ರಾಜ್ಯದ ಹಲವೆಡೆ ವರುಣನ ಅಬ್ಬರ- ಸಿಡಿಲಿಗೆ ಯುವಕ ಬಲಿ, ಮನೆಗಳಿಗೆ ನುಗ್ಗಿದ ನೀರು

Public TV
2 Min Read

ಬೆಂಗಳೂರು: ರಾಜ್ಯದ ವಿವಿಧೆಡೆ ರಾತ್ರಿ ಭಾರೀ ಮಳೆ ಸುರಿದಿದ್ದು, ರಾಯಚೂರಿನಲ್ಲಿ ಸಿಲಿಗೆ ಯುವಕ ಬಲಿಯಾಗಿದ್ದಾನೆ. ದಾವಣಗೆರೆಯಲ್ಲಿ ಭಾರೀ ಮಳೆಯಿಂದಾಗಿ ಮನೆಗಳಿಗೆ ನೀರು ನುಗ್ಗಿದ್ದು, ಕಾರ್ಮಿಕರು ಕಂಗಾಲಾಗಿದ್ದಾರೆ. ಕಲಬುರಗಿಯಲ್ಲಿ ಅಪಾರ ಪ್ರಮಾಣದ ಬೆಳೆ ನಾಶವಾಗಿದೆ.

ರಾಯಚೂರು ಜಿಲ್ಲೆಯ ವಿವಿಧೆಡೆ ಭಾರೀ ಮಳೆಯಾಗಿದ್ದು, ಸಿರವಾರ ತಾಲೂಕಿನ ಚೌಧರಿ ಕ್ಯಾಂಪ್ ನಲ್ಲಿ ನಿನ್ನೆ ರಾತ್ರಿ ಸಿಡಿಲಿಗೆ ಯುವಕ ಬಲಿಯಾಗಿದ್ದಾನೆ. ಚೌಧರಿ ಕ್ಯಾಂಪ್ ನ ಪೃಥ್ವಿ (24) ಸಾವನ್ನಪ್ಪಿದ ಯುವಕ. ಹಾಲು ಮಾರಾಟ ಮಾಡಿ ಬೈಕ್ ನಲ್ಲಿ ಮನೆಗೆ ವಾಪಸ್ಸಾಗುವ ವೇಳೆ ಘಟನೆ ಸಂಭವಿಸಿದೆ. ಸಿರವಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ದಾವಣಗೆರೆಯಲ್ಲಿ ಸುರಿದ ರಾತ್ರಿ ಮಳೆಯಿಂದಾಗಿ ಮನೆಗಳಿಗೆ ನೀರು ನುಗ್ಗಿದೆ. ಹೀಗಾಗಿ ಕೂಲಿ ಕಾರ್ಮಿಕರು ರಾತ್ರಿಯಿಡೀ ಜಾಗರಣೆ ಮಾಡಿದ್ದಾರೆ. ದಾವಣಗೆರೆಯ ಬೂದಾಳು ರಸ್ತೆಯ ಬಾಬು ಜಗಜೀವನರಾವ್ ನಗರದಲ್ಲಿ ಘಟನೆ ನಡೆದಿದೆ. ನಿನ್ನೆ ರಾತ್ರಿ ಸುರಿದ ಮಳೆಗೆ ಮನೆಗಳೆಲ್ಲ ಜಲಾವೃತವಾಗಿವೆ. ಸ್ಮಾರ್ಟ್ ಸಿಟಿ ಅರ್ಧಂಬರ್ಧ ಕಾಮಗಾರಿಯಿಂದ ಅವಾಂತರ ಸೃಷ್ಟಿಯಾಗಿದ್ದು, ಮಳೆ ಬಂತು ಎಂದರೆ ಜೀವ ಕೈಯಲ್ಲಿ ಹಿಡಿದು ಜನ ಜೀವನ ನಡೆಬೇಕಿದೆ. ಇದನ್ನೂ ಓದಿ: ಪತಿ ಇಲ್ಲದ ಮೇಲೆ ಬದುಕಿ ಪ್ರಯೋಜನವಿಲ್ಲ – ಡೆತ್‍ನೋಟ್ ಬರೆದು ಮಕ್ಕಳೊಂದಿಗೆ ತಾಯಿ ಆತ್ಮಹತ್ಯೆ

ಸಾಕಷ್ಟು ಬಾರಿ ಮನವಿ ಸಲ್ಲಿಸಿದರೂ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಇದನ್ನು ಸರಿಪಡಿಸಲು ಆಸಕ್ತಿ ತೋರಿಲ್ಲ. ಇದೀಗ ಮಳೆ ಬಂದ ಪರಿಣಾಮ ಮನೆಗಳಿಗೆ ನೀರು ನುಗ್ಗಿದೆ. ಹೀಗಾಗಿ ಜನ ಸ್ಮಾರ್ಟ್ ಸಿಟಿ ಅಧಿಕಾರಿಗಳು, ಜನಪ್ರತಿನಿಧಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಲಬುರಗಿ ಜಿಲ್ಲೆಯಲ್ಲಿ ಸಹ ನಿನ್ನೆ ರಾತ್ರಿ ಬಿರುಗಾಳಿ ಸಹಿತ ಧಾರಾಕಾರ ಮಳೆ ಸುರಿದಿದೆ. ಜಿಲ್ಲೆಯ ಹಲವೆಡೆ ಅಪಾರ ಪ್ರಮಾಣದ ಬೆಳೆ ನಾಶವಾಗಿದೆ. ಕಬ್ಬು, ಬಾಳೆ ಸೇರಿದಂತೆ ವಿವಿಧ ಬೆಳೆಗಳು ನೆಲಕಚ್ಚಿವೆ. ಪ್ರವಾಹದ ಬಳಿಕ ಇದೀಗ ಮತ್ತೆ ರೈತರು ಸಂಕಷ್ಟದಲ್ಲಿ ಸಿಲುಕಿದ್ದಾರೆ. ಭಾರೀ ಮಳೆಯಿಂದಾಗಿ ಗಂಡೋರಿ ನಾಲೆಯ ಕೋಡಿ ಒಡೆದು ನೂರಾರು ಎಕರೆ ಈರುಳ್ಳಿ ನೀರುಪಾಲಾಗಿದೆ. ಕಲಬುರಗಿಯ ಅರಣಕಲ್ ಸುತ್ತಮುತ್ತಲ ಹೊಲಗಳಿಗೆ ಅಪಾರ ಪ್ರಮಾಣದ ನೀರು ನುಗ್ಗಿದೆ. ಇದನ್ನೂ ಓದಿ: ನಟ ವಿವೇಕ್‍ಗೆ ಉರುಳಾಗುತ್ತಾ ಸೌಜನ್ಯ ಜೊತೆಗಿನ ಲವ್?

ಭಾರೀ ಮಳೆ ಹೊಡೆತಕ್ಕೆ ಕಳಪೆ ನಾಲೆ ಒಡೆದು ಹೋಗಿದೆ. ಕಳಪೆ ಕಾಮಗಾರಿಯ ವಿರುದ್ಧ ಅಧಿಕಾರಿಗಳೊಂದಿಗೆ ರೈತರು ವಾಗ್ವಾದ ನಡೆಸಿದ್ದಾರೆ. ಲಕ್ಷಾಂತರ ರೂಪಾಯಿ ಈರುಳ್ಳಿ ಬೆಳೆ ಹಾನಿಗೆ ಹೊಣೆ ಯಾರು? ಕೂಡಲೇ ಪರಿಹಾರ ಒದಗಿಸುವಂತೆ ಅರಣಕಲ್ ರೈತರು ಆಗ್ರಹಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *