ಶೃಂಗೇರಿಯಲ್ಲಿ ವರುಣಾರ್ಭಟ – ರಾಷ್ಟ್ರೀಯ ಹೆದ್ದಾರಿ 169ರಲ್ಲಿ ಭಾರೀ ಪ್ರಮಾಣದಲ್ಲಿ ಗುಡ್ಡ ಕುಸಿತ

Public TV
1 Min Read

ಚಿಕ್ಕಮಗಳೂರು: ಮಲೆನಾಡು ಭಾಗದಲ್ಲಿ ಗಾಳಿ, ಮಳೆ ಅಬ್ಬರ ಮುಂದುವರೆದಿದ್ದು, ಧಾರಾಕಾರ ಗಾಳಿ, ಮಳೆಗೆ ರಾಷ್ಟ್ರೀಯ ಹೆದ್ದಾರಿ 169ರಲ್ಲಿ ಭಾರೀ ಪ್ರಮಾಣದಲ್ಲಿ ಗುಡ್ಡ ಕುಸಿದಿರುವ ಘಟನೆ ಚಿಕ್ಕಮಗಳೂರು (Chikkamagaluru) ಜಿಲ್ಲೆ ಶೃಂಗೇರಿ (Sringeri) ತಾಲೂಕಿನ ನೆಮ್ಮಾರು ಗ್ರಾಮದ ಬಳಿ ನಡೆದಿದೆ.

ಭಾರೀ ಪ್ರಮಾಣದಲ್ಲಿ ಗುಡ್ಡ ಕುಸಿದಿರುವ (Land Slide) ಪರಿಣಾಮ ಶೃಂಗೇರಿ-ಮಂಗಳೂರು ಸಂಚಾರ ಕೂಡ ಸಂಪೂರ್ಣ ಸ್ಥಗಿತಗೊಂಡಿದೆ. ಪೊಲೀಸ್, ಪಂಚಾಯಿತಿ ಅಧಿಕಾರಿಗಳು ಹಾಗೂ ಸ್ಥಳೀಯರು ಸುರಿಯುತ್ತಿರುವ ಮಳೆ ಮಧ್ಯೆಯೇ ರಸ್ತೆಗೆ ಉರುಳಿರುವ ಮಣ್ಣಿನ ತೆರವು ಕಾರ್ಯಕ್ಕೆ ಮುಂದಾಗಿದ್ದಾರೆ. ಭಾರೀ ಪ್ರಮಾಣದಲ್ಲಿ ಮಣ್ಣು ಕುಸಿಯದಂತೆ ರಸ್ತೆ ಬದಿಗೆ ಕಟ್ಟಿದ್ದ ಕಬ್ಬಿಣದ ತಡೆಗೋಡೆಗಳು ಕುಸಿದು ಬಿದ್ದಿದೆ. ಇದನ್ನೂ ಓದಿ: ರಾಜ್ಯದಲ್ಲಿ ಇನ್ನೂ ಮೂರು ದಿನಗಳವರೆಗೆ ಭಾರೀ ಮಳೆ ಮುನ್ಸೂಚನೆ

ಮಳೆ ಜೊತೆ ಗಾಳಿ ಕೂಡ ವೇಗವಾಗಿ ಬೀಸುತ್ತಿರುವುದರಿಂದ ಅಲ್ಲಲ್ಲಿ ವಿದ್ಯುತ್ ಕಂಬಗಳು ಮುರಿದು ಬಿದ್ದಿವೆ. ರಾತ್ರಿ ಇಡೀ ನಿರಂತರವಾಗಿ ಮಳೆಯಾಗುತ್ತಿರುವುದರಿಂದ ಶೃಂಗೇರಿಯಲ್ಲಿ ನಾನಾ ಅವಾಂತರಗಳು ಸೃಷ್ಟಿಯಾಗಿವೆ. ಇದನ್ನೂ ಓದಿ: ದೇವಿಮನೆ ಘಟ್ಟದಲ್ಲಿ ಗುಡ್ಡ ಕುಸಿತ – ವಾಹನ ಸಂಚಾರ ಸಂಪೂರ್ಣ ಬಂದ್

ಈ ವರ್ಷ ಜನವರಿಯಿಂದಲೂ ನಿರಂತರವಾಗಿ ಮಳೆಯಾಗಿದ್ದು, ಭೂಮಿಯ ತೇವಾಂಶ ಕೂಡ ಹೆಚ್ಚಾಗಿದೆ. ಮಳೆ ಪ್ರಮಾಣ ಮತ್ತಷ್ಟು ಹೆಚ್ಚಾದರೆ ಇನ್ನಷ್ಟು ಭೂಮಿ ಕುಸಿಯುವ ಆತಂಕ ಎದುರಾಗಿದ್ದು, ವಾಹನ ಚಾಲಕರು ಬದಲಿ ಮಾರ್ಗವನ್ನು ಬಳಸಬೇಕಿದೆ. ಜಿಲ್ಲೆಯ ವಿವಿಧ ಭಾಗಗಳಲ್ಲಿ ಮಳೆ ಮುಂದುವರೆದಿದೆ.

ಶನಿವಾರ ಕೂಡ ಚಂದ್ರದ್ರೋಣ ಪರ್ವತ ಶ್ರೇಣಿಯ ಕವಿಕಲ್ ಗಂಡಿ ಬಳಿ ಸಣ್ಣ ಪ್ರಮಾಣದಲ್ಲಿ ಭೂಕುಸಿತ ಉಂಟಾಗಿತ್ತು. ಚಂದ್ರದ್ರೋಣ ಪರ್ವತಗಳ ಸಾಲಿನಲ್ಲಿ ಮಳೆ ನಿರಂತರವಾಗಿದ್ದು, ಮತ್ತಷ್ಟು ಅನಾಹುತ ಸಂಭವಿಸುವ ಆತಂಕ ಸ್ಥಳೀಯರನ್ನ ಕಾಡುತ್ತಿದೆ.

Share This Article