ಮೊದಲ ಮಾನ್ಸೂನ್ ಮಳೆಗೆ ರಾಷ್ಟ್ರ ರಾಜಧಾನಿ ತತ್ತರ – ರಸ್ತೆಗಳಲ್ಲಿ ಉಕ್ಕಿ ಹರಿದ ನೀರು

Public TV
2 Min Read

ನವದೆಹಲಿ: ಬಿಸಿಲಿನ ಬೇಗೆಯಲ್ಲಿ ಬೆಂದಿದ್ದ ರಾಷ್ಟ್ರ ರಾಜಧಾನಿ ದೆಹಲಿಯ (New Delhi) ಜನರಿಗೆ ಈ ಬಾರಿ ಮಾನ್ಸೂನ್‌ನ ಮೊದಲ ಮಳೆ ದೊಡ್ಡ ರಿಲ್ಯಾಕ್ಸ್ ನೀಡಿದೆ. ಆದರೆ ನಿನ್ನೆ ರಾತ್ರಿ ಸುರಿದ ದಾಖಲೆ ಪ್ರಮಾಣದ ಮಳೆ ಇಡೀ ದೆಹಲಿಯನ್ನು ಸಂಕಷ್ಟಕ್ಕೆ ದೂಡಿದೆ. ಎಲ್ಲಾ ರಸ್ತೆಗಳಲ್ಲಿ ನೀರು ತುಂಬಿದೆ. ಇಡೀ ನಗರದಲ್ಲಿ ಟ್ರಾಫಿಕ್ ಜಾಮ್ ಆವರಿಸಿದ್ದು, ಜನರ ಆಕ್ರೋಶಕ್ಕೆ ಕಾರಣವಾಯಿತು.

ಗುರುವಾರ ರಾತ್ರಿ ಸರಿ ಸುಮಾರು ಮೂರು ಗಂಟೆ ಸುರಿದ ಮಳೆಗೆ ಭಾಗಶಃ ದೆಹಲಿ ಜಲಾವೃತಗೊಂಡಿದೆ. ದೆಹಲಿ ವಿಮಾನ ನಿಲ್ದಾಣದ (Delhi Airport) ಟರ್ಮಿನಲ್ 1 ರ ಮೇಲ್ಛಾವಣಿಯ ಒಂದು ಭಾಗವು ಕುಸಿದುಬಿದ್ದು ಒಬ್ಬ ವ್ಯಕ್ತಿ ಸಾವನ್ನಪ್ಪಿ ಆರು ಮಂದಿ ಗಾಯಗೊಂಡಿದ್ದಾರೆ. ಇದನ್ನೂ ಓದಿ: ದೆಹಲಿ ಏರ್‌ಪೋರ್ಟ್‌ ಮೇಲ್ಛಾವಣಿ ಕುಸಿತ- ಮೃತನ ಕುಟುಂಬ, ಗಾಯಾಳುಗಳಿಗೆ ಪರಿಹಾರ

ಮತ್ತೊಂದು ಕಡೆ ಇಡೀ ನಗರದಲ್ಲಿ ಬಹುತೇಕ ಪ್ರದೇಶಗಳು ನೀರಿನಿಂದ ಜಲಾವೃತಗೊಂಡಿದೆ. ಐಟಿಓ, ಲೋಧಿ ಎಸ್ಟೇಟ್, ಕಮಲ ನಗರಾ, ಲಜ್‌ಪತ್ ನಗರ, ಏಮ್ಸ್ ಪ್ರದೇಶ, ಸಬ್ದರ್ ಜಂಗ್ ಎನ್ಕ್ಲೇವ್, ಮಾತೃವಾ ರಸ್ತೆ, ತೀನ್ ಮೂರ್ತಿ ಮಾರ್ಗ, ಮೂಲಚಂದ್, ಮಿಂಟೋ ರಸ್ತೆ, ಆನಂದ್ ವಿಹಾರ್, ಮೆಹ್ರೌಲಿ ಬದರ್‌ಪುರ್ ರಸ್ತೆ, ಮಂಡವಾಲಿ, ಭಿಕಾಜಿ ಕಾಮಾ ಪ್ಲೇಸ್, ಮಧು ವಿಹಾರ್, ಪ್ರಗತಿ ಮೈದಾನ, ಮುನಿರ್ಕಾ, ಧೌಲಾ ಕುವಾ, ಮೋತಿ ಬಾಗ್, ಐಟಿಒ ಮತ್ತು ನೋಯ್ಡಾದ ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿದೆ. ಇದರಿಂದ ವಾಹನ ಸಂಚಾರ ಅಸ್ತವ್ಯಸ್ತಗೊಂಡಿದ್ದು, ಕಿಲೋಮೀಟರ್ ಉದ್ದಕ್ಕೂ ಎಲ್ಲೆಡೆ ಟ್ರಾಫಿಕ್ ಜಾಮ್ ಆಗಿ ಸಂಚಾರಕ್ಕೆ ತೊಂದರೆಯಾಯಿತು‌.

