ಬೆಂಗಳೂರಿನಲ್ಲಿ ಗುಡುಗು ಸಹಿತ, ಭಾರೀ ಮಳೆ- ತಗ್ಗುಪ್ರದೇಶಗಳೆಲ್ಲ ನೀರುಮಯ, ಸವಾರರ ಪರದಾಟ

By
2 Min Read

ಬೆಂಗಳೂರು: ಭಾರೀ ಮಳೆಗೆ ಸಿಲಿಕಾನ್ ಸಿಟಿ ನಲುಗಿಹೋಗಿದೆ. ಇದೇನು ಕೆರೆಯೋ ಎನ್ನುವಂತೆ ರಸ್ತೆಗಳು ಭಾಸವಾಗುತ್ತಿವೆ. ರಾಜ್‌ಕುಮಾರ್ ರಸ್ತೆಯಲ್ಲಿ ಮಂಡಿಯುದ್ದ ನೀರು ನಿಂತಿದ್ದು, ವಾಹನ ಸವಾರರು ರಸ್ತೆ ದಾಟಲು ಹರಸಾಹಸ ಪಡುತ್ತಿದ್ದಾರೆ. ದ್ವಿಚಕ್ರ ವಾಹನಗಳು ಕೆಟ್ಟು ನಿಂತಿವೆ. ಸಾರ್ವಜನಿಕರು ಬಿಬಿಎಂಪಿಯ ಕೆಲಸಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಿಲಿಕಾನ್ ಸಿಟಿಯಲ್ಲಿ ಮತ್ತೆ ಮಳೆ ಆರಂಭವಾಗಿದ್ದು, ಗಂಟೆಯಿಂದ ಧಾರಾಕಾರ ಮಳೆ ಸುರಿಯುತ್ತಿದೆ. ಮಲ್ಲೇಶ್ವರಂ, ರಾಜಾಜಿನಗರ, ಮಹಾಲಕ್ಷ್ಮಿ ಲೇಔಟ್ ಸುತ್ತಮುತ್ತ ಭಾರೀ ಮಳೆ ಸುರಿದಿದೆ. ಮಧ್ಯಾಹ್ನ ಕೂಡ ಧಾರಾಕಾರ ಮಳೆಯಾಗಿತ್ತು. ಇದನ್ನೂ ಓದಿ: ಒಟ್ಟು 109 – ಬೆಂಗ್ಳೂರಲ್ಲಿ 95 ಕೇಸ್ ಪತ್ತೆ

ಬೆಂಗಳೂರಿನಲ್ಲಿ ಮಳೆಯ ಅಬ್ಬರ ಜೋರಾಗಿದ್ದು, ಬೆಳಗ್ಗೆಯಿಂದ ಮೋಡಕವಿದ ವಾತಾವರಣವಿತ್ತು. ಆಗಾಗ ಕೇಲವೆಡೆ ತುಂತುರು ಮಳೆಯಾಗಿದ್ದು, ಇದೀಗ ಮಳೆಯ ಅಬ್ಬರ ಜೋರಾಗಿದೆ. ಮೆಜೆಸ್ಟಿಕ್, ಮಾರ್ಕೆಟ್, ಮಲ್ಲೇಶ್ವರಂ, ಚಾಮರಾಜಪೇಟೆ, ಶೇಷಾದ್ರಿಪುರಂ, ಸದಾಶಿವನಗರ, ಕೆಜಿ ರೋಡ್, ಸೇರಿದಂತೆ ಹಲವೆಡೆ ಭಾರೀ ಮಳೆ ಸುರಿದಿದೆ. ಶಾಂತಿನಗರ, ಡಬಲ್ ರೋಡ್‌ನಲ್ಲಿ ಪ್ರವಾಹಸ್ಥಿತಿ ಉಂಟಾಗಿದೆ. ಇದನ್ನೂ ಓದಿ: ನಟಿ ಚೇತನಾ ರಾಜ್ ಸಾವು ಪ್ರಕರಣ – ಆಸ್ಪತ್ರೆ ವಿರುದ್ಧ ನೋಟಿಸ್ ಜಾರಿ

