ಮಹಾಮಳೆಗೆ ಬೆಚ್ಚಿದ ಯಾದಗಿರಿ- ನೀಲಕಂಠರಾಯನಗುಡ್ಡದಲ್ಲಿ ಮಲೇರಿಯಾ ಭೀತಿ

Public TV
1 Min Read

ಯಾದಗಿರಿ: ಎಲೆಕ್ಷನ್ ಬಂದಾಗ ಎಂಥಾ ಕುಗ್ರಾಮಕ್ಕೂ ಭೇಟಿ ಕೊಡೋ ಜನಪ್ರತಿನಿಧಿಗಳು, ಅದೇ ಜನರು ತೀರ ಸಂಕಷ್ಟದಲ್ಲಿದ್ದಾಗ ಹೇಗೆ ಕೈಕೊಡ್ತಾರೆ ಅನ್ನೋದಕ್ಕೆ ಈ ಸ್ಟೋರಿನೇ ಸಾಕ್ಷಿ.

ಉಕ್ಕಿ ಹರಿಯುತ್ತಿರುವ ಕೃಷ್ಣೆ, ಜೀವ ಕೈಲಿಡ್ಕೊಂಡು ನದಿಯಲ್ಲಿ ಈಜಿ ದಡ ಸೇರಲೇಬೇಕಾದ ಪರಿಸ್ಥಿತಿ. ಇದು ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ನೀಲಕಂಠರಾಯನಗಡ್ಡಿ ಗ್ರಾಮಕ್ಕೆ ಬಂದಿರೋ ದುರ್ಗತಿ.

ಬಸವಸಾಗರ ಜಲಾಶಯದಿಂದ 45 ಸಾವಿರ ಕ್ಯೂಸೆಕ್ ನೀರು ನದಿಗೆ ಬಿಟ್ಟಿರೋ ಪರಿಣಾಮ ಗ್ರಾಮ ದ್ವೀಪವಾಗಿದೆ. ಇದರ ಜೊತೆಗೆ ರೋಗಗಳು ಕಾಣಿಸಿಕೊಳ್ತಿವೆ. ಜ್ವರದಿಂದ ಬಳಲುತ್ತಿದ್ದ ಮೂವರನ್ನ ಗ್ರಾಮಸ್ಥರೇ ಈಜುಕಾಯಿ ಕಟ್ಟಿಕೊಂಡು ದಡ ಸೇರಿಸಿದ್ದಾರೆ. ದುರಂತ ಅಂದರೆ ಜಿಲ್ಲಾಡಳಿತವಾಗಲೀ ಅಥವಾ ಜನಪ್ರತಿನಿಧಿಗಳಾಗಲೀ ತಾತ್ಕಾಲಿಕವಾಗಿಯಾದ್ರೂ ಬೋಟ್ ವ್ಯವಸ್ಥೆ ಮಾಡಿಲ್ಲ.

ಜ್ವರದಿಂದ ಬಳಲುತ್ತಿರುವವರ ಜೊತೆ ಪಬ್ಲಿಕ್ ಟಿವಿ ತಂಡ ಕೂಡ ರಾಯಚೂರು ಜಿಲ್ಲೆಯ ಲಿಂಗಸೂಗುರ ತಾಲೂಕಿನ ಗುಡಗುಂಟಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ಕೊಡ್ತು. ವೈದ್ಯರು ಆರೋಗ್ಯ ತಪಾಸಣೆ ಮಾಡಿದ ನಂತರ ಮೂರು ವರ್ಷದ ಮಗು ಭೀಮಣ್ಣನಿಗೆ ಮಲೇರಿಯಾ ಬಾಧಿಸಿರೋದು ದೃಢಪಟ್ಟಿದೆ. ಇನ್ನು ಅಮರವ್ವ, ದುರ್ಗಮ್ಮ ಆಸ್ಪತ್ರೆಯಲ್ಲಿ ಚಿಕಿತ್ಸೆ ತೆಗೆದುಕೊಂಡಿದ್ದಾರೆ.

ಚುನಾವಣೆ ಬಂದಾಗ ಮಾತ್ರ ಕೃಷ್ಣಾ ನದಿಗೆ ಅಡ್ಡಲಾಗಿ ಸೇತುವೆ ನಿರ್ಮಿಸ್ತೇವೆ ಅಂತ ಭರವಸೆ ಕೊಡೋ ಜನಪ್ರತಿನಿಧಿಗಳು ಇವರ ಸಮಸ್ಯೆಗೆ ಸ್ಪಂದಿಸಬೇಕಿದೆ.

Share This Article
Leave a Comment

Leave a Reply

Your email address will not be published. Required fields are marked *