Rain Alert | ರಾಜ್ಯದಲ್ಲಿ ಮುಂದಿನ 5 ದಿನ ಭಾರಿ ಮಳೆ – ಮಲೆನಾಡು ಭಾಗದಲ್ಲಿ ರೆಡ್‌ ಅಲರ್ಟ್‌

Public TV
3 Min Read

– ಉತ್ತರ ಕನ್ನಡದ 11 ತಾಲೂಕಿನಲ್ಲಿ ಶಾಲೆಗಳಿಗೆ ರಜೆ

ಬೆಂಗಳೂರು: ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಸಾಧ್ಯತೆ ಹಿನ್ನೆಲೆ, ರಾಜ್ಯದಲ್ಲಿ ಮುಂದಿನ 5 ದಿನ ಭಾರಿ ಮಳೆ ಮುನ್ಸೂಚನೆ (Rain Alert) ನೀಡಲಾಗಿದೆ.

ಕರಾವಳಿಯ ಮೂರು ಜಿಲ್ಲೆಗಳಿಗೆ ಭಾರಿ ಮಳೆ ಸಾಧ್ಯತೆಯಿದ್ದು, ಕರಾವಳಿ ಭಾಗದ ದಕ್ಷಿಣ ಕನ್ನಡ (Dakshina Kannada), ಉಡುಪಿ, ಉತ್ತರ ಕನ್ನಡ ಹಾಗೂ ಮಲೆನಾಡು ಭಾಗದ ಶಿವಮೊಗ್ಗ, ಚಿಕ್ಕಮಗಳೂರು, ಹಾಸನ ಜಿಲ್ಲೆಗಳಿಗೆ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ. ಬೀದರ್, ಕಲಬುರಗಿ, ಯಾದಗಿರಿ, ವಿಜಯಪುರ, ರಾಯಚೂರು, ಬೆಳಗಾವಿ (Belagavi), ಧಾರವಾಡ, ಹಾವೇರಿ, ಗದಗ, ಬಾಗಲಕೋಟೆ, ಕೊಪ್ಪಳ ಜಿಲ್ಲೆಗಳಿಗೆ ಎರಡು ದಿನ ಆರೆಂಜ್ ಅಲರ್ಟ್ ಘೋಷಿಸಲಾಗಿದೆ.

ಸದ್ಯ ಬೆಂಗಳೂರಲ್ಲಿ ಮೂರು ದಿನ ಸಾಧಾರಣ ಮಳೆಯಾಗುವ ಸಾಧ್ಯತೆ ಬಗ್ಗೆ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಭಾರಿ ಮಳೆ ಹಿನ್ನೆಲೆ ದಕ್ಷಿಣ ಕನ್ನಡ, ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡು ತಾಲೂಕು ಹೊರತು ಪಡಿಸಿ 11 ತಾಲೂಕಿನ ಅಂಗನವಾಡಿ, ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳಿಗೆ ಇಂದು ರಜೆ ಘೋಷಣೆ ಮಾಡಲಾಗಿದೆ.

ಶಿವಮೊಗ್ಗದಲ್ಲಿ ಮಳೆ ಅಲರ್ಟ್ ಹಿನ್ನೆಲೆ ಜಿಲ್ಲೆಯ ಅಂಗನವಾಡಿ, ಶಾಲೆ ಮತ್ತು ಪಿಯುಸಿ ಮತ್ತು ಪದವಿ ಕಾಲೇಜಿಗೆ ರಜೆ ಘೋಷಿಸಲಾಗಿದೆ.