ಬೆಂಗಳೂರಿನ ಎಲ್ಲೆಡೆ ಗುಡುಗು-ಸಿಡಿಲಿನೊಂದಿಗೆ ಮಳೆ ಅಬ್ಬರಿಸುತ್ತಿದ್ದು, ತಗ್ಗು ಪ್ರದೇಶಗಳು, ಅಂಡರ್ ಪಾಸ್‌ಗಳು ಜಲಾವೃತಗೊಂಡಿವೆ. ಕೆರೆಯಂತಾಗಿರುವ ರಸ್ತೆಗಳಲ್ಲಿ ದ್ವಿಚಕ್ರ ವಾಹನಗಳು ಹಾಗೂ ಆಟೋ ರಿಕ್ಷಾಗಳು ಕೆಟ್ಟು ನಿಂತಿವೆ. ನಗರದಲ್ಲಿ ಎರಡು ಕಾರುಗಳು ನೀರಿನಲ್ಲಿ ತೇಲಾಡಿದ್ದು, ಕೆಟ್ಟು ನಿಂತ ವಾಹನಗಳಿಂದಾಗಿ ಸವಾರರು ಪರದಾಡುವಂತಾಗಿದೆ.

ನಾಯಂಡಹಳ್ಳಿ ಅಂಡರ್ ಪಾಸ್ ನಲ್ಲಿ ಮಳೆ ನೀರಿಗೆ ಬೆನ್ಜ್ ಮತ್ತು ಆಡಿ ಕಾರುಗಳು ಕೆಟ್ಟು ನಿಂತಿವೆ. ಇದರಲ್ಲಿರುವ ಬೆನ್ಜ್‌ ಕಾರು ನಟ ಲಿಖಿತ್ ಶೆಟ್ಟಿಯದ್ದು ಎಂದು ಹೇಳಲಾಗುತ್ತಿದೆ. ಅಂಡರ್ ಪಾಸ್ ನಲ್ಲಿ ಮೂರು- ನಾಲ್ಕು ಅಡಿಗಳ ವರೆಗೆ ನೀರು ನಿಂತಿತ್ತು. ಈ ವೇಳೆ ರಸ್ತೆ ಕ್ರಾಸ್ ಮಾಡಲು ನೀರಿಗಿಳಿದ ವಾಹನಗಳು ಕೆಟ್ಟು ನಿಂತಿವೆ.

ಮಲ್ಲೇಶ್ವರಂ ಮಂತ್ರಿ ಮಾಲ್ ಬಳಿ ದಿನೇಶ್ ಗುಂಡೂರಾವ್ ಆಫೀಸ್ ಪಕ್ಕ ಮಡಿವಾಳ ಸಂಘದ ಹಾಸ್ಟೆಲ್‌ಗೆ ನೀರು ನುಗ್ಗಿದೆ. ಮಳೆಯಿಂದಾದ ಅವಾಂತರದಿಂದಾಗಿ ಬೆಂಗಳೂರು-ಮೈಸೂರು ಮಾರ್ಗವನ್ನು ಪೊಲೀಸರು ಬದಲಾವಣೆ ಮಾಡಿದ್ದಾರೆ.

ಆರ್ ಆರ್ ನಗರದ ಸಿರಿ ಟೆಂಪಲ್ ಬೆಲ್ ಅಪಾರ್ಟ್ ಮೆಂಟ್ ಗೆ ನೀರು ನುಗ್ಗಿದ್ದು, ನೀರು ನುದ್ದಿ ಅಪಾರ್ಟ್ಮೆಂಟ್ ವಾಸಿಗಳು ಸಂಕಷ್ಟ ಎದುರಿಸುತ್ತಿದ್ದಾರೆ. ಕಳೆದ ಮೂರು ವರ್ಷಗಳಿಂದ ಇದೇ ರೀತಿಯಾದಂತಹ ಚಿತ್ರಣ ಕಂಡುಬರುತ್ತಿದೆ ಎಂದು ಸ್ಥಳೀಯರು ಆರೋಪ ಮಾಡುತ್ತಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *