ಮಳೆಗೆ ಮುಳುಗಿದ ಓಕಳಿಪುರಂ ಅಂಡರ್‌ಪಾಸ್‌- ಮಳೆ ನೀರಲ್ಲಿ ನಿಂತು ಕುಡುಕನ ರಂಪಾಟ

Public TV
1 Min Read

– ರಾಯಚೂರಲ್ಲಿ ಜನಜೀವನ ಅಸ್ತವ್ಯಸ್ತ

ಬೆಂಗಳೂರು: ಬಂಗಾಳ ಕೊಲ್ಲಿಯಲ್ಲಿ ಹಿಕ್ಕಾ ಚಂಡಮಾರುತದ ಎಫೆಕ್ಟ್ ನಿಂದ ರಾಜ್ಯದಲ್ಲಿ ಧಾರಾಕಾರ ಮಳೆಯಾಗುತ್ತಿದೆ.

ಬೆಂಗಳೂರಲ್ಲಿ ಮಂಗಳವಾರ ರಾತ್ರಿ ಧಾರಾಕಾರ ಮಳೆ ಸುರಿದ ಪರಿಣಾಮ ಓಕಳಿಪುರಂ ಅಂಡರ್ ಪಾಸ್‍ ಸಂಪೂರ್ಣ ಜಲಾವೃತವಾಗಿದೆ. ಅಂಡರ್ ಪಾಸ್‍ ಮೂಲಕ ಬಂದ ವಾಹನ ಸವಾರರು ಪರದಾಡಿದರು. ಓಕಳಿಪುರಂ ಅಂಡರ್ ಪಾಸ್‍ನ ಮಳೆ ನೀರಲ್ಲಿ ಕುಡುಕನೊಬ್ಬ ಪುಂಡಾಟ ನಡೆಸಿದ್ದಾನೆ. ಅಂಡರ್ ಪಾಸ್‍ನಲ್ಲಿ ನಿಂತು ವಾಹನ ಸವಾರರಿಗೆ ಅವಾಜ್ ಹಾಕಿದ್ದಾನೆ.

ಯಲಹಂಕ, ಹೆಬ್ಬಾಳ, ಮಲ್ಲೇಶ್ವರಂ, ಸದಾಶಿವ ನಗರ, ವೈಟ್‍ಫೀಲ್ಡ್, ಸೇರಿದಂತೆ ನಗರದ ಹಲವೆಡೆ ಭಾರೀ ಮಳೆಯಾಗಿದೆ. ರಸ್ತೆಗಳು ಜಲಾವೃತವಾಗಿದ ಪರಿಣಾಮ ವಾಹನ ಸವಾರರು ಪರದಾಡಿದ ಘಟನೆ ನಡೆದಿದೆ. ಇನ್ನೂ 2 ದಿನ ಬೆಂಗಳೂರಲ್ಲಿ ಮಳೆ ಸುರಿಯಲಿದ್ದು, ಹಳದಿ ಅಲರ್ಟ್ ಮುಂದುವರಿದಿದೆ.

ರಾಯಚೂರು ಜಿಲ್ಲೆಯಾದ್ಯಂತ ರಾತ್ರಿಯಿಡೀ ಮಳೆ ಆಗಿದೆ. ನಗರದ ಹಲವೆಡೆ ತಗ್ಗು ಪ್ರದೇಶಗಳಿಗೆ ಮಳೆ ನೀರು ನುಗ್ಗಿ ಜನ ನಾನಾ ಅವಸ್ಥೆ ಪಟ್ಟಿದ್ದಾರೆ. ಸಿಯತಲಾಬ್ ಪ್ರದೇಶದಲ್ಲಿ ಮನೆಗಳು ಜಲಾವೃತವಾಗಿವೆ. ಶ್ರೀರಾಮನಗರ ಕಾಲೋನಿಯಲ್ಲಿರುವ ಕೊದಂಡರಾಮ ದೇವಸ್ಥಾನ ಆವರಣ ಕೆರೆಯಂತಾಗಿದೆ. ಮಳೆಯಿಂದಾಗಿ ನಗರದಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಿದೆ. ಮಾನ್ವಿಯ ಮುಷ್ಟೂರು ಸೇತುವೆ, ಲಿಂಗಸುಗೂರಿನ ಉಪ್ಪಾರ ನಂದಿಹಾಳ ಸೇತುವೆ ಸಂಪೂರ್ಣವಾಗಿ ಮುಳುಗಡೆಯಾಗಿವೆ.

ಕೋಲಾರ ಜಿಲ್ಲೆಯ ಹಲವೆಡೆ ನಿನ್ನೆ ಮಳೆರಾಯ ಅಬ್ಬರಿಸಿದ್ದಾನೆ. 2 ದಿನದ ಮಳೆಗೆ ಜಿಲ್ಲೆಯ ಸಣ್ಣಪುಟ್ಟ ಹಳ್ಳಕೊಳ್ಳಗಳು ತುಂಬಿವೆ. ರಾಗಿ, ಜೋಳ, ಅವರೆ, ತೊಗರಿಗೆ ಮರು ಜೀವ ಬಂದಿದ್ದು ರೈತರ ಮೊಗದಲ್ಲಿ ಮಂದಹಾಸ ಬೀರಿದೆ. ಮುಂಗಾರು ಮಳೆಗೆ ಕ್ಯಾರೆ ಎನ್ನದ ಕೋಲಾರ ಜಿಲ್ಲಾಡಳಿತ ಹಿಕ್ಕಾ ಚಂಡಮಾರುತ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ಹೈ ಅಲರ್ಟ್ ಘೋಷಿಸಿದೆ.

ಚಂಡಮಾರುತದಿಂದ 4 ದಿನ ಜೋರು ಮಳೆ ಆಗೋದಾಗಿ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದ್ದು ಸಾರ್ವಜನಿಕ ಆಸ್ತಿಪಾಸ್ತಿ, ಯಾವುದೇ ಜೀವ ಹಾನಿಯಾಗದಂತೆ ಎಚ್ಚರಿಕೆ ವಹಿಸಲು ತಾಲೂಕು ಅಧಿಕಾರಿಗಳಿಗೆ ಸೂಚಿಸಿದೆ. ಅಲ್ಲದೆ ವಿಪತ್ತು ನಿರ್ವಹಣೆಗೆ ಕಂಟ್ರೋಲ್ ರೂಂ ಸ್ಥಾಪನೆ ಹಾಗೂ ನುರಿತ ವಿಪತ್ತು ತಂಡ ರಚನೆ ಮಾಡಿದೆ.

Share This Article
Leave a Comment

Leave a Reply

Your email address will not be published. Required fields are marked *