ಸಿಲಿಕಾನ್ ಸಿಟಿಯಲ್ಲಿ ವರುಣನ ಅರ್ಭಟ: ಕೆರೆಗಳಂತಾದ ರಸ್ತೆಗಳು

Public TV
1 Min Read

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಮತ್ತೆ ವರುಣನ ಅರ್ಭಟ ಮುಂದುವರೆದಿದ್ದು ತಡರಾತ್ರಿವರೆಗೂ ಸುರಿದ ಮಳೆಗೆ ರಸ್ತೆಗಳೆಲ್ಲಾ ಕೆರೆಗಳಂತಾಗಿದೆ. ಶಾಂತಿನಗರ, ಡಬ್ಬಲ್ ರೋಡ್, ಮೆಜೆಸ್ಟಿಕ್, ರಾಜಾಜಿನಗರ, ಯಶವಂತಪುರ, ಪೀಣ್ಯ ಸೇರಿದಂತೆ ಬಹುತೇಕ ಕಡೆಗಳಲ್ಲಿ ಭಾರೀ ಮಳೆಯಾಗಿದೆ. ವರುಣನ ಅಬ್ಬರಕ್ಕೆ ನಗರದ ಬಹುತೇಕ ರಸ್ತೆಗಳು ಕೆರೆಗಳಾಂತಾಗಿದೆ. ಕೋರಮಂಗಲದ ರಸ್ತೆಗಳು ಸಂಪೂರ್ಣ ಜಲಾವೃತಗೊಂಡಿದ್ದು ವಾಹನ ಸವಾರರು ಪರದಾಡುವಂತಾಯಿತು.

ನಗರದಲ್ಲಿ ಮತ್ತೊಮೆ ಮಳೆ ತನ್ನ ಆರ್ಭಟ ತೋರಿಸಿದೆ. ಮೊನ್ನೆಯಷ್ಟೆ ನಾಲ್ವರನ್ನು ಬಲಿ ಪಡೆದ ಮಳೆ ಶನಿವಾರ ತಡರಾತ್ರಿ ಹಾಗೂ ಭಾನುವಾರ ಬೆಳಗಿನ ಜಾವದವರೆಗೂ ಎಡಬಿಡದೆ ಸುರಿದಿದೆ. ಇನ್ನೂ ನಾಯಂಡಹಳ್ಳಿ ಬಳಿ ವಿಪರೀತ ಮಳೆ ಬಂದ ಕಾರಣ ಮನೆಗಳಿಗೆ ನೀರು ನುಗ್ಗಿದ್ದರಿಂದ ರಾತ್ರಿಯಿಡೀ ಜಾಗರಣೆ ನಡೆಸುವಂತಾಗಿತ್ತು. ತಗ್ಗು ಪ್ರದೇಶವಾದ ಕಾರಣ ನೀರು ಮನೆಗೆ ನುಗ್ಗಿದ್ದು ಮನೆಯಲ್ಲಿದ್ದ ವಸ್ತುಗಳೆಲ್ಲವೂ ನಾಶವಾಗಿದೆ. ಇನ್ನು ಈ ಸಂಬಂಧದ ಬಗ್ಗೆ ಬಿಬಿಎಂಪಿ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಬೆಂಗಳೂರಲ್ಲಿ ಮುಂದುವರೆದ ವರುಣನ ಆರ್ಭಟ ಶನಿವಾರ ರಾತ್ರಿ ಸುರಿದ ಧಾರಾಕಾರ ಮಳೆಗೆ ಸಿಲಿಕಾನ್ ಸಿಟಿ ಮುಳುಗಿದೆ. ನೆಲಮಂಗಲ ರಸ್ತೆ, ಮೈಸೂರು ರೋಡ್ ಸಂಪೂರ್ಣ ಜಲಾವೃತಗೊಂಡಿದ್ದು ಮೈಸೂರು ರೋಡ್ ಫ್ಲೆಓವರ್ ಬಳಿ ಸಾರಿಗೆ ಬಸ್ ಹಾಗೂ ಲಾರಿ ಮುಳುಗಿತ್ತು. ಮೈಸೂರು ರಸ್ತೆಯ ಕೆಂಗೇರಿ ಬಸ್ ನಿಲ್ದಾಣದ ಬಳಿ ಹೆದ್ದಾರಿ ಕೆರೆಗಳಂತೆ ಆಗಿದೆ. ಎರಡು ಬಸ್‍ಗಳು ಅರ್ಧಭಾಗ ಮುಳುಗಿತ್ತು. ರಾಜರಾಜೇಶ್ವರಿ ನಗರದ ಆರ್ಚ್ ವರೆಗೂ ಟ್ರಾಫಿಕ್ ಜಾಮ್ ಹಾಗೂ ವಾಹನಗಳು ನಿಂತಲ್ಲೇ ನಿಂತಿತ್ತು. ಎರಡೂ ಬದಿಯಲ್ಲಿ ಟ್ರಾಫಿಕ್ ಜಾಮ್ ಆಗಿತ್ತು.

ಮೈಸೂರು ರಸ್ತೆ ಸಂಪೂರ್ಣ ಜಲಾವೃತ ಆಗಿದ್ದು ಮೆಟ್ರೋ ಕಾಮಗಾರಿ ನಡೆಯುತ್ತಿರುವ ಹಿನ್ನಲೆಯಲ್ಲಿ ರಸ್ತೆಗೆ ರಾಜಕಾಲುವೆ ನೀರು ನುಗಿತ್ತು. ಮೈಸೂರ್ ರೋಡ್, ಆರ್ ಆರ್ ನಗರ, ಆರ್‍ಟಿಓ ರೋಡ್‍ಗಳಲ್ಲಿ ಬಿಎಂಟಿಸಿ ಬಸ್‍ಗಳು ನೀರಿನಲ್ಲಿ ಮುಳುಗಿತ್ತು. ಮೈಸೂರು ರೋಡ್ ಸಂಚಾರ ಸಂಪೂರ್ಣ ಬಂದ್ ಆಗಿತ್ತು ಹಾಗೂ ಕೋರಮಂಗಲ ಮುಖ್ಯರಸ್ತೆಯಲ್ಲಿ ಸಂಪೂರ್ಣ ಜಲಾವೃತ ಆಗಿತ್ತು.

Share This Article
Leave a Comment

Leave a Reply

Your email address will not be published. Required fields are marked *