾರರು ಪರದಾಡಿದ್ದಾರೆ.
ಕರಾವಳಿ ಜಿಲ್ಲೆ ಉಡುಪಿಯಲ್ಲೂ ಮಳೆ ಅಬ್ಬರ ಜೋರಾಗಿದೆ. ಗುಡುಗು, ಮಿಂಚು ಸಹಿತ ಸುರಿದ ಭಾರಿ ಮಳೆಗೆ ಉಡುಪಿ ಜನರು ಹೈರಾಣಾಗಿದ್ದಾರೆ. ಬಿರುಗಾಳಿ ಸಹಿತ ಮಳೆಯಾದ ಕಾರಣ. ಜಿಲ್ಲೆಯ ವಿವಿಧೆಡೆ ವಿದ್ಯುತ್‌ನಲ್ಲಿ ವ್ಯತ್ಯಯವಾಗಿದೆ.
ತುಮಕೂರು ಜಿಲ್ಲಾದ್ಯಂತ ಮಳೆ ಅಬ್ಬರಿಸುತ್ತಿದ್ದು, ಜನಜೀವನಕ್ಕೆ ಬ್ರೇಕ್ ಹಾಕಿದೆ. ತಿಪಟೂರಿನಲ್ಲಿ ಹಾದುಹೋಗಿರುವ ರಾಷ್ಟ್ರೀಯ ಹೆದ್ದಾರಿ 206ರಲ್ಲಿ ರಸ್ತೆಗೆ ನುಗ್ಗಿದ ಮಳೆ ನೀರು ಕೃತಕ ಕೆರೆ ಸೃಷ್ಟಿಸಿದೆ. ಕೆರೆಯಂತಾದ ಅಂಡರ್‌ಪಾಸ್‌ನಲ್ಲಿ ವಾಹನ ಸವಾರರು ಪರದಾಡುವಂತ ಸ್ಥಿತಿ ನಿರ್ಮಾಣ ಮಾಡಿದೆ. ಅವೈಜ್ಞಾನಿಕ ಕಾಮಗಾರಿಗೆ ವಾಹನ ಸವಾರರು ಅಧಿಕಾರಿಗಳಿಗೆ ಹಿಡಿಶಾಪ ಹಾಕಿದ್ದಾರೆ.
ಇನ್ನು ಚಿತ್ರದುರ್ಗ ತಾಲೂಕಿನ ಕಸವನಹಳ್ಳಿ ಗ್ರಾಮದಲ್ಲಿ ಕಳೆದ ಎರಡು ದಿನಗಳಿಂದ ಧಾರಾಕಾರ ಮಳೆಯಾಗಿದ್ದು, ಶೀತ ಹೆಚ್ಚಾಗಿ ಹೂವಿನ ಗಿಡಗಳು ಕೊಳೆರೋಗಕ್ಕೆ ತುತ್ತಾಗಿ ಕೊಳೆಯುತ್ತಿವೆ. ದೀಪಾವಳಿಗೆ ಭರ್ಜರಿ ಲಾಭ ಗಳಿಸುವ ನಿರೀಕ್ಷೆಯಲ್ಲಿದ್ದ ರೈತರು ಕಂಗಲಾಗಿದ್ದಾರೆ. ಮಳೆಯಿಂದಾಗಿ ಸಕಾಲಕ್ಕೆ ಹೂವು ಕೊಯ್ಲು ಮಾಡಲಾಗದೇ ಕಲರ್ ಫುಲ್ ಸೆಂಟಿಲ್ ಹೂವು ಜಮೀನಲ್ಲೇ ಕೊಳೆಯುತ್ತಿದೆ. ಒಟ್ಟಾರೆ ರಾಜ್ಯದಲ್ಲಿ ಮಳೆ ಅಬ್ಬರ ಜೋರಾಗಿದ್ದು, ಮಳೆ ಸೃಷ್ಟಿಸಿದ ಅವಾಂತರಕ್ಕೆ ಜನರು ಹೈರಾಣಾಗಿದ್ದಾರೆ.