ರಾಜ್ಯದಲ್ಲಿ ಭಾರೀ ಮಳೆ: ನೀರು ನುಗ್ಗಿದ ಮನೆಗಳಲ್ಲಿ ಜಾಗರಣೆ, ರೈತರ ಬೆಳೆ ಜಲಾವೃತ

Public TV
3 Min Read

ಬೆಂಗಳೂರು: ಚಿಕ್ಕಮಗಳೂರು, ಬೆಂಗಳೂರು, ದಾವಣಗೆರೆ, ಹಾವೇರಿ, ರಾಮನಗರ ಸೇರಿದಂತೆ ರಾಜ್ಯದ ವಿವಿಧೆಡೆ ಮಂಗಳವಾರವೂ ವರುಣ ಅಬ್ಬರಿಸಿದ್ದಾನೆ.

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮಂಗಳವಾರ ಸಂಜೆಯಾಗುತ್ತಿದ್ದಂತೆ ಮಳೆ ಸುರಿಯಲು ಆರಂಭಿಸಿತು. ಮೈಸೂರ್ ರೋಡ್, ಮೆಜೆಸ್ಟಿಕ್, ವಿಜಯನಗರ, ಚಾಮರಾಜಪೇಟೆ, ಬಸವನಗುಡಿ, ಯಶವಂತಪುರ, ಗಾಳಿ ಆಂಜನೇಯ ದೇವಾಲಯ ಸೇರಿದಂತೆ ಹಲವೆಡೆ ಮಳೆಯಾಗಿದೆ.

ದಾವಣಗೆರೆ ಜಿಲ್ಲೆಯ ಕೆಲವೆಡೆ ಗುಡುಗು, ಮಿಂಚು ಸಹಿತ ಮಳೆ ಸುರಿದಿದೆ. ದಾವಣಗೆರೆ, ಹರಪ್ಪನಹಳ್ಳಿ, ಜಗಳೂರು ಸೇರಿದಂತೆ ಹಲವೆಡೆ ಉತ್ತಮ ಮಳೆಯಾಗಿದ್ದು, ರೈತರ ಮುಗದಲ್ಲಿ ಮಂದಹಾಸ ಮೂಡಿದೆ.

ಹಾವೇರಿ ಜಿಲ್ಲೆಯ ಹಲವೆಡೆ ಧಾರಕಾರ ಮಳೆಯಾಗಿದೆ. ವರುಣನ ಅಬ್ಬರದಿಂದಾಗಿ ಚರಂಡಿಗಳು ತುಂಬಿ ರಸ್ತೆ ಮೇಲೆ ನೀರು ಹರಿಯಿತು. ಕೆಲವೆಡೆ ಮನೆಗಳಿಗೆ ನೀರು ನುಗ್ಗಿ ಜನ ಜೀವನ ಅಸ್ತವ್ಯಸ್ತವಾಯಿತು. ಕೆಲವು ಭಾಗದಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗಿದೆ.