ಕೊಡಗಿನಲ್ಲಿ ನಿರಂತರ ಮಳೆ
ಇನ್ನೂ ಕೊಡಗು ಜಿಲ್ಲೆಯಲ್ಲಿ ಬಿಟ್ಟೂ ಬಿಡದೇ ಮಳೆ ಸುರಿಯುತ್ತಿದೆ. ಮಳೆಯಿಂದಾಗಿ ಜಿಲ್ಲೆಯ ನಾನಾ ಭಾಗದಲ್ಲಿ ಅವಾಂತರ ಮುಂದುವರಿದಿದ್ದು, ಹಲವೆಡೆ ರಸ್ತೆ ಸಂಪರ್ಕ ಕಡಿತಗೊಂಡಿದೆ. ಬೃಹತ್‌ ಮರಗಳು, ವಿದ್ಯುತ್‌ ಕಂಬಗಳು, ಧರಾಶಾಹಿಯಾಗಿವೆ.

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೀದರ್‌ನಲ್ಲೂ ಮಳೆಯ ಅವಾಂತರ
ಸತತವಾಗಿ ಸುರಿಯುತ್ತಿರುವ ಧಾರಾಕಾರ ಮಳೆಗೆ ಗಡಿ ಜಿಲ್ಲೆ ಬೀದರ್‌ನಲ್ಲಿ ಬಾರಿ ಅವಾಂತರಗಳು ಸೃಷ್ಟಿಯಾಗಿದೆ. ಜಿಲ್ಲೆಯ ಸಾವಿರಾರು ಎಕರೆಯಲ್ಲಿ ಬೆಳೆದ ವಿವಿಧ ಬೆಳೆಗಳು ಹಾಗೂ ಹಲವು ಗ್ರಾಮಗಳ ರಸ್ತೆ ಸಂಪರ್ಕ ಕಟ್ ಆಗಿದೆ. ಬೀದರ್ ತಾಲೂಕಿನ ಬುಧೇರಾ ಗ್ರಾಮದ ಸುತ್ತಮುತ್ತ ಸಾವಿರಾರು ಎಕರೆಯಲ್ಲಿ ಬೆಳೆದಿದ್ದ ಸೋಯಾ, ಕಬ್ಬು, ಉದ್ದು ಹಾಗೂ ತೊಗರಿ ಸೇರಿದಂತೆ ವಿವಿಧ ಬೆಳೆಗಳು ಸಂಪೂರ್ಣವಾಗಿ ನೀರು ಪಾಲಾಗಿದೆ. ಟಿ ಮಿರಜಾಪೂ ಟು ಬುಧೇರಾ ಗ್ರಾಮ ಸೇರಿದಂತೆ ಕಾಜಾನಗರ, ಚಟ್ನಳಿ, ಸಾತೋಳಿ, ಭರಿದಾಬಾದಿ, ಕಾಡವಾದಿ ಹಳ್ಳಿಗಳ ರಸ್ತೆ ಸಂಪರ್ಕ ಸಂಪೂರ್ಣವಾಗಿ ಕಟ್ ಆಗಿದೆ. ಪ್ರತಿ ಬಾರಿಯೂ ಮಳೆ ಬಂದಾಗ ಇದೇ ಪರಿಸ್ಥಿತಿ ನಿರ್ಮಾಣವಾಗುತ್ತೆ.. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ಎಷ್ಟೇ ಮಾಹಿತಿ ನೀಡಿದ್ರು ಸ್ಪಂದಿಸುತ್ತಿಲ್ಲ ಅಂತ ಜನರು ಹಿಡಿಶಾಪ ಹಾಕಿದ್ದಾರೆ.

