ಕೊಡಗು ಜಿಲ್ಲೆಯಲ್ಲಿ 5 ದಿನ ಆರೆಂಜ್ ಅಲರ್ಟ್

Public TV
1 Min Read

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಜುಲೈ 18ರಿಂದ 22ರ ವರೆಗೆ ಭಾರೀ ಮಳೆಯಾಗುವ ಸಾಧ್ಯತೆ ಇದೆ. ಹೀಗಾಗಿ ಜಿಲ್ಲೆಯಾದ್ಯಂತ 5 ದಿನಗಳ ಕಾಲ ಆರೆಂಜ್ ಅಲರ್ಟ್ ಘೋಷಿಸಲಾಗಿದೆ.

ಈ ಕುರಿತು ಪ್ರಕಟಣೆ ಹೊರಡಿಸಿರುವ ಕೊಡಗು ಜಿಲ್ಲಾಧಿಕಾರಿ ಅನೀಸ್ ಕಣ್ಮನಿ ಜಾಯ್ ಅವರು, ಜುಲೈ 18ರಿಂದ 5 ದಿನಗಳ ಕಾಲ 115.6 ಮೀ.ಮೀ.ನಿಂದ 204.4 ಮೀ.ಮೀ. ಮಳೆ ಬೀಳುವ ಸಾಧ್ಯತೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಹೀಗಾಗಿ ಸಾರ್ವಜನಿಕರು ಹಾಗೂ ಪ್ರವಾಸಿಗರು ಎಚ್ಚರಿಕೆಯಿಂದ ಇರಲು ಜಿಲ್ಲಾಡಳಿತ ಮನವಿ ಮಾಡುತ್ತದೆ. ಪ್ರಕೃತಿ ವಿಕೋಪಕ್ಕೆ ಸಂಬಂಧಿಸಿದಂತೆ ಯಾವುದೇ ಸಮಸ್ಯೆಗಳಿದ್ದರೆ ನಮ್ಮನ್ನು ಸಂಪರ್ಕಿಸಿ ಎಂದು ತಿಳಿಸಿದ್ದಾರೆ.

ಕೊಡಗು ಜಿಲ್ಲೆಯಲ್ಲಿ ಕಳೆದ ವರ್ಷ ವರುಣನ ಅಬ್ಬರಕ್ಕೆ ಅನೇಕರು ಮನೆ, ತೋಟ ಕಳೆದುಕೊಂಡಿದ್ದರು. ಅಷ್ಟೇ ಅಲ್ಲದೆ ಭಾರೀ ಪ್ರಮಾಣದ ಪ್ರಾಣಹಾನಿ ಸಂಭವಿಸಿತ್ತು. ಹೀಗಾಗಿ ಕೊಡಗು ಜಿಲ್ಲಾಡಳಿತವು ಈ ಬಾರಿ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುತ್ತಿದೆ.

ದೇಶಾದ್ಯಂತ ಮುಂಗಾರು ಚುರುಕಾಗಿದ್ದು ಹಲವೆಡೆ ಪ್ರವಾಹ ಸೃಷ್ಟಿಯಾಗಿದೆ. ಅಸ್ಸಾಂ, ಬಿಹಾರದಲ್ಲಿ ಈಗಾಗಲೇ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದ್ದು 40 ಲಕ್ಷ ಮಂದಿ ಅಪಾಯದಲ್ಲಿದ್ದಾರೆ. ಕಾಜಿರಂಗಾ ರಾಷ್ಟ್ರೀಯ ಉದ್ಯಾನವನದ ಶೇ. 95 ಭಾಗ ಹಾನಿಗೊಳಗಾಗಿದೆ. ಸಾವಿನ ಸಂಖ್ಯೆ 15ಕ್ಕೆ ಏರಿಕೆಯಾಗಿದ್ದು, ಈ ತನಕ 43 ಲಕ್ಷ ಜನರು ಕಷ್ಟಕ್ಕೆ ಸಿಲುಕಿದ್ದಾರೆ. 33 ಜಿಲ್ಲೆಗಳಲ್ಲಿ 31 ಜಿಲ್ಲೆ ಪ್ರವಾಹದಿಂದ ಹಾನಿಗೀಡಾಗಿವೆ.

ಪರಿಸ್ಥಿತಿ ನಿರ್ವಹಿಸಲು ಕೇಂದ್ರ ಸರ್ಕಾರ ಎಲ್ಲಾ ರೀತಿಯ ನೆರವು ನೀಡಲಿದೆ ಎಂದು ಮೋದಿ ಭರವಸೆ ನೀಡಿದ್ದಾರೆ. ಸಾವಿರಕ್ಕೂ ಹೆಚ್ಚು ಸೈನಿಕರು ರಕ್ಷಣಾ ಕಾರ್ಯದಲ್ಲಿ ತೊಡಗಿದ್ದಾರೆ. ಮಣಿಪುರ, ಮಿಜೋರಾಂನಲ್ಲೂ ಪ್ರವಾಹ ಸ್ಥಿತಿ ಮುಂದುವರಿದಿದೆ. ದೆಹಲಿ, ಹರ್ಯಾಣದಲ್ಲೂ ಭಾರೀ ಮಳೆಯಾಗ್ತಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ರಸ್ತೆಗಳೆಲ್ಲಾ ಜಲಾವೃತಗೊಂಡಿದೆ. ಕೆಲವೇ ಗಂಟೆಗಳಲ್ಲಿ ಕರ್ನಾಟಕ, ಹೈದರಾಬಾದ್ ಸೇರಿದಂತೆ ಹಲವು ಕಡೆ ಮುಂಗಾರು ಚುರುಕುಗೊಳ್ಳಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.

Share This Article
Leave a Comment

Leave a Reply

Your email address will not be published. Required fields are marked *