– ಇಂದು ಧಾರಾಕಾರ ಮಳೆಯ ಮುನ್ಸೂಚನೆ
ಬೆಂಗಳೂರು: ಗುರುವಾರ ರಾತ್ರಿ ಸುರಿದ ವರುಣನ ಆರ್ಭಟಕ್ಕೆ ಇಡೀ ಸಿಲಿಕಾನ್ ಸಿಟಿ ತತ್ತರಿಸಿ ಹೋಗಿದೆ. ಬಸವನಗುಡಿ, ಗಿರಿನಗರ ಸೇರಿ ಬೆಂಗಳೂರು ದಕ್ಷಿಣ ಭಾಗದಲ್ಲಿ ಅತೀ ಹೆಚ್ಚು ಮರಗಳು ಧರೆಗುರುಳಿವೆ.
ಪ್ಯಾಲೇಸ್ ರಸ್ತೆಯಲ್ಲಿ ಕಾರಿಗೆ ಬಸ್ ಡಿಕ್ಕಿಯಾದ ಪರಿಣಾಮ ಟ್ರಾಫಿಕ್ ಜಾಮ್ ಉಂಟಾಗಿ ವಾಹನ ಸವಾರರು ಪರದಾಡಿದರು. ಗಾಳಿಯ ರಭಸಕ್ಕೆ ಹಲವೆಡೆ ವಿದ್ಯುತ್ ಕಂಬಗಳು ನೆಲಕಚ್ಚಿವೆ. ಡಬಲ್ ರೋಡ್‍ನಲ್ಲಿ ಬೃಹದಾಕಾರದ ಮರವೊಂದು ಚಲಿಸುತ್ತಿದ್ದ ಕಾರಿನ ಮೇಲೆ ಬಿದ್ದ ಪರಿಣಾಮ ಟ್ರಾಫಿಕ್ ಜಾಮ್ ಆಗಿತ್ತು.
ಹನುಮಂತನಗರದಲ್ಲಿ ಬೃಹದಾಕಾರದ ಹಳೆ ಮರ ಎರಡು ಮನೆಗಳ ಮೇಲೆ ಬಿದ್ದಿದ್ದು ಅದೃಷ್ಠವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ರಿಚ್‍ಮಂಡ್ ರಸ್ತೆಯ ಬಳಿ ಹದ್ದೊಂದು ಮಳೆಯಿಂದ ಒದ್ದಾಡಿತು. ಗಾಳಿಯ ಹೊಡೆತಕ್ಕೆ ಬಿದ್ದ ಹದ್ದು ಒದ್ದೆಯಾಗಿ ಕಂಗಾಲಾಗಿತ್ತು. ಗಣೇಶನ ದೇವಸ್ಥಾನದ ಗರ್ಭಗುಡಿ ಮುಂದೆ ಪರದಾಡಿತು.
ಇತ್ತ ಬಸವನಗುಡಿ, ಗಿರಿನಗರ ಸೇರಿ ಬೆಂಗಳೂರು ದಕ್ಷಿಣ ಭಾಗದಲ್ಲಿ ಅತೀ ಹೆಚ್ಚು ಮರಗಳು ಧರೆಗುರುಳಿವೆ. ಹನುಮಂತನಗರದಲ್ಲಿ ಬೃಹದಾಕಾರದ ಹಳೆಯ ಮರ ಎರಡು ಮನೆಗಳ ಮೇಲೆ ಬಿದ್ದಿದ್ದು ಅದೃಷ್ಠವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ನೆಲಮಂಗಲ ತಾಲೂಕಿನ ನಿಡುವಂದ ಗ್ರಾಮದಲ್ಲಿ ರೈಲ್ವೇ ಹಳಿ ಮೇಲೆ ಮರದ ಕೊಂಬೆಗಳು ಬಿದ್ದಿತ್ತು. ಪರಿಣಾಮ ರಾಣಿ ಚನ್ನಮ್ಮ ಎಕ್ಸ್ ಪ್ರೆಸ್ ರೈಲು ತಡವಾಗಿ ಚಲಿಸಿತ್ತು.
ಜಿಲ್ಲೆಗಳಲ್ಲಿ ನೋಡೋದಾದ್ರೆ ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನಲ್ಲಿ ಆಲಿಕಲ್ಲು ಮಳೆಯಾಗಿದೆ. ಉತ್ತರ ಕನ್ನಡ ಜಿಲ್ಲೆಯ ಕರಾವಳಿ ಭಾಗದಲ್ಲಿ ವರುಣ ಕೃಪೆತೋರಿದ್ದಾನೆ. ಜಿಲ್ಲೆಯ ಬಹುತೇಕ ಭಾಗದಲ್ಲಿ ಮಳೆ ಸುರಿದಿದೆ. ಇದೆಲ್ಲದರ ನಡುವೆ ಇಂದೂ ಕೂಡ ನಗರದಲ್ಲಿ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.