ಬೆಂಗಳೂರು: ಇಂದಿನಿಂದ ಶುಕ್ರವಾರದವರೆಗೆ ಹಲವೆಡೆ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ.
ಬೆಂಗಳೂರು, ಮಂಡ್ಯ ತುಮಕೂರು ಸೇರಿದಂತೆ ಅನೇಕ ಭಾಗದಲ್ಲಿ ಸಂಜೆಯ ವೇಳೆ ಮಳೆಯಾಗಲಿದ್ದು, ಉತ್ತರ ಒಳನಾಡು ದಕ್ಷಿಣ ಒಳನಾಡಿನಲ್ಲೂ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ತಮಿಳುನಾಡು ಸೇರಿದಂತೆ ಕರ್ನಾಟಕ ದಕ್ಷಿಣ ಒಳನಾಡು ಪ್ರದೇಶದಲ್ಲಿ ಹೆಚ್ಚಿನ ಮಳೆ ಸಂಭವ ಇದೆ. ನಾಳೆ ರಾಜ್ಯದ 11 ಕ್ಷೇತ್ರಗಳ ಲೋಕಸಭಾ ಚುನಾವಣೆಯ ಮತದಾನ ನಡೆಯಲಿದ್ದು, ಮತದಾರರು ಮಳೆಯ ಎಚ್ಚರಿಕೆ ಹಿನ್ನೆಲೆಯಲ್ಲಿ ಬೇಗನೆ ಮತದಾನ ಮಾಡಿದರೆ ಉತ್ತಮ.
ಬುಧವಾರ ಮಧ್ಯಾಹ್ನ ಆನೇಕಲ್ ತಾಲೂಕಿನ ಅತ್ತಿಬೆಲೆ, ಚಂದಾಪುರ ಮತ್ತು ಹೆಬ್ಬಗೋಡಿ ಸರ್ಜಾಪುರ ಸುತ್ತಮುತ್ತ ಮಳೆಯಾಗಿದೆ. ಇದ್ದಕ್ಕಿದ್ದಂತೆ ಧಿಡೀರ್ ಆಗಿ ಸುರಿದ ಮಳೆಯಿಂದ ರಕ್ಷಿಸಿಕೊಳ್ಳಲು ಸಾರ್ವಜನಿಕರ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿತ್ತು.
ಸಾರ್ವಜನಿಕರು ಬಸ್ ನಿಲ್ದಾಣ, ಅಂಗಡಿ ಮುಂಗಟ್ಟುಗಳು ಮತ್ತು ಫ್ಲೈ ಓವರ್ ಕೆಳಗೆ ಮುಂದೆ ನಿಂತು ಮಳೆಯಿಂದ ರಕ್ಷಣೆ ಮಾಡಿಕೊಂಡಿದ್ದಾರೆ. ಇತ್ತೀಚೆಗೆ ದಾವಣಗೆರೆ, ಚಿಕ್ಕಮಗಳೂರು, ಕೊಡಗು ಸೇರಿದಂತೆ ಅನೇಕ ಕಡೆಗಳಲ್ಲಿ ಆಲಿಕಲ್ಲು ಸಮೇತ ಮಳೆಯಾಗಿತ್ತು.
ಇತ್ತ ಉತ್ತರ ಭಾರತದ ಕೆಲ ರಾಜ್ಯಗಳಲ್ಲಿ ಬಿಸಿಗಾಳಿಯಿಂದ ಕೂಡಿದ ಮಳೆ ಅರ್ಭಟ ನಡೆಸಿದ್ದು, ಆಕಾಲಿಕ ಮಳೆಗೆ ಇದುವರೆಗೂ 38 ಮಂದಿ ಸಾವನ್ನಪ್ಪಿದ್ದಾರೆ. ಗುಜರಾತ್ ನಲ್ಲಿ 9 ಮಂದಿ, ರಾಜಸ್ಥಾನದಲ್ಲಿ 6, ಮಧ್ಯಪ್ರದೇಶದಲ್ಲಿ 16 ಮಂದಿ ಸಾವನ್ನಪ್ಪಿದ್ದಾರೆ.
ಮುಂಗಾರು ಪೂರ್ವ ಬಿರುಗಾಳಿ ಸಹಿತ ಆಕಾಲಿಕ ಮಳೆಯಾಗಿದ್ದು, ಕೆಲ ಪ್ರದೇಶಗಳಲ್ಲಿ ಸುರಿದ ಆಲಿಕಲ್ಲು ಮಳೆಯಿಂದ ಹಲವು ಜನರು ತತ್ತರಿಸಿ ಹೋಗಿದ್ದಾರೆ. ಮಳೆಯಿಂದ ಹಾನಿಗೊಳಗಾದ ಮಂದಿಗೆ ಕೇಂದ್ರ ಸರ್ಕಾರ ನೆರವಿನ ಹಸ್ತ ನೀಡಿದ್ದು, ರಾಷ್ಟ್ರಿಯ ವಿಪತ್ತು ನಿಧಿಯಿಂದ ಜೀವಹಾನಿಯಾದ ಕುಟುಂಬಕ್ಕೆ ತಲಾ 2 ಲಕ್ಷ ರೂ. ಗಾಯಗೊಂಡ ಕುಟುಂಬಗಳಿಗೆ ತಲಾ 50 ಸಾವಿರ ರೂ.ಗಳನ್ನು ನೀಡಲಾಗುವುದು ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ.
ಕೆಲ ದಿನಗಳ ಹಿಂದೆಯಷ್ಟೇ ಈ ಬಾರಿಯ ವಾರ್ಷಿಕ ಮುಂಗಾರು ಮಳೆಯ ಬಗ್ಗೆ ಮುನ್ಸೂಚನೆ ನೀಡಿದ್ದ ಹವಾಮಾನ ಇಲಾಖೆ, ಸಾಮಾನ್ಯ ಮಳೆ ಆಗಲಿದೆ ಎಂದು ತಿಳಿಸಿತ್ತು