ಚಿಕ್ಕಮಗಳೂರು:
ಕಾಫಿನಾಡಿನ ಮಲೆನಾಡು ಭಾಗದಲ್ಲಿ ಮತ್ತೆ ವರುಣದೇವ ಅಬ್ಬರಿಸಿ ಬೊಬ್ಬಿರಿಯುತ್ತಿದ್ದು ಜನ ಕಂಗಾಲಾಗಿದ್ದಾರೆ. ಮೂಡಿಗೆರೆ ತಾಲೂಕಿನ ಹೊರನಾಡು ಸುತ್ತಮುತ್ತ ಧಾರಾಕಾರ ಮಳೆ ಸುರಿಯುತ್ತಿದ್ದು, ಎಳ್ಳಕುಂಬ್ರಿ, ಬಲಿಗೆ, ಚಿಕ್ಕನಕೂಡಿಗೆ, ಕವನಹಳ್ಳ ಗ್ರಾಮದಲ್ಲಿ ನೀರಿನ ಅಬ್ಬರಕ್ಕೆ ಜನ ಹೈರಾಣಾಗಿದ್ದಾರೆ. ಮಧ್ಯಾಹ್ನದಿಂದ ಸುರಿದ ಮಳೆಗೆ ಮಲೆನಾಡಿಗರು ಮತ್ತೆ ಆತಂಕಕ್ಕೀಡಾಗಿದ್ದಾರೆ. ಎಡೆ ಬಿಡದೆ ಸುರಿಯುತ್ತಿರುವ ಮಳೆ ನೀರು ಮನೆಗಳಿಗೆ ನುಗ್ಗಲು ಯತ್ನಿಸಿದೆ. ಕೆಸರು ನೀರು ಕಾಫಿ, ಅಡಿಕೆ, ಗದ್ದೆಗಳಿಗೂ ನುಗ್ಗಿ ಹೊಲಗದ್ದೆ, ತೋಟಗಳು ಸಂಪೂರ್ಣ ಜಲಾವೃತವಾಗಿವೆ. ಹೊರನಾಡಿನಿಂದ ಹೊಸಮನೆಗೆ ಹೋಗುವ ಮಿನಿ ಸೇತುವೆ ಸಂಪರ್ಕ ಕಡಿತಗೊಂಡಿದ್ದು ಜನ ಭಯಭೀತರಾಗಿದ್ದಾರೆ. ಮಲೆನಾಡಲ್ಲಿ ಮತ್ತೆ ಸುರಿಯುತ್ತಿರೋದ್ರಿಂದ ಈ ಭಾಗದ ಜನ ಭಯದಿಂದ ಬದುಕುವಂತಾಗಿದೆ.

ರಾಮನಗರ:
ಬೊಂಬೆಗನರಿ ಚನ್ನಪಟ್ಟಣ ತಾಲೂಕಿನ ಜನರೆಲ್ಲ ಕಳೆದ ಹಲವು ದಿನಗಳಿಂದ ಮಳೆಯಿಲ್ಲ ಅಂತ ಕಂಗಾಲಾಗಿದ್ದರು. ಸೋಮವಾರ ಒಂದೇ ರಾತ್ರಿ ಸುರಿದ ಮಳೆಗೆ ಕೆರೆ ಕೋಡಿಗಳು ಬಿದ್ದು ರೈತರ ಜಮೀನಿಗೆ ನೀರು ನುಗ್ಗಿ ರೈತರು ಕಂಗಾಲಾಗಿದ್ದಾರೆ. ಮನೆಗಳಿಗೆ ನೀರು ನುಗ್ಗಿ ನೂರಕ್ಕೂ ಹೆಚ್ಚು ಮನೆಗಳ ಜನ ರಾತ್ರಿಯೆಲ್ಲ ಜಾಗರಣೆ ಮಾಡಿದ್ದಾರೆ.

ಏಕಾಏಕಿ ಗುಡುಗು, ಮಿಂಚು ಸಹಿತ ಸುರಿದ ಜೋರು ಮಳೆ ತಾಲೂಕಿನಾದ್ಯಂತ ಸಾಕಷ್ಟು ಅವಾಂತರಗಳನ್ನು ಸೃಷ್ಟಿಸಿದೆ. ನಗರದ ಹಲವು ಬಡಾವಣೆಗಳ ನಿವಾಸಿಗಳು ಪರದಾಡುವಂತಾಗಿತ್ತು. ಚನ್ನಪಟ್ಟಣ ನಗರದ ಆರ್‍ಎಂಸಿ ಯಾರ್ಡ್, ಇಂದಿರಾ ಕಾಟೇಜ್, ಆನಂದಪುರ ಬಡಾವಣೆಗಳಲ್ಲಿ 50ಕ್ಕೂ ಹೆಚ್ಚಿನ ಮನೆಗಳಿಗೆ ಚರಂಡಿ ನೀರು ನುಗ್ಗಿ, ಮನೆಯಲ್ಲಿದ್ದವರೆಲ್ಲ ಇಡೀ ರಾತ್ರಿ ಪರದಾಟ ಪಡುವಂತೆ ಆಗಿತ್ತು. ಇಡೀ ರಾತ್ರಿ ಮಳೆ ನೀರನ್ನ ಹೊರಹಾಕಲು ಕುಟುಂಬಸ್ಥರು ಮುಂದಾಗಿದ್ದು, ಅಲ್ಲದೆ ಮನೆಯಲ್ಲಿದ್ದ ವಸ್ತುಗಳೆಲ್ಲ ನೀರಿನಿಂದ ಜಲಾವೃತವಾಗಿದ್ದವು.