ಭಿಕಾಜೀ ಕಾಮಾ ಮೆಟ್ರೋ ನಿಲ್ದಾಣದಲ್ಲಿ ನೀರು ನುಗ್ಗಿದೆ. ಆಗ್ನೇಯ ದೆಹಲಿಯ ಚಿತ್ತರಂಜನ್ ಪಾರ್ಕ್‌ನಲ್ಲಿರುವ ಮನೆಗಳಿಗೆ ನೀರು ನುಗ್ಗಿ ಗೃಹೋಪಯೋಗಿ ವಸ್ತುಗಳು ಮತ್ತು ಪೀಠೋಪಕರಣಗಳಿಗೆ ಹಾನಿಯಾಗಿದೆ. ಆಜಾದ್ ಮಾರ್ಕೆಟ್ ಅಂಡರ್ ಪಾಸ್‌ನಲ್ಲಿ ಪ್ರಯಾಣಿಕರ ಬಸ್ ಕೆಟ್ಟು ನಿಂತಿದ್ದು, ಪ್ರಯಾಣಿಕರನ್ನು ರಕ್ಷಿಸಿ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರ ಮಾಡಲಾಯಿತು‌. ಐಟಿಓ ಪ್ಲೈವೋವರ್‌ ಬಳಿ ಬಸ್, ಕಾರುಗಳಲ್ಲಿ ನೀರು ನುಗ್ಗಿ ಕೆಟ್ಟು ನಿಂತವು. ಇದನ್ನೂ ಓದಿ: ದೆಹಲಿ ಏರ್‌ಪೋರ್ಟ್‌ನ ಟರ್ಮಿನಲ್ 1 ರಲ್ಲಿ ಛಾವಣಿ ಕುಸಿದು 6 ಮಂದಿಗೆ ಗಾಯ

ಈ ನಡುವೆ ನಿನ್ನೆ ಒಂದೇ ದಿನ ರಾತ್ರಿ 228 ಎಂಎಂ ಮಳೆ ದಾಖಲಾಗಿದೆ. 1936 ರಲ್ಲಿ 235.5 ಎಂಎಂ ಮಳೆ ದಾಖಲಾಗಿತ್ತು. ಇದಾದ ಬಳಿಕ ನಿನ್ನೆ ಅತಿ ಹೆಚ್ಚು ಮಳೆ ಒಂದೇ ದಿನ ಸುರಿದಿದೆ ಎಂದು ಕೇಂದ್ರ ಹವಾಮಾನ ಇಲಾಖೆ ಹೇಳಿದೆ‌. ಇನ್ನೂ ಮುಂದಿನ ಒಂದು ವಾರ ಭಾರಿ ಮಳೆಯ ಎಚ್ಚರಿಕೆ ನೀಡಿದೆ.

ದೆಹಲಿಯಲ್ಲಿ (Delhi Rains) ನೀರು ನುಗ್ಗುತ್ತಿದ್ದಂತೆ ಸೋಶಿಯಲ್ ಮೀಡಿಯಾಗಳಲ್ಲಿ ವೀಡಿಯೋ ಪೋಸ್ಟ್ ಮಾಡಿ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಗರದಲ್ಲಿ ನೀರು ತುಂಬಿದ್ದಕ್ಕೆ ಕೇಜ್ರಿವಾಲ್ ಸರ್ಕಾರವನ್ನು, ವಿಮಾನ ನಿಲ್ದಾಣದ ಮೇಲ್ಛಾವಣಿ ಕುಸಿತಕ್ಕೆ ಮೋದಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಈ ನಡುವೆ ಕಾಂಗ್ರೆಸ್ ಕೂಡಾ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದೆ. ಇದನ್ನೂ ಓದಿ: ಜಾರ್ಖಂಡ್‌ ಮಾಜಿ ಸಿಎಂ ಹೇಮಂತ್‌ ಸೊರೇನ್‌ಗೆ ಜಾಮೀನು ಮಂಜೂರು

Share This Article