ಕಲಬುರಗಿ: ಬೆಣ್ಣೆತೋರಾ ಜಲಾಶಯ ಭರ್ತಿ
ಕಲಬುರಗಿ ಜಿಲ್ಲೆಯಲ್ಲಿ ಕಳೆದ ಒಂದು ವಾರದಿಂದ ಸತತ ಮಳೆ ಹಿನ್ನೆಲೆ ಜಿಲ್ಲೆಯ ಬೆಣ್ಣೆತೋರಾ ಜಲಾಶಯ ಭರ್ತಿಯಾಗಿದ್ದು, ಇದರ ಪರಿಣಾಮ ಅಪಾರ ನದಿಗೆ ಅಪಾರ ಪ್ರಮಾಣದಲ್ಲಿ ನೀರು ಬಿಟ್ಟ ಹಿನ್ನಲೆ ನದಿ ದಡದ ಜಮೀನುಗಳಲ್ಲಿನ ಬೆಳೆಗಳು ನೀರು ಪಾಲಾಗಿದೆ. ಜಿಲ್ಲೆಯ ಕಾಳಗಿ ತಾಲೂಕಿನ ಹೆಬ್ಬಾಳ ಗ್ರಾಮದ ನೂರಾರು ಎಕರೆ ಪ್ರದೇಶದಲ್ಲಿ ಬೆಳೆದ ಹೆಸರು ಬೆಳೆ ಸಂಪೂರ್ಣವಾಗಿ ಬುಡ ಸಮೇತ ನೆಲಕಚ್ಚಿದೆ. ಅದೇ ರೀತಿ ಎಳ್ಳು ಸಹ ಜಮೀನಿನಲ್ಲಿ ನೀರಿನ ರಭಸಕ್ಕೆ ಕಿತ್ತು ಹೋದ್ರೆ, ತೊಗರಿಯ ಬುಡದಲ್ಲಿ ನೀರು ನಿಂತು ನೆಟ್ಟೆ ರೋಗಕ್ಕೆ ತುತ್ತಾಗಿವೆ. ಹೀಗಿದ್ರು ಸಹ ಇಲ್ಲಿಯವರೆಗೆ ಕೃಷಿ ಇಲಾಖೆ ಅಧಿಕಾರಿಗಳು ಸಹ ಜಮೀನುಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿಲ್ಲ ಅಂತ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

weather

ಹಾಸನದಲ್ಲೂ ವರಣನ ಆರ್ಭಟ ಜೋರು
ಹಾಸನ ಜಿಲ್ಲೆಯ ಮಲೆನಾಡು ಭಾಗದಲ್ಲಿ ವರುಣನ ಅಬ್ಬರಕ್ಕೆ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಮೊನ್ನೆಯಿಂದ ಸುರಿಯುತ್ತಿರುವ ಭಾರಿ ಮಳೆಗೆ ರಸ್ತೆಯ ತುಂಬೆಲ್ಲ ನೀರು ಹರಿಯುತ್ತಿದೆ. ಹಲವು ಕಡೆಗಳಲ್ಲಿ ಭೂಕುಸಿತ ಉಂಟಾಗಿದ್ದು, ಬಿರುಗಾಳಿ ಸಹಿತ ಮಳೆಯ ಅಬ್ಬರಕ್ಕೆ ಮರಗಳು ನೆಲಕ್ಕುರುಳಿವೆ. ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಜನರು ಮನೆಯಿಂದ ಹೊರಬರದ ಪರಿಸ್ಥಿತಿ ನಿರ್ಮಾಣವಾಗಿದೆ. ಸಕಲೇಶಪುರ ತಾಲೂಕಿನ ಕಡಗರವಳ್ಳಿ ಗ್ರಾಮದಲ್ಲಿ ಗುಡ್ಡ, ಮರಗಳು ಧರಾಶಾಹಿಯಾಗಿದ್ದು ಸ್ಥಳಕ್ಕೆ ಎಸಿ ರಾಜೇಶ್, ತಹಸೀಲ್ದಾರ್ ಸುಪ್ರಿತಾ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಹಾಗೇ ಗುಡ್ಡ ಕುಸಿತದಿಂದ ಕಡಗರವಳ್ಳಿ, ಬಾಚೀಹಳ್ಳಿ, ವಳಲಹಳ್ಳಿ, ಹೊಂಗಡಹಳ್ಳ ಗ್ರಾಮಗಳಿಗೆ ರಸ್ತೆ ಸಂಪರ್ಕ ಕಡಿತಗೊಂಡಿದೆ. ಮಳೆ ಮುಂದುವರೆದಿದ್ದು ಮತ್ತೆ ಗುಡ್ಡ ಕುಸಿಯುವ ಆತಂಕ ಎದುರಾಗಿದೆ.

Share This Article