ಕಳೆದ ವಾರವಷ್ಟೇ ಇದೇ ಪರಿಸ್ಥಿತಿ ಇಲ್ಲಿ ನಿರ್ಮಾಣವಾಗಿತ್ತು. ಹೀಗಾಗಿ ಚನ್ನಪಟ್ಟಣ ಶಾಸಕ, ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಭೇಟಿ, ಪರಿಶೀಲನೆ ನಡೆಸಿ, ಸಮಸ್ಯೆಗಳನ್ನ ಬಗೆಹರಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದರು. ಆದರೆ ಮಾಜಿ ಸಿಎಂ ಮಾತಿಗೂ ಬೆಲೆ ಕೊಡದ ಅಧಿಕಾರಿಗಳು ಈ ಕಡೆ ತಿರುಗಿ ನೋಡಿಲ್ಲ.

ಒಂದೆಡೆ ಚನ್ನಪಟ್ಟಣ ನಗರದಲ್ಲಿ ಮನೆಗಳಿಗೆ ನೀರು ನುಗ್ಗಿದ್ದರೆ, ಮತ್ತೊಂದೆಡೆ ಗ್ರಾಮೀಣ ಭಾಗದಲ್ಲಿ ಮಳೆಯ ನೀರು ರೈತರ ಜಮೀನುಗಳಿಗೆ ನುಗ್ಗಿ ಸಾಕಷ್ಟು ನಷ್ಟವನ್ನುಂಟು ಮಾಡಿವೆ. ಏಕಾಏಕಿ ಭಾರೀ ಪ್ರಮಾಣದಲ್ಲಿ ಮಳೆಯಾಗಿದ್ದರಿಂದ ಎಂಟಕ್ಕೂ ಹೆಚ್ಚು ಕೆರೆಗಳು ತುಂಬಿ ಕೊಡಿ ಬಿದ್ದು, ಕೆರೆಯ ನೀರು ರೈತರ ಜಮೀನಿಗೆ ನುಗ್ಗಿದೆ.

ತಾಲೂಕಿನ ಸುಳ್ಳೇರಿ, ಹೊಡಕೆ ಹೊಸಳ್ಳಿ, ಕುಡ್ಲೂರು, ಮಳೂರು ಪಟ್ಟಣ, ಸಂಕಲಗೆರೆ ಗ್ರಾಮಗಳಲ್ಲಿ ಕೆರೆ ನೀರು ಕೋಡಿ ಬಿದ್ದು, ರೈತರು ನೂರಾರು ಎಕರೆ ಪ್ರದೇಶದಲ್ಲಿ ಬೆಳೆದಿದ್ದ ರಾಗಿ, ಬಾಳೆ, ಟೊಮೆಟೋ, ಮುಸಕಿನ ಜೋಳ, ತೆಂಗಿನ ಗಿಡಗಳು, ಭತ್ತ ಸೇರಿದಂತೆ ಅನೇಕ ಬೆಳೆಗಳು ನಾಶವಾಗಿದೆ. ಇನ್ನೇನೂ ಬೆಳೆಗಳು ಕೈಗೆ ಸೇರಲಿವೆ ಎಂದುಕೊಂಡಿದ್ದ ರೈತನ ಆಸೆಗಳೆಲ್ಲ ಒಂದೇ ರಾತ್ರಿಯಲ್ಲಿ ಮಳೆಯ ನೀರಿನ ಜೊತೆ ಕೊಚ್ಚಿ ಹೋಗಿವೆ. ಇಷ್ಟೆಲ್ಲ ಆನಾಹುತ ಸಂಭವಿಸಿದರೂ ಜಿಲ್ಲೆಯಲ್ಲಿ ಯಲ್ಲೋ ಅಲರ್ಟ್ ಇದ್ರೂ ಕೂಡ ಯಾವೊಬ್ಬ ಅಧಿಕಾರಿಗಳು ಇತ್ತ ತಿರುಗಿ ನೋಡಿಲ್ಲ. ಇದು ರೈತರ ಆಕ್ರೋಶಕ್ಕೂ ಕಾರಣವಾಗಿದೆ.

Share This Article
Leave a Comment

Leave a Reply

Your email address will not be published. Required fields are